ಮಕರಂದ/ದೋಣಿ

ಕಂಪ್ಯೂಟರ ಹಗರಣ

ಕಂಪ್ಯೂಟರ ಹಗರಣ
Published On :

ಸಾಧಾರಣವಾಗಿ ಹೆಣ್ಮಕ್ಕಳು ತೌರುಮನೆಗೆ ಬಂದ್ರೆ, ವಾತಾವರಣದಲ್ಲಿ ಅದೇನು ಸಂಭ್ರಮ- ಸಡಗರ- ಸಂತಸ. ಅವಳು ಮನೇಲಿ ಇರೋವರ್ಗೂ ಕಲಕಲ ಓಡಿಯಾಟ, ಕಿಲಕಿಲ ನಗು, ಕೊನೆಕಾಣದ ಮಾತುಕಥೆ, ಹರಟೆ, ಮತ್ತೊಂದು- ಹಾ ಎಷ್ಟು ಚೆಂದ! ಅದು ನಿಮಗೂ ಗೊತ್ತುಂಟು. ನಮ್ಮನೇಲೂ ಈವರೆಗೂ ಹಾಗೇ ಇತ್ತು. ಆದರೆ ಈ ಸಲ...

'ಅಲ್ಲಾ, ಪ್ರತಿ ಸಲ ಮಗು ಬಂದಾಗ್ಲೂ ಎಷ್ಟು ಉಪಚಾರ ಮಾಡ್ತಿದ್ದೆ, ಏನು ಕಥೆ! ನಗನಗ್ತಾ ಬಂದವಳನ್ನ ನಗನಗ್ತಾ ಮನೆಗೆ ಕಳಿಸ್ತಿದ್ದೆ. ಅಂಥಾದ್ರಲ್ಲಿ ಈ ಸಲ- ಅಲ್ಲಾ, ಅವಳ ವಯಸ್ಸೇನು, ನಿನ್ನ ವಯಸ್ಸೇನು? ಸ್ವಲ್ಪ ಅಡ್ಜಸ್ಟ್ ಮಾಡಿಕೋಬಾರ್ದೆ, ಏನಾಗಿದೆ ನಿಂಗೆ?'
ಹೀಗೆ ಅವರು ಹೇಳಿದ್ದೆಲ್ಲಾ ಸರಿ. ಆದ್ರೆ, ನನ್ನ ಪ್ರಾಬ್ಲಮನ್ನೂ ಅವರು ಅರ್ಥ ಮಾಡಿಕೋಬೇಕಲ್ವಾ? ಬರೀ ತಂದೆಯ ಹಾಗೆ ಮಾತಾಡಿದ್ರೆ ಹೇಗೆ, ಗಂಡನಾಗೂ ಅರ್ಥ ಮಾಡಿಕೋಬೇಡ್ವೇ? ಇಲ್ಲ, ಏನೇ ಹೇಳಿದ್ರೂ ಅವರಿಗೆ ಅವರ ಮಗಳೇ ಜಾಸ್ತಿ- ಆಮೇಲೆ ನಾನು.

'ನಿಂಗೆ ಏನಾಗಿದೆ ಅಂತ ನಾ ಹೇಳಲೇ-' ಒಳ್ಳೇ ಸೈಕಿಯಾಟ್ರಿಸ್ಟ್ ಹಾಗೆ ನನ್ನನ್ನ ಅನಲೈಸ್ ಮಾಡೋದಿಕ್ಕೆ ಆರಂಭಿಸಿದ್ರು- 'ನಿಂಗೆ ಕಂಪ್ಯೂಟರ್ ಮೇನಿಯ ಡಿಸೀಸ್ ಬಂದಿದೆ. ಅದನ್ನ ಈಗ್ಲೇ ತಡೆಗಟ್ಟದಿದ್ರೆ, ಮುಂದೆ ಇನ್ನೂ ಹೆಚಾಗ್ಬಿಟ್ಟು, ನಿನ್ನ ಜೊತೇಲಿ ಇರೋವ್ರಿಗೆಲ್ಲಾ ಕಷ್ಟವಾಗತ್ತೆ'

ಎಲಎಲಾ, ಯಾರು ನನ್ನ ಜೊತೆಗಿರೋವ್ರು, ಇವರೊಬ್ರು ತಾನೆ! ಅಂದರೆ ಪರೋಕ್ಷವಾಗಿ ತಿಳಿಯಪಡಿಸ್ತಿದಾರೋ, ತನಗೆ ನನ್ನಿಂದ ಎಷ್ಟೊಂದು ಕಷ್ಟವಾಗ್ತಿದೆ ಎಂಬೋದನ್ನ?
ಆದ್ರೆ, ಅವರ ಮಾತ್ನಲ್ಲೂ ಸ್ವಲ್ಪ ಸತ್ವ ಇದೆ ಅಂತನ್ನಿಸ್ತು. ನಿಜ- ಮನಸ್ಸಿನಲ್ಲೇ ಒಪ್ಪಿಕೊಂಡೆ, ಎದುರಿಗೆ ಹೇಳದಿದ್ರೂ. ಆದ್ರೆ ಏನ್ಮಾಡೋದು ಆ ಯಂತ್ರದ ಮಹಿಮೇನೇ ಹಾಗೆ. ಆಗೆಲ್ಲ ಈ ಮಾಯಾವಿ ಕಂಪ್ಯೂಟ್ರಮ್ಮ ಇರಲಿಲ್ಲ. ಅದಕ್ಕೇ ಹುಡುಗಿ ತೌರ್ಮನೇಗೆ ಬಂದಾಗ ಅದೇನ್ ಸಂಭ್ರಮ, ವಿಧವಿಧ ತಿಂಡಿ, ಊಟ, ಶಾಪಿಂಗೂ ಪಿಕ್ನಿಕ್ಕೂ ವಿಸಿಟಿಂಗೂ, ಎಂಟರ್‌ಟೇಯ್ನಿಂಗೂ ಅಂತೆಲ್ಲ. ಆದ್ರೀಗ ಅದಕ್ಕೆಲ್ಲಾ ಟೈಮೇ ಇಲ್ಲ. ಒಬ್ಬಳೇ ಇದ್ರೂ ಕಂಪ್ಯೂಟರ್ ದೇವತೆ ಇದ್ರೆ ಸಾಕು. ಕೌರವ ಮನೆತನ ಜೊತೇಲಿ ಇದ್ದ ಹಾಗೆ- ಆದ್ರೆ ಇದ್ದಕ್ಕಿದ್ದ ಹಾಗೆ, ಮತ್ತೊಬ್ರು ಧಡಾರನೆ ಬಂದು ನನ್ನ ಕಂಪ್ಯೂಟರ್ ಮೇಲೆ ಧಾಳಿ ಮಾಡಿದ್ರೆ ಬಾಯ್ಮುಚ್ಚಿಕೊಂಡು ಇರೋಕ್ಕಾಗತ್ಯೇ? ಒಂದೊಂದೇ ಕಂಪ್ಯೂಟರ್ ಟಿವಿ ಇರೋ ಕಡೆ ಎಲ್ಲಾ ಹೀಗೇ ಆಗತ್ತೇನೋ!
ನಮ್ಮನೇಲಿ ಆದದ್ದೂ ಹಾಗೇನೇ. ಯಾವ್ದೋ ದೊಡ್ಡ ಪ್ರಾಜೆಕ್ಟ್ ಅನ್ನ ನಾನು ತುರ್ತಾಗಿ ಮುಗಿಸ್ಬೇಕಿತ್ತು. ಮನೆಬಾಗಿಲಿಗೆ ಬಂದ ಪ್ರಾಜೆಕ್ಟ್ ಬಿಡೋಕ್ಕೆ ಆಗತ್ಯೇ? ಯೂನಿವರ್ಸಿಟಿ ಕೊಟ್ಟಿದ್ದ ಗಡು ಮುಗಿತಾ ಬಂತು. ರಾತ್ರಿಹಗಲು ಎನ್ನದೆ, ಸೊಂಟನೋವು-ಬೆನ್ನುನೋವು ಅಂತ ಮಲಗ್ದೆ, ಎಲ್ಲೂ ಹೋಗದೆ, ಯಾರ ಕೂಡಾ
ಮಾತಾಡ್ದೆ ಕೂತಿದ್ದೂ ಕೂತಿದ್ದೇ. ಆಗ, ಧಡಕ್ಕನೆ ಮಹರಾಯ್ತಿ ಬಂದುಬಿಟ್ಟಳು- ಬಂದದ್ದೇ ಹಾಯ್ ಅಮ್ಮ ಅಂತ ಕೂಡ ಹೇಳದೆ ನೆಟ್ಟಗೆ ಕಂಪ್ಯೂಟರ್ ಮುಂದೆ- ನನ್ನ ಕಂಪ್ಯೂಟರ್ ಮುಂದೆ ಕೂತುಬಿಡೋದೇ! ಅವಳ ತಂದೆ ಅಲ್ಲಿಗೇ ಹೋಗಿ ಮಾತಾಡಿಸಿದ್ರೆ, ಬದಲೀಯೊ ಅಷ್ಟು ಟೈಮೂ ಇರ್ಲಿಲ್ಲ- ಯಾವ್ದೋ ತಲೆಹೋಗೋ ಅಂಥಾ ಕಾರ್ಯ ಇರೋವಳ ಹಾಗೆ. ಏನಿಲ್ಲ, ಬರೀ ಈಮೇಲು, ಸ್ಕೈಪು, ಮಕ್ಕಳಿಗೆ ಯಜಮಾನ್ರಿಗೆ ಇರಲಿ, ಊರಲ್ಲಿರೋ ಸ್ನೇಹಿತರಿಗೆಲ್ಲಾ. ಸಾಲ್ದು ಎಂಬಂತೆ ಮ್ಯಾಜಿಕ್ ಜ್ಯಾಕು ಬೇರೆ. ಎಲ್ಲಾ ಅರ್ಥವಿಲ್ಲದ ಕಾಲಹರಣ.  ಎಷ್ಟೂಂತ ನೋಡ್ಕೊಂಡು ಸುಮ್ಮನಿರೋದು? ಅಲ್ಲಾ, ನನ್ನ ಬರೆವಣಿಗೆಗೆ ಬಂದ ಪ್ರಶಸ್ತಿಯ ಹಣದಿಂದ ಕೊಂಡ ಕಂಪ್ಯೂಟರ್- ಎಷ್ಟು ನಾಜೋಕಾಗಿ, ಬಾಣಂತಿ ಜೋಪಾನ ಮಾಡೊ ರೀತೀಲಿ ನೋಡ್ಕೊತಿದ್ದೆ. ಈಗಿವಳು ಬಂದು ದಡಾಬಡಾಂತ ಒಡ್ಡೊಡ್ಡಾಗಿ ಎಳೆದಾಡಿದ್ರೆ, ನೊಡ್ಕೊಂಡು ಸುಮ್ಮನಿರಕ್ಕಾಗತ್ಯೆ?

ಚೆನ್ನಾಗಿ ತರಾಟೆಗೆ ತೆಗೆದುಕೊಂಡೆ. ತಗೊಳ್ಳಿ, ಒಂದು ವಾಗ್ವಾದ ನಡೀತು, ನಡೀತು, ಹೇಗೆ ಕೊನೆಗೊಳ್ತಿತ್ತೋ,ಅಷ್ಟರಲ್ಲಿ ಮೊಮ್ಮಗಳು ಬಂದಿಳಿದಳು. ಪಾಲಿಶ್‌ಡ್ ಆಗಿ ಗ್ರ್ಯಾನ್‌ಪಾ- ಗ್ರ್ಯಾನ್‌ಮಾ ಅಂತ ಗ್ರೀಟ್ ಮಾಡಿ, ತನ್ನನ್ನು ಕಟ್ಟಿಕೊಂಡ ತಾಯಿಯನ್ನು ನಯವಾಗಿ ಬದಿಗೆ ತಳ್ಳಿ, ಅವಳೂ ಕಂಪ್ಯೂಟರ್ ಮುಂದೆ ಕೂತುಬಿಟ್ಟಳು. ಸರಿ, ತಗೋ, ಆ ತಾಯಿಮಗಳಿಗೆ ಹತ್ತಿಕೊಂಡ್ತು.
ಈವರೆಗೂ ಮೌನ ಪ್ರೇಕ್ಷಕರಾಗಿದ್ದ ಅವಳ ತಾತ ಲಗುಬಗನೆ ಎದ್ದು ಹೋಗಿ ಒಂದು ಲ್ಯಾಪ್‌ಟಾಪ್ ಅನ್ನು ತಂದುಕೊಟ್ರು ಮುದ್ದುಮೊಮ್ಮಗಳಿಗೆ. ಆ ಮಗು ಇನ್ನಾ ಆ ಕಡೆ ಹೋಗಿಲ್ಲ, ಮತ್ತೆ ಮುಂದುವರೀತು ನಾವು ತಾಯಿ- ಮಗಳ ಜಗಳ. ಇದರಿಂದ ಬೇಸತ್ತೋ ಏನೋ, ಮಾಯಾವಿ- ಕಂಪ್ಯೂಟರ್ ನನ್ನ ಸ್ಚ್ರಿಪ್ಟ್ಸ್ ಎಲ್ಲಾದನ್ನೂ ನುಂಗಿ ಹಾಕಿಬಿಡ್ತು- ಒಳ್ಳೇ ಬಕಾಸುರನ ಹಾಗೆ.

ನನ್ನ ಮನಸ್ಥಿತಿ ಹೇಗಾಗಿರಬೇಕು, ರಾತ್ರಿಹಗಲು ಎನ್ನದೆ ಶ್ರಮಿಸಿ ಮಾಡಿದ್ದ ಕೆಲಸವೆಲ್ಲಾ ಹೀಗೆ ಒಂದೇ ಕ್ಷಣದಲ್ಲಿ ನಿರ್ನಾಮವಾದರೆ, ನೀರಿನಲ್ಲಿ ಹೋಮಮಾಡಿದ ಹಾಗೆ. ಪರಿಸ್ಥಿತಿ ಹದಗೆಟ್ಟಿತು. ಇಷ್ಟಕ್ಕೂ ನೀನೇ ಕಾರಣ, ಇಲ್ಲ ನೀನೇ ಎಂದು, ಒಬ್ಬರನ್ನೊಬ್ರು ಎತ್ತಿಹಾಕಿದ್ದೂ ಹಾಕಿದ್ದೇ. ಇದನ್ನೆಲ್ಲಾ ಗಮನಿಸಿದ ಮೊಮ್ಮಗಳು ಮೆಲ್ಲಗೆ ಬಾಗಿಲನ್ನ ತೆಗೆದು ಹೊರಟುಬಿಟ್ಟಳು ಹತ್ತಿರವೇ ಇದ್ದ ತನ್ನ ಇನ್ನೊಂದು ಅಜ್ಜಿಯ ಮನೆಗೆ- ಅವಳ ತಾತ ತೆಗೆದುಕೊಟ್ಟಿದ್ದ ಲ್ಯಾಪ್‌ಟಾಪನ್ನು ಭದ್ರವಾಗಿ ಹಿಡಿದುಕೊಂಡು.

ನನ್ನ ಕಂಪ್ಯೂಟರ್ ಹಗರಣ ಇಲ್ಲಿಗೇ ಮುಗಿಯಿತೇ? ಉಂಟೇ! ಹೊಸ ಕಂಪ್ಯೂಟರ್ ದೇವಿ ಬಂದಳು ಮನೆಗೆ.  ಮೊಮ್ಮಗಳಿಗೆ ತಕ್ಕೊಟ್ಟ ಮೇಲೆ ನನಗೂ ತಕ್ಕೊಡಬೇಕಲ್ಲವೇ? ಮತ್ತೆ ಆರಾಮವಾಗಿ ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸತೊಡಗಿದೆ. ಧಡಕ್ಕನೆ ಬಂದಿಳಿದ ಮೊಮ್ಮಗ. ಅವ ಕಂಪ್ಯೂಟರ್ ಇಂಜಿನಿಯರ್. ಬಂದವನೇ ಕಂಪ್ಯೂಟರ್ ಬಳಿ ಹೋದ, ಪರೀಕ್ಷಿಸಿದ, ತಲೆ ಅಲ್ಲಾಡಿಸಿದ.

'ಅಜ್ಜಿ, ನಿನ್ನ ಹೊಸಾ ಕಂಪ್ಯೂಟರ್ ಸ್ವಲ್ಪಾನೂ ಚೆನ್ನಾಗಿಲ್ಲ. ಯಾವ್ದೋ ಅಸಂಬಲ್ಡ್ ಅನ್ನ, ಪಾಪ, ನಿಮ್ಮ ತಲೆಗೆ ಕಟ್ಟಿದಾನೆ ಆ ರ್ಯಾಸ್ಕಲ್. ಏನೂ ವರಿ ಮಾಡ್ಕೋಬೇಡಿ, ನಾನಿದೀನಲ್ಲಾ. ಎಂತೆಂಥಾ ಕಂಪ್ಯೂಟರ್‌ಗಳನ್ನೆಲ್ಲಾ ಸರಿಮಾಡಿದಿನಿ. ಇದೇನು ಮಹಾ, ಚಿಟಿಕೆ ಹೊಡೆಯೋದ್ರಲ್ಲಿ ಹೊಚ್ಚ ಹೊಸಾ ಕಂಪ್ಯೂಟರಾಗಿ ಮಾಡ್ಬಿಡ್ತೀನಿ-ನೋಡ್ಕೊಂಡಿರಿ.'
ಇದ್ದಷ್ಟು ದಿನಾನೂ ರಿಪೇರಿ ಮಾಡ್ತಾನೇ ಇದ್ದ- ನನ್ನನ್ನ ಅದ್ರ ಹತ್ರ ಬಿಡದೆ. ಅವನು ವಾಪಸ್ ಊರಿಗೆ ಹೋದ್ಮೇಲೆ ನೋಡ್ತೀನಿ, ನನ್ನ ಕಂಪ್ಯೂಟರ್ ಸಂಪೂರ್ಣವಾಗಿ ಬದಲಾಯಿಸ್‌ಬಿಟ್ಟಿದೆ. ನನ್ನ ಯಾವ ಪ್ರೋಗ್ರಾಮೂ ಅದ್ರಲ್ಲಿಲ್ಲ. ನಾನು ಉಪಯೋಗಿಸ್ತಿದ್ದ ಯಾವ ಲಿಂಕೂ ಸಿಗಲ್ಲ. ಏನ್ಮಾಡೋದು?

ಅಪರೂಪಕ್ಕೆ ಕಂಪ್ಯೂಟರ್ ಪಂಡಿತ- ಅದೇ ಮೊಮ್ಮಗ, ಅಲ್ಲಿಂದ ಸ್ಕೈಪ್ ಕಾಲ್ ಮಾಡಿದ- ನಮ್ಮ ಯೋಗಕ್ಷೇವಾನ ವಿಚಾರಿಸೊಕ್ಕಲ್ಲ- ಕಂಪ್ಯೂಟರ್ ಯೋಗಕ್ಷೇವು ವಿಚಾರಿಸೊಕ್ಕೆ. ಆದ್ರೆ ಮೊದಲಿನ ಹಾಗೆ ಇಲ್ಲಿಂದ ನಮ್ಮ ವಾಯ್ಸ್ ಅವನನ್ನ ಮುಟ್ಟಲೇ ಇಲ್ಲ- ಎಷ್ಟು ಕಿರುಚಿಕೊಂಡ್ರೂ.
ಮೈಕ್ರೊಫೋನು ಇಲ್ಲಿರ್ಬೇಕು- ಅಲ್ಲಿರ್ಬೇಕು- ಎಲ್ಲಿದೆ, ಸ್ವಲ್ಪ ನೋಡಿ ಅಜ್ಜಿ- ಸಾಲಾಗಿ ಇನ್‌ಸ್ಟ್ರಕ್ಷನ್ ಕೊಡ್ತಾ ಹೋದ. ನನಗೆ ತಲೆ ಕೆಟ್ಟುಹೋಯ್ತು. 'ನಂಗ್ಹೇಗಪ್ಪಾ ಗೊತ್ತಾಗತ್ತೆ, ನೀ ತಾನೆ ಬಂದಾಗ, ಏನೇನೋ ಚೇಷ್ಟೆ ಮಾಡಿ, ಆ ಮೈಕ್ರೊಫೋನು- ಮತ್ತೊಂದು ಎಲ್ಲಾನೂ ಎಲ್ಲೆಲ್ಲೊ ಹಾಕಿರೋದು. ಈಗ ನನ್ನನ್ನ ಕೇಳಿದ್ರೆ...'
ಮಾತು ಮುಗಿಸೋದಕ್ಕಿಲ್ಲ, ಕಂಪ್ಯೂಟರ್ ಸ್ವಿಚ್‌ಆಫ್ ಆಯ್ತು. ಆ ಕಡೆ...

-ನುಗ್ಗೆಹಳ್ಳಿ ಪಂಕಜ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.