ಹೇಗಿದ್ದಿಯೋ? ಎಷ್ಟು ದಿನಗಳಾದವೋ ನಿನಗೊಂದು ಹಾಯ್ ಹೇಳಿ? ದಿನಗಳೇಕೆ, ನಿನ್ನ ಹತ್ತಿರ ಮಾತನಾಡಿದೇ, ಜಗಳವಾಡದೇ, ಹುಸಿಮನಸು ತೋರದೇ, ಲಲ್ಲಗರೆಯದೇ, ನಿನ್ನ ಗೋಳು ಹೊಯ್ದುಕೊಳ್ಳದೇ ತಿಂಗಳುಗಳೇ ಕಳೆದು ಹೋದವಲ್ಲಾ? ಎಷ್ಟು ಮಿಸ್ ಮಾಡ್ಕೊಳ್ತಿದೀನಿ ನಿನ್ನ ಗೊತ್ತಾ? ಎಲ್ಲವೂ ನೀನೇ ಎಂದು ನನ್ನನ್ನು ನಾನೇ ಕಳೆದುಕೊಂಡಿರುವಾಗ ನಿನ್ನ ಹತ್ತಿರ ಒಂದು ಮಾತನ್ನಾದರೂ ಆಡದೇ ಹೇಗೋ ಇರಲಿ?
ಅದೇಕೋ ನಿನಗೆ ನನ್ನ ಮೇಲೇ ಇಷ್ಟು ಮುನಿಸು? ಒಂದು ಫಾರ್ ವರ್ಡ್ ಮೆಸೇಜ್ ಸಹ ಕಳಿಸದೇ ಇರುವಷ್ಟು. ಹೋಗಲಿ, ನಾನಾಗಿಯೇ ನಿನಗೆ ಮೆಸೇಜ್ ಅಥವಾ ಕಾಲ್ ಮಾಡಿದರೂ ಅದಕ್ಕೆ ರೆಸ್ಪಾನ್ಸ್ ಸಹ ನೀಡದಿರುವಷ್ಟು! ಹೃದಯದಲ್ಲಿ ಸುಪ್ತವಾಗಿ ಹರಿಯುತ್ತಿರುವ ಒಲವೆಂಬ ಪುಟ್ಟ ಝರಿಗೆ ಅಡ್ಡಲಾಗಿ ತಾಳ್ಮೆಯೆಂಬ ಅಣೆಕಟ್ಟನ್ನು ಬಲವಂತವಾಗಿ ಕಟ್ಟಿ, ನನ್ನ ಪ್ರೇಮದ ಬಾಯಾರಿಕೆಯ ತೀವ್ರತೆ ಎಷ್ಟು ದಿನಗಳದ್ದೆಂದು ಪರೀಕ್ಷಿಸುತ್ತಿರುವೆಯಾ ಹುಡುಗಾ? ಊಹೂಂ. ನೀನು ಯಾವ ಥರದ ಕಠಿಣ ಪರೀಕ್ಷೆ ನೀಡಿದರೂ ಅದರಲ್ಲಿ ನಾನು ಸೋಲುವ ಪ್ರಶ್ನೆಯೇ ಇಲ್ಲ. ನಿನ್ನ ಮೇಲಿನ ಈ ಹುಚ್ಚು ಪ್ರೀತಿಯೇ ನಿನ್ನ ಎಲ್ಲಾ ಪರೀಕ್ಷೆಗಳನ್ನು ಜಯಿಸುವ ಶಕ್ತಿ ನೀಡುತ್ತದೆ. ಕೊನೆಯಲ್ಲಿ ನಿನ್ನ ತಾಳ್ಮೆಯೆಂಬ ಅಣೆಕಟ್ಟೆಯೇ ನನ್ನ ಪ್ರೀತಿಯ ಮುಂದೆ ಕುಸಿದು ಬೀಳುತ್ತದೆಯಷ್ಟೆ.
ಯಾವತ್ತೂ ಕೇಳ್ತಾ ಇರ್ತಿಯಲ್ಲ "ವೈ ಡು ಯು ಲವ್ ಮಿ?" ಅಂತಾ. ಅದಕ್ಕೆ ಉತ್ತರವನ್ನು ಇವತ್ತು ಹೇಳ್ತೀನಿ ಕೇಳು. ನಿನ್ನಂಥ ಇನ್ನೊಬ್ಬ ಹುಡುಗನನ್ನು ನಾನು ನೋಡೇ ಇಲ್ಲ ಕಣೋ. ನಿನ್ನ ಆ ಪ್ರೀತಿ, ಸಹನೆ, ಮಮತೆ, ಕರುಣೆ, ಬುದ್ದಿವಂತಿಕೆ, ಪ್ರಾಮಾಣಿಕತೆ, ಮುಗ್ಧತೆ, ವಿಧೇಯತೆ, ಸಭ್ಯತೆ, ಸತ್ಯಸಂಧತೆ- ಇಷ್ಟೆಲ್ಲಾ ಚೆನ್ನದಂಥ ಗುಣಗಳನ್ನು ಬೇರೆ ಯಾವ ಹುಡುಗನಲ್ಲೂ ನಾನು ಕಂಡಿಲ್ಲ ಕಣೋ. ನಿನ್ನನ್ನು ಪ್ರೀತಿಸಲು ಎಷ್ಟೆಲ್ಲಾ ಕಾರಣಗಳಿವೆ ನೋಡು. ಹೀಗಿರುವಾಗ ಪ್ರೀತಿಯಲ್ಲಿ ಬೀಳದೇ ಹೇಗೋ ಇರಲಿ? ಹೃದಯದ ಪೀಠದಲ್ಲಿ ನಿನ್ನನ್ನು ಪ್ರತಿಷ್ಠಾಪಿಸಿ, ಮನಸ್ಸೆಂಬ ಬೀದಿಯಲ್ಲಿ ಒಲವಿನ ತೇರನ್ನು ಯಾವತ್ತೋ ಎಳೆದಿರುವೆ ನಾನು. ನಿನ್ನ ಹೊರತು ಈ ಪೀಠದಲ್ಲಿ ಬೇರೆ ಯಾರಿಗೂ ಜಾಗವಿಲ್ಲ. ಸುಂದರವಾದ ಹೂವೊಂದು ಕಂಡರೆ ದುಂಬಿಯು ಸಹಜವಾಗಿಯೇ ಆಕರ್ಷಿತವಾಗುತ್ತದೆ. ನನ್ನ ಬಾಳ ತೋಟದಲ್ಲಿ ಅರಳಿ ನಿಂತಹ ಅಮೂಲ್ಯ ಪುಷ್ಪ ನೀನು. ನಿನ್ನನ್ನು ಪ್ರೀತಿಸಬೇಡ ಎಂದು ನನ್ನ ಮನಸ್ಸನ್ನು ತಡೆಯಲು ಸಾಧ್ಯವೇನೋ ಮುದ್ದು?
ಕೊನೆಯದಾಗಿ ಒಂದು ಮಾತನ್ನು ಹೇಳಲಾ? ನನ್ನನ್ನು ಬಹಳ ಕಾಯಿಸಬೇಡ ಕಣೋ. ಯಾಕೆ ಗೊತ್ತಾ? ನೀನು ನನ್ನನ್ನು ಬಹಳ ಕಾಯಿಸಿದಷ್ಟೂ ಸಹ ಶುಕ್ಲಪಕ್ಷದ ಚಂದಿರನಂತೆ ನಿನ್ನ ಮೇಲಿನ ನನ್ನ ಪ್ರೀತಿ ವೃದ್ಧಿಯಾಗುತ್ತಲೇ ಹೋಗುತ್ತದೆ. ನನ್ನ ಪ್ರೇಮದ ಆಗಸದಲ್ಲಿ ಕೃಷ್ಣಪಕ್ಷವೆಂಬುದೇ ಇಲ್ಲ. ನಿನ್ನ ಒಲವಿನಿಂದ ನನ್ನ ಬಾಳಲ್ಲಿ ಸಂಪೂರ್ಣ ಬೆಳದಿಂಗಳು ಚೆಲ್ಲುವವರೆಗೂ ನನ್ನ ಪ್ರೀತಿಯೆಂಬ ಚಂದಿರ ದೊಡ್ಡದಾಗುತ್ತಲೇ ಇರುತ್ತಾನೆ. ಆ ಸುಂದರ ಹುಣ್ಣಿಮೆಯನ್ನು ನನ್ನ ಬದುಕಿನಲ್ಲಿ ಬೇಗನೆ ತರುವೆಯಂಬ ಭರವಸೆಯೊಂದಿಗೆ.
ಈ ಪತ್ರ ಮುಗಿಸಲಾ?
ಎಂದೆಂದೂ ನಿನ್ನ
-ಲಹರಿ.