

ಗುಡ್ಡಬೆಟ್ಟಗಳ ಮೂಲಕ ಏಳು ದಿನ ನಡೆದರೆ ನೀವು ಬಾಸಿಸ್ ನಗರಕ್ಕೆ ಬರುತ್ತೀರಿ. ನೀವು ಆ ನಗರವನ್ನು ಕಾಣಲಾರಿರಿ, ಆದರೂ ಅಲ್ಲಿಗೇ ಬಂದಿದ್ದೀರಿ. ಅಲ್ಲಿ ನೆಲದಿಂದ ಮೋಡಗಳವರೆಗೆ ಚಾಚಿರುವ ತೆಳ್ಳನೆಯ ಮೆಟ್ಟಿಲುಬಳ್ಳಿಗಳು ಆ ನಗರವನ್ನು ಆಧರಿಸಿವೆ. ಅವುಗಳನ್ನು ನೀವು ಏಣಿಗಳ ಸಹಾಯದಿಂದ ಏರಬಹುದು. ಅಲ್ಲಿನ ನಿವಾಸಿಗಳು ಭೂಮಿಯ ಮೇಲೆ ಬರುವುದು ಕಡಿಮೆ. ಅವರಿಗೆ ಬೇಕಾದ್ದೆಲ್ಲವೂ ಅಲ್ಲಿದೆ, ಹೀಗಾಗಿ ಅವರು ಇಲ್ಲಿಗೆ ಇಳಿಯಬೇಕಾಗಿಲ್ಲ. ಅಲ್ಲಿರುವ ಯಾವುದೂ ನೆಲವನ್ನು ಸ್ಪರ್ಶಿಸುವುದಿಲ್ಲ, ನಗರವನ್ನು ಆಧರಿಸಿರುವ ಆ ಕಾಲುಗಳನ್ನು ಬಿಟ್ಟರೆ. ಬಿಸಿಲು ಬೀಳುವ ದಿನಗಳಲ್ಲಿ ಈ ನಗರದ ಕೆಳಗೆ ವಿಸ್ತಾರವಾದ ನೆರಳು ಬಿದ್ದಿರುವುದನ್ನು ನೀವು ಕಾಣಬಹುದು.
ಈ ನಗರವಾಸಿಗಳ ಬಗ್ಗೆ ಮೂರು ಅಭಿಪ್ರಾಯಗಳಿವೆ: ಅವರು ಭೂಮಿಯನ್ನು ದ್ವೇಷಿಸುತ್ತಾರೆ ಎಂಬುದೊಂದು. ಅವರು ಭೂಮಿಯನ್ನು ಎಷ್ಟು ಗೌರವಿಸುತ್ತಾರೆ ಎಂದರೆ, ಅದನ್ನು ಮುಟ್ಟಿ ಹಾಳುಗೆಡವಲು ಇಷ್ಟಪಡುವುದಿಲ್ಲ ಎಂಬುದು ಇನ್ನೊಂದು. ಮತ್ತೊಂದು- ಅವರು ತಮಗಿಂತ ಮೊದಲು ಇದ್ದ ಭೂಮಿಯನ್ನು ತುಂಬಾ ಪ್ರೀತಿಸುತ್ತಾರೆ. ಈಗಲೂ ಅವರು ಭೂತಗಾಜು, ಟೆಲಿಸ್ಕೋಪ್ ಇತ್ಯಾದಿಗಳನ್ನಿಟ್ಟುಕೊಂಡು ನೆಲವನ್ನು ಇಂಚಿಂಚೂ ಬಿಡದೆ ನೋಡುತ್ತಿರುತ್ತಾರೆ. ಪ್ರತಿ ಎಲೆ, ಪ್ರತಿ ಕಲ್ಲು, ಪ್ರತಿ ಇರುವೆ. ನೆಲದಲ್ಲಿ ತಮ್ಮ ಗೈರುಹಾಜರಿಯನ್ನು ಹುಚ್ಚು ವ್ಯಾಮೋಹದಿಂದ ಆಸ್ವಾದಿಸುತ್ತಾರೆ.
ಇಟಾಲೋ ಕೆಲ್ವಿನೋ
- ಅನು: ಹರೀಶ್ ಕೇರ