ಜೀವನ ಪಾಠಶಾಲೆ

ಪಶ್ಚಿಮಘಟ್ಟದ ಕಾಡುಗಳಲ್ಲಿ ನಡೆಯುತ್ತಲೇ ಕಣ್ಣೆದರು ಅವತರಿಸಿದ ಬೆಟ್ಟದ ತಪ್ಪಲು ಜೋಗುಳ ಹಾಡುತ್ತದೆ. ಮೈಮರೆತು ಹರಿಯುವ...
ಜೀವನ ಪಾಠಶಾಲೆ
Updated on: 

ಪಶ್ಚಿಮಘಟ್ಟದ ಕಾಡುಗಳಲ್ಲಿ ನಡೆಯುತ್ತಲೇ ಕಣ್ಣೆದರು ಅವತರಿಸಿದ ಬೆಟ್ಟದ ತಪ್ಪಲು ಜೋಗುಳ ಹಾಡುತ್ತದೆ. ಮೈಮರೆತು ಹರಿಯುವ ಆ ನದಿಯ ನೀರನ್ನು ಗುಟುಕಿ, ಕಾಡಿನ ಇನ್ನೊಂದು ದಿಕ್ಕಿಗಿರುವ ಮಣ್ಣಿನ ಮನೆಯಲ್ಲಿನ ಆ ವಯಸ್ಸಾದ ಮುದುಕಿಯನ್ನು ನೋಡಿದಾಗಲೆಲ್ಲಾ, ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಬರುವ ಯಾವುದೋ ಪಾತ್ರ ಜೀವ ಪಡೆಯುತ್ತದೆ. ಅವಳ ಬಿಳಿ ಮೈಯ ಗಂಡನನ್ನು ಕಂಡಾಗ 'ಬೆಟ್ಟದ ಜೀವ'ದ ಗೋಪಾಲಯ್ಯ ಇವರೇ ಇರಬೇಕು ಅಂತೆನ್ನಿಸುವಷ್ಟು ಮನಸ್ಸು ಆ ಮನುಷ್ಯನನ್ನು ತೂಕಕ್ಕೆ ಹಾಕುತ್ತದೆ.
ಹಾಗೇ ಸಾಗಿದರೆ ಕಾಲಿಗೆ ಸಿಗುವುದು ಮತ್ತಷ್ಟು ಕಥೆಗಳು. ಜಗತ್ತಲ್ಲಿ ಹೆಜ್ಜೆಹೆಜ್ಜೆಗೂ ಕತೆ ಇದೆ. ಅಚ್ಚರಿ ಇದೆ. ಅದನ್ನು ದಕ್ಕಿಸಿಕೊಳ್ಳಬೇಕಾದರೆ ಆ ರೋಮಾಂಚನವನ್ನು ಕಣ್ಣಾರೆ ಅನುಭವಿಸಬೇಕು. ಆಗ ರೂಪುಗೊಳ್ಳುವ ಕಥಾ ಪಾತ್ರಗಳು, ನೆಮ್ಮದಿಯೀಯುವ ಪ್ರಸಂಗಗಳು ಅಮೋಘ. ಘಟ್ಟದ ಅಂಚಿನ ದಾರಿಯಲ್ಲಿ ನುಸುಳಿ ಬರುವ ಬಸ್ಸಿನ ಡ್ರೈವರಣ್ಣನಿಗೆ ಮಲ್ಲಿಗೆ ಮಾರಿ, ಬದುಕಿನ ಸಂಭ್ರಮ ಪೋಣಿಸಿಕೊಳ್ಳುವ ಮುಗುದೆ ಬೇರಾರೂ ಆಗಿರಕ್ಕಿಲ್ಲ 'ಜುಗಾರಿ ಕ್ರಾಸ್‌'ನ ಹುಡುಗಿ ಬಿಟ್ಟರೆ. ನಗರದ ಬಿಸಿ ಬೇಗೆಯನ್ನೇ ಈ ವರೆಗೆ ನೋಡದೇ ಒಂಟಿಯಾಗಿಯೇ ಅಲೆಯುವ ಪೋರ, ಬುಟ್ಟಿ ಹೆಣೆಯೋದರಲ್ಲೇ ಧ್ಯಾನಸ್ಥಳಾಗುವ ಹಣ್ಣು ಮುದುಕಿ, ಕಾಡಗುಡಿ ದೇವರಿಗೆ ಶ್ರದ್ಧೆಯಿಂದ ಅಭಿಷೇಕ ಮಾಡುವ ಅರ್ಚಕ... ಎಲ್ಲರೊಳಗೂ ಒಂದೊಂದು ಕಾದಂಬರಿ.
ಕಥೆಯ ಗುಹೆಯೊಳಗೆ ಹೊಕ್ಕ ಲೇಖಕನಿಗೆ ಅಲ್ಲಿ ಯಾವ ಲೈಬ್ರರಿ ಬೇಡ. ಆ ಅಪರಿಚಿತ ಮುಖಗಳು ಸ್ನೇಹಿತರಂತೆ ಕೂತು ಅವನ ಲೇಖನಿಗೆ ತಮ್ಮ ಅನುಭವಗಳ ಇಂಕನ್ನು ತುಂಬುತ್ತವೆ. ಲೇಖಕ ಅವರ ಅಂತರಂಗದ ವೇದನೆಗಳಿಗೆ ಮುಖಾಮುಖಿಯಾಗಿ, ನಿಧಿ ದಕ್ಕಿದಂತಾಡಿ ರಾಶಿ ರಾಶಿ ಕಥೆ ದಕ್ಕಿದ್ದಕ್ಕೆ ಧನ್ಯೋಸ್ಮಿ ಎನ್ನುತ್ತಾನೆ.
ಲೇಖಕನಿಗೆ ಸಾಮಾನ್ಯರ ಅಂತರಾಳವನ್ನು ಹೊಕ್ಕುವ ಉತ್ಸಾಹ ಇರಲೇಬೇಕು. ಸಮುದ್ರ ತೀರದಲ್ಲಿ ಬಂಗಡೆ ಮೀನಿನ ಸಾರು ಮಾರುವ ಆ ಹೆಂಗಸು, ಗೂಡಂಗಡಿಯ ಬೆಂಚಿನ ಮೇಲೆ ಶಕ್ತಿಮೀರಿ 'ಶಕ್ತಿ ಬೀಡಿ' ಎಳೆಯುವ ಪ್ರಾಯದ ಗಂಡಸು, ಮಗ ಬಿಟ್ಟು ಹೋದ ನೋವನ್ನು ಎಲೆಅಡಿಕೆಯೊಂದಿಗೆ ನುಂಗುವ ಆ ಮುಪ್ಪಿನ ಜೀವ... ಇವರೆಲ್ಲರ ಎದೆ ಮೇಲೂ ಅಕ್ಷರಗಳು ಬಿದ್ದಿವೆ. ಕಥೆಗಾರ ಜೋಪಾನವಾಗಿ ಹೆಕ್ಕಬೇಕಷ್ಟೇ. ಇದೂ ಒಂದು ಕೃತಿಚೌರ್ಯವೇ.
ಜಗತ್ತು ಕೋಟಿ ಕಾದಂಬರಿಗಳ ಕೋಟೆ. ಕಣ್ಣು ಮಿಣುಕಿಸಿ ಬಿಡುವಾಗ ಒಂದೊಂದು ಕಥೆಯ ದಿಗ್ದರ್ಶನ. ಕವಿತೆಗಳ ನರ್ತನ. ಕೃಷ್ಣನ ಕೊಳಲಿನ ಹಾಡಿಗೆ ಕುಣಿದ ಗೋಪಿಕೆಯರ ಹಾಗೆ. ಕತೆಗಾರನಿಗೆ ಜಗತ್ತನ್ನು ಪ್ರೀತಿಸುವ ಗುಣವಿದ್ದರೆ ಇವೆಲ್ಲವೂ ಅವನ ಮೂರನೇ ಕಣ್ಣಿಗೆ ಕಾಣಲು ಸಾಧ್ಯ. ಮುಂದೆಲ್ಲವೂ ಅವನ ಲೇಖನಿಯಿಂದ ವಿಸ್ಮಯವಾಗಿ ಹರಿಯುತ್ತದೆ. ಕುವೆಂಪು, ಮಾಸ್ತಿ, ಕಾರಂತರಿಗೆ ಇಂಥ ಪಾತ್ರಧಾರಿಗಳೆಲ್ಲ ಚಿನ್ನದಂತೆ ಕಂಡದ್ದು ಇದೇ ಕಾರಣಕ್ಕೆ. ಕಾರಂತರಂತೂ ನಿಜ ಬದುಕಿನ ಪಾಠಶಾಲೆಯಲ್ಲಿ ಸಾಯುವವರೆಗೂ ಕಲಿತರು. ಸಾಮಾನ್ಯನ ಕನಸನ್ನು ಅರಿಯಲು ಹಂಬಲಿಸಿದರು. ಸುಮ್ಮನೆ ಕಲ್ಪನೆಯಲ್ಲೇ ಕಾಡನ್ನು ಕಟ್ಟಬಹುದಿತ್ತು. ಆದರೆ, ಕಾರಂತರು ಕಾಡು ಸುತ್ತುತ್ತಾ ನೀರ ತೊರೆಗಳಲ್ಲಿ ಕರಗಿದರು. ಗೋಪಾಲಯ್ಯನವರಂಥ ನೂರು ಜನರನ್ನು ಮಾತಾಡಿಸಿದರು. ಬರೀ ಅಕ್ಷರಗಳಲ್ಲೇ ಜಾರದೇ, ವಾಸ್ತವದ ಜೀವನ ಪಾಠಶಾಲೆಯಲ್ಲಿ ಕಲಿಯುತ್ತಾ ಬಲಿತರು. ಸಮುದ್ರವನ್ನೇ ನೋಡದೇ ಸಮುದ್ರ ಹಾಗೇ ಹೀಗೆ ಅಂತೆಲ್ಲ ಹೇಳುವುದಲ್ಲ. ಸಮುದ್ರಕ್ಕೇ ಇಳಿಯಬೇಕು ಎನ್ನುವ ತತ್ವ ಕಾರಂತರದ್ದಾಗಿತ್ತು. ಅದಕ್ಕೆ ಇವತ್ತೂ ಅವರ ಕಾದಂಬರಿ ಓದುವಾಗ ಅದು ಕಟ್ಟು ಕತೆಯಂತೆ ಭಾಸವಾಗದೇ,ನಮ್ಮ ಸುತ್ತಲಿನ ಕತೆಯಂತೆಯೇ ತೋರುತ್ತದೆ. ಅವರು ಕಾಡುಜಾಡುಗಳಲ್ಲಿ ಸುತ್ತಿರದೇ ಇದ್ದರೆ ಅವರಿಗೆ 'ಸರಸಮ್ಮನ ಸಮಾಧಿ' ಸಿಕ್ಕುತ್ತಿತ್ತಾ? ಆ ಬೆಳ್ಯಕ್ಕನ ಪ್ರೇತ ಸಿಗುತ್ತಿತ್ತಾ? ಗೊರೂರು ರಾಮಸ್ವಾಮಿ ಅಯ್ಯಂಗಾರರು ಹೇಮಾವತಿಯನ್ನೆ ನೋಡದೇ ಹೇಮಾವತಿ ಬರೆದರಾ? 'ಅತ್ತಾರೆ ಅತ್ತು ಬಿಡು ಹೊನಲು ಬರಲಿ' ಅಂತ ಕವಿ ಬೇಂದ್ರೆಯೊಳಗ ಕವಿತಿ ಹುಟ್ಟಿದ್ದು, ಅವಳ ತುಟಿಯಂಚಲ್ಲಿ ಇನ್ನೇನು ಜಾರಲಿದ್ದ ಬೇಸರ ನೋಡಿ ತಾನೇ? 'ನಾನು ಬಡವಿ ಆತ ಬಡವ' ಎಂದದ್ದು ಬಡತನದ ಅನ್ನ ನುಂಗಿಯೇ ಅಲ್ಲವಾ? ತೇಜಸ್ವಿಗೆ ಯಂಕ್ಟ, ಮಂದಣ್ಣ, ಕಿವಿ... ಎಲ್ಲರೂ ನಿಜ ಜೀವನದಲ್ಲಿ ಮುಖಾಮುಖಿಯಾಗಿದ್ದರಿಂದ ತಾನೇ 'ಕರ್ವಾಲೋ' ಸಾಧ್ಯವಾಗಿದ್ದು, 'ಪರಿಸರದ ಕತೆ' ಮೂಡಿಬಂದಿದ್ದು? ಅವರೂ ಕತೆಯಾಗಿ ಬೆಳೆದದ್ದು.
ಇವರೆಲ್ಲರ ಹಾಗೆ ಬರಹಗಾರನಿಗೆ ಬದುಕೇ ಪಾಠವಾದಾಗ, ತನ್ನೆದುರು ನಡೆಯುವ ಸಾಮಾನ್ಯರ ಮದುವೆಯೂ, ದುಗುಡವೂ, ಜಂಜಡವೂ ಕತೆಯಾದಾಗ ಅದರ ವರ್ಚಸ್ಸೇ ಬೇರೆ. ಅನುಭೂತಿಯೇ ಬೇರೆ. ಸಾಹಿತಿಯಾದವನು ಸಾಮಾನ್ಯನೊಂದಿಗೇ ಸಾಮಾನ್ಯನಾಗುತ್ತಲೇ ಹೋದಾಗ, ಬದುಕಿನ ನೈಜ ಪಾಠಶಾಲೆಯಲ್ಲಿ ಕತೆಗಾರ ಕಲಿತಾಗ, ಅವನ ಕತೆಯೂ ನೈಜವಾಗಿ ಬಲಿತುಕೊಳ್ಳುತ್ತದೆ. ಸಾಹಿತಿಗೆ ಸಾಮಾನ್ಯ ಜನರ ಪಾಡೇ ಹಾಡಾಗಬೇಕು, ಅವನು ಸಾಮಾನ್ಯನೊಂದಿಗೆ ಬೆರೆಯಬೇಕು... ಹಾಲು- ಸಕ್ಕರೆಯಂತೆ. ಆಗಲೇ ಹಾಲಿಗೆ ಸಕ್ಕರೆಯ ರುಚಿಯೂ, ಸಕ್ಕರೆಗೆ ಹಾಲಿನ ರುಚಿಯೂ ದಕ್ಕುತ್ತದೆ. ಆಗ ಕತೆ ಸಿಕ್ಕುತ್ತದೆ. ಕಷ್ಟ ಕತೆಯಾಗುತ್ತೆ. ಮಾತು ಗೀತೆಯಾಗುತ್ತದೆ. ಒಲುಮೆ ಕವನವಾಗುತ್ತದೆ. ಸುಖ ರೂಪಕವಾಗುತ್ತದೆ.
'ಜೀವನನ್ನೇ ಸೀತಾನದಿಯ ಪ್ರವಾಹಕ್ಕೆ ಹೋಲಿಸಿ, ಅದರ ಮಿತದೂರದ ಯಾತ್ರೆಯನ್ನು ಗಮನಿಸಿದ್ದಾದರೂ- ಬಾಳಿನ ಬೆಡಗು, ಭವ್ಯತೆ, ರೌದ್ರ, ಕ್ಲೇಶ ಮೊದಲಾದ ಅಸಂಖ್ಯ ಆಘಾತಗಳ ಉಪಮೆ ಒಂದೊಂದಾಗಿ ನಮ್ಮ ಕಣ್ಣಿಗೆ ಹೊಳೆದೀತು...' ಎನ್ನುವ ಕಾರಂತರ ಮಾತು ಈಗ ನೆನಪಾಗಿದ್ದು ಇದಕ್ಕೇ! 

- ಪ್ರಸಾದ್ ಶೆಣೈ ಆರ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com