

ಗೌತಮ ಮಹರ್ಷಿಗಳ ಪತ್ನಿ ಅಹಲ್ಯಾ ಬ್ರಹ್ಮನ ಮಾನಸ ಪುತ್ರಿ ಎಂದು ಒಂದು ಅಭಿಪ್ರಾಯ. ಆಕೆ ಲೋಕೋತ್ತರ ಸುಂದರಿಯಾಗಿದ್ದಳು. ಹಲಾ ಎಂದರೆ ಕುರೂಪವೆಂದು ಅರ್ಥ. ಅವಳ ಸೌಂದರ್ಯದಲ್ಲಿ ಯಾವ ದೋಷವೂ ಇಲ್ಲದ್ದರಿಂದ ಬ್ರಹ್ಮ ಅವಳನ್ನು ಅಹಲ್ಯಾ ಎಂದು ಕರೆದನಂತೆ. ಅವಳ ರೂಪ ಲಾವಣ್ಯಗಳ ಬಗ್ಗೆ ಕೇಳಿದ ದೇವೇಂದ್ರನಿಗೆ ಅವಳನ್ನು ವರಿಸಬೇಕೆಂಬ ಹಂಬಲವಿತ್ತು. ಆದರೆ ಬ್ರಹ್ಮ, ಶುದ್ಧ ಚಾರಿತ್ರರೆಂದು ಪ್ರಸಿದ್ಧರಾಗಿದ್ದ ಗೌತಮ ಋಷಿಗಳಿಗೆ ಅಹಲ್ಯೆಯನ್ನು ವಿವಾಹ ಮಾಡಿಕೊಟ್ಟನು. ಇದರಿಂದ ಇಂದ್ರನಿಗೆ ತುಂಬಾ ನಿರಾಸೆ, ಅಸೂಯೆ ಉಂಟಾಯಿತು. ಅಹಲ್ಯಾ ಮಹಾಪತಿವ್ರತೆಯಾಗಿ ಗಂಡನ ಸೇವೆ ಮಾಡುತ್ತಿದ್ದಳು. ಇಂದ್ರನಿಗೆ ಅಹಲ್ಯೆಯನ್ನು ಮರೆಯಲು ಸಾಧ್ಯವಾಗಲಿಲ್ಲ.
ಒಂದು ದಿನ ಆಶ್ರಮದಲ್ಲಿ ಗೌತಮರು ಇಲ್ಲದ ಸಮಯದಲ್ಲಿ, ಗೌತಮರ ರೂಪಧಾರಣೆ ಮಾಡಿ ಆಶ್ರಮಕ್ಕೆ ಬಂದನು. ಅಹಲ್ಯೆಗೆ, ಬಂದಿರುವುದು ತನ್ನ ಪತಿಯಲ್ಲ, ದೇವೇಂದ್ರ ಎಂದು ಗೊತ್ತಾಯಿತು. ಒಂದು ಕ್ಷಣ ಅವಳಿಗೂ ಇಂದ್ರನ ಮೇಲೆ ಮೋಹ ಉಂಟಾಯಿತು. ಇಂದ್ರನಿಗೆ ಅವಳ ಮನಸ್ಥಿತಿ ಅರ್ಥವಾಗಿ, ಅವಳ ಬಳಿಗೆ ಸಾರಿ, 'ಸುಂದರಿ, ನಾನು ನಿನ್ನಲ್ಲಿ ಅನುರಕ್ತನಾಗಿ ಬಂದಿರುತ್ತೇನೆ. ದಯೆಯಿಟ್ಟು ನನಗೆ ನಿನ್ನ ಪ್ರೀತಿಯನ್ನು ತೋರು" ಎಂದು ಕೇಳಿಕೊಂಡನು. ಅಹಲ್ಯಾ ತನ್ನ ಸಂಯಮ ಶಕ್ತಿಯನ್ನು ಪೂರ್ತಿ ಕಳೆದುಕೊಂಡಿದ್ದು, ಇಂದ್ರನ ಅಪೇಕ್ಷೆಯಂತೆ ನಡೆದುಕೊಂಡಳು.
ಕೆಲವೇ ಕ್ಷಣಗಳಲ್ಲಿ ಆಶ್ರಮಕ್ಕೆ ಹಿಂದಿರುಗಿದ ಗೌತಮರು, ಅಪರಾಧಿಗಳಂತೆ ತಲೆತಗ್ಗಿಸಿ ನಿಂತಿದ್ದ ಅಹಲ್ಯ ಇಂದ್ರನನ್ನು ನೋಡಿದರು. ವಿಷಯ ಏನೆಂದು ಅವರಿಗೆ ತಿಳಿಯಿತು. ಕೋಪಾವಿಷ್ಟರಾಗಿ ತಕ್ಷಣ ಇಬ್ಬರನ್ನೂ ಶಪಿಸಿಬಿಟ್ಟರು. "ನಿನಗೆ ಮೈಯೆಲ್ಲಾ ಕಣ್ಣಾಗಲಿ' ಎಂದು ಇಂದ್ರನನ್ನು ಶಪಿಸಿದರು. ಅಹಲ್ಯೆಗೆ, ನೀನು ನಿದ್ರೆ ಆಹಾರಗಳಿಲ್ಲದೆ ಯಾರ ಕಣ್ಣಿಗೂ ಗೋಚರಿಸದೇ ಅಲೆಯುತ್ತಿರು" ಎಂದು ಶಾಪ ಕೊಟ್ಟರು. ಅಹಲ್ಯಾ ತನ್ನ ತಪ್ಪನ್ನು ಒಪ್ಪಿಕೊಂಡು, ಪತಿಯ ಕ್ಷಮೆ ಕೇಳಿ, ಶಿಕ್ಷೆಯನ್ನು ಅನುಭವಿಸುವುದಾಗಿ ಮಾತು ಕೊಟ್ಟಳು. ಗೌತಮರು ಸ್ವಲ್ಪ ಶಾಂತರಾಗಿ 'ನೀನು ಈ ಆಶ್ರಮದಲ್ಲಿಯೇ ಇದ್ದು ಅಗೋಚರಳಾಗಿರು. ಮುಂದೆ ದಶರಥ ರಾಜನ ಮಗ ರಾಮ ಈ ಆಶ್ರಮದಲ್ಲಿ ಕಾಲಿಟ್ಟ ಕೂಡಲೇ ನಿನ್ನ ಶಾಪ ವಿಮೋಚನೆಯಾಗಿ ಮುನ್ನಿನ ರೂಪ ಬರುತ್ತದೆ ಎಂದು ಹೇಳಿ ತಪಸ್ಸಿಗೆ ಹೊರಟು ಹೋದರು.
ಎಷ್ಟೋ ವರ್ಷಗಳ ನಂತರ ರಾಮ ಲಕ್ಷ್ಮಣರು ವಿಶ್ವಾಮಿತ್ರ ಋಷಿಗಳೊಡನೆ ಮಿಥಿಲೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಗೌತಮರ ಆಶ್ರಮವನ್ನು ಕಂಡು, ಋಷಿಗಳಿಂದ ಅಹಲ್ಯೆಯ ಕಥೆಯನ್ನು ಕೇಳಿ ತುಂಬಾ ವ್ಯಥೆ ಪಟ್ಟರು. 'ರಾಮಾ, ನಿನ್ನಿಂದಲೇ ಅಹಲ್ಯೆಗೆ ಶಾಪ ವಿಮೋಚನೆಯಾಗಬೇಕು' ಎಂದು ವಿಶ್ವಾಮಿತ್ರರು ಹೇಳಿದಾಗ, ರಾಮ ತ್ವರೆಯಿಂದ ಆಶ್ರಮವನ್ನು ಪ್ರವೇಶಿಸಿದನು. ಅದುವರೆಗೆ ಯಾರ ಕಣ್ಣಿಗೂ ಗೋಚರಿಸದಿದ್ದ ಅಹಲ್ಯಾ ಕೂಡಲೇ ರಾಮನ ಕಣ್ಣಿಗೆ ಬಿದ್ದಳು. ಅವಳಿಗೆ ಮುಂಚಿನ ರೂಪ ಬಂದಿತು. ಪ್ರಾಯಶ್ಚಿತ್ತದ ತಪಶ್ಚರ್ಯದಿಂದ ಅಹಲ್ಯಾ ಇನ್ನೂ ಹೆಚ್ಚಿನ ತೇಜಸ್ಸಿನಿಂದ ಬೆಳಗುತ್ತಿದ್ದಳು. ರಾಮಲಕ್ಷ್ಮಣರು ಅವಳ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ತನ್ನ ಶಾಪ ವಿಮೋಚನೆಗೆ ಕಾರಣನಾದ ರಾಮನನ್ನು ಎಷ್ಟು ಕೊಂಡಾಡಿದರೂ ಅವಳಿಗೆ ಸಾಲದಾಯಿತು. ಆ ವೇಳೆಗೆ ವಿಷಯ ತಿಳಿದು ಗೌತಮರೂ ಅಲ್ಲಿಗೆ ಬಂದರು. ಧಾವಿಸಿ ಬಂದು ತಮ್ಮ ಕಾಲಿಗೆರಗಿದ ಪತ್ನಿಯನ್ನು ಸಮಯೋಚಿತವಾಗಿ ಸಂತೈಸಿದರು. ಅಹಲ್ಯಾ ಗೌತಮರ ಅಪೂರ್ವ ಸಂಗಮವನ್ನು ಕಂಡು ಎಲ್ಲರಿಗೂ ಮಹದಾನಂದವಾಯಿತು. ಋಷಿ ದಂಪತಿ ರಾಮಲಕ್ಷ್ಮಣರನ್ನೂ ವಿಶ್ವಾಮಿತ್ರರನ್ನು ಆದರದಿಂದ ಸತ್ಕರಿಸಿ ಬೀಳ್ಕೊಟ್ಟರು.
- ಬ್ರಹ್ಮಾಣಿ ಪಿ. ರಾವ್