ಹಂಸಲೇಖ ಇದ್ದಲ್ಲಿ ಪಂಚ್ಗಳಿಗೇನೂ ಕೊರತೆ ಇರಲ್ಲ. ಅದು ಹಾಡಲ್ಲೂ ಹೌದು, ಬದುಕಲ್ಲೂ ಹೌದು. ಈ ಪಂಚ್ ಅವರ ಮಾತುಕತೆಯಲ್ಲೂ ಬೆರೆತಿದೆ ಎನ್ನುವುದು ಅವರೊಂದಿಗೆ ಕೆಲಸ ಮಾಡಿದವರ ಅನುಭವದ ಮಾತು. ಅವತ್ತೆಂದೋ ನಡೆದ ಘಟನೆ. ಹಂಸಲೇಖ, ಎ.ಎಸ್. ಮೂರ್ತಿ ಅವರೊಂದಿಗೆ ಗಾಂಧಿನಗರದ ಹೋಟೆಲೊಂದರ ಮುಂದೆ ನಿಂತು ಹರಟುತ್ತಿರುವುದನ್ನು ಸಂಗೀತ ನಿರ್ದೇಶಕ ವಿ. ಮನೋಹರ್ ದೂರದಿಂದಲೇ ಗಮನಿಸಿದರು. ಏನೋ ಗುಟ್ಟಾಗಿ ಮಾತಾಡ್ತಿದ್ದಾರೆ, ಮಧ್ಯ ಮೂಗು ತೂರಿಸುವುದ್ಯಾಕೆ ಎಂದುಕೊಂಡು ಅವರ ಬಳಿ ಹೋಗದೆ ಮನೋಹರ್ ಪಕ್ಕದಲ್ಲೇ ಸಾಗಿದರಂತೆ. ಕೂಡಲೇ ಹಂಸಲೇಖ, ಮನೋಹರ್ ಅವರನ್ನು ಕರೆದು 'ಈ ಕಡೆ ಬಾರಯ್ಯ ಪರ್ವಾಗಿಲ್ಲ' ಅಂತ ಹೇಳಿದರು. ಅದಕ್ಕೆ ಮನೋಹರ್ 'ಇರ್ಲಿ ಬಿಡಿ ಸಾರ್, ನಿಮ್ಮಿಬ್ಬರ ಪರ್ಸನಲ್ ಏನಿರುತ್ತೋ?' ಎಂದಾಗ ಹಂಸಲೇಖ ಅವರ ಮರು ಉತ್ತರ ಹೀಗಿತ್ತು, 'ನಮ್ಮಿಬ್ಬರ ಪರ್ಸ್ನಲ್ಲಿ ಏನೂ ಇಲ್ಲ. ಬಾ'!
- ಸಂಕೇತ್