

ಧಾರವಾಡ, 1973.
ಆಯೀ (ನನ್ನ ತಾಯಿ), ಬಾಪ್ಪಾ (ತಂದೆ) ಹಾಗೂ ನಾನು ಊಟಮಾಡುತ್ತಿದ್ದೆವು. ನನ್ನ ಚಿತ್ರ 'ವಂಶವೃಕ್ಷ' ಆಗಲೇ ತುಂಬಾ ಯಶಸ್ವಿಯಾಗಿ ಓಡಿ ಹಲವಾರು ಬಹುಮಾನಗಳನ್ನು ಗಳಿಸಿತ್ತು. 'ಕಾಡು' ಚಿತ್ರ ಮುಗಿಯುತ್ತ ಬಂದಿತ್ತು. ನಾನು ಪುಣೆಯ ಫಿಲ್ಮ್ ಹಾಗೂ ಟೆಲಿವಿಜನ್ ಸಂಸ್ಥಾನಕ್ಕೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಒಟ್ಟು ವಾತಾವರಣ ಆತ್ಮಾಭಿನಂದನೆಯಿಂದ ಬೀಗುತ್ತಿತ್ತು.
ಒಮ್ಮೆಲೆ ಆಯೀ ಬಾಪ್ಪಾನತ್ತ ನೋಡಿ, 'ಮತ್ತೂ ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು' ಎಂದಳು.
ಈ ವಿಧಾನ ಅನಪೇಕ್ಷಿತವಾಗಿ ಬಂದರೂ ಬಾಪ್ಪಾಗೆ ತಕ್ಷಣ ಅದರ ಮೊನೆ ಚುಚ್ಚಿತು. ಮುಖ ಕೆಂಪೇರಿ, 'ಅಂ... ಹೂಂ... ಅದೆಲ್ಲ ನಿನ್ನ ಐಡಿಯಾ- ನನ್ನದಲ್ಲ. ಈಗ ಯಾಕೆ ಅದೆಲ್ಲ?' ಎಂದು ಊಟದ ತಟ್ಟೆಯಲ್ಲಿ ಮುಖ ಮರೆಮಾಡಿದ.
ನನ್ನ ಕತೂಹಲ ಕೆರಳಿತು. ಕೆದಕಿ ಕೇಳಿದೆ. ಆಗ ಆಯೀ ಹೇಳಿದಳು,
'ನೀನು ಹೊಟ್ಟೆಯಲ್ಲಿದ್ದಾಗ, ನನಗೆ ಇನ್ನು ಮಕ್ಕಳು ಸಾಕು ಅನಿಸಿತು. ಮೂರು ಮಕ್ಕಳಿದ್ದಾರಲ್ಲ, ಇನ್ನೂ ಯಾಕೆ ಎಂದೆ. ಅದಕ್ಕಾಗಿ ಪುಣೆಯಲ್ಲಿಯ ಡಾ. ಮಧುಮಾಲತಿ ಗುಣೆ ಎಂಬ ಡಾಕ್ಟರ ಕ್ಲಿನಿಕ್ಕಿಗೆ ಹೋದೆವು.'
'ಮುಂದೆ..?'
'ಆಕೆ ಬರತೇನೆ ಎಂದವಳು ಬರಲೇ ಇಲ್ಲ. ಸುಮಾರು ಒಂದು ತಾಸು ಹಾದಿ ಕಾಯ್ದು ಬೇಸತ್ತು ಬಂದುಬಿಟ್ಟೆವು.'
'ಆಮೇಲೆ..?'
'ಆಮೇಲೇನು ಹೊರಳಿ ಆ ಕಡೆಗೆ ಹೋಗಲೇ ಇಲ್ಲ'.
ನಾನು ಗರಬಡಿದವನಂತಾದೆ. ನನಗಾಗ ಮೂವತ್ತೈದು. ಆದರೂ ನಾನಿಲ್ಲದೆ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ನಾನು ಮಂಕಾಗಿ ಕೂತೆ. ನಾನಿಲ್ಲದ್ದು ಹೇಗಿರುತ್ತಿತ್ತು ಕೆಲ ಹೊತ್ತು ಎಲ್ಲಿ ಇದ್ದೇನೆ ಎಂಬುದೇ ಎಚ್ಚರವಿಲ್ಲದೆ ಆ ಇರವಳಿಯನ್ನೇ ದಿಟ್ಟಿಸುತ್ತಾ ಕೂತೆ. ಮರುಗಳಿಗೆಗೆ ಇನ್ನೊಂದು ವಿಚಾರ ಹೊಳೆದು ದಿಗ್ಭ್ರಾಂತನಾಗಿ ಕೇಳಿದೆ.
'ಹಾಗಾದರೆ ತಂಗಿ- ಲೀನಾ- ಆಕೆಯನ್ನು ಹೇಗೆ-?'
ಆಯೀ ಅರೆನಾಚುತ್ತ, 'ಅಯ್ಯೋ ಆ ವರೆಗೆ ನಾವು ಆ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆವು' ಎಂದು ಖೊಳ್ಳನೆ ನಕ್ಕಳು.
ಬಾಪ್ಪಾ ತಾಟಿನೊಳಗಿಂದ ದೃಷ್ಟಿಯನ್ನೇ ಎತ್ತಿರಲಿಲ್ಲ.
ಅಂದು ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ, ಈ ಆತ್ಮ-ಕತೆಗಳು ಮಾತ್ರವಲ್ಲ, ಇದರ ಉತ್ತಮ ಪುರುಷನಾದ ನಾನೇ ಇರುತ್ತಿರಲಿಲ್ಲ.
ಆದ್ದರಿಂದ ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಆ ಡಾ. ಮಧುಮಾಲತಿ ಗುಣೆಯ ನೆನಪಿಗೆ ಈ ಆತ್ಮ-ಕತೆಗಳನ್ನು ಅರ್ಪಿಸುತ್ತಿದ್ದೇನೆ.
ಗಿರೀಶ ಕಾರ್ನಾಡ
ಬೆಂಗಳೂರು
19 ಮೇ, 2011