ಬೈಟುಕಾಫಿ

ಕ್ಷಮೆಯಲ್ಲಿದೆ ಆನಂದ

Published On :

ಮನಸ್ಸು ಹಿಡಿತದಲ್ಲಿಲ್ಲ. ರಾತ್ರಿ ಮಲಗಿದರೂ ಅದೇ ಯೋಚನೆ. ನಿರ್ಧಾರ ಬಲಗೊಳ್ಳುತ್ತಿದೆ. 'ಉಹುಂ, ಅವರನ್ನು ಕ್ಷಮಿಸಲಾರೆ. ನನ್ನ ಜತೆಗೇ ಇದ್ದು ಬೆನ್ನಿಗೆ ಇರಿದುಬಿಟ್ಟ ದ್ರೋಹಿ. ನನಗೆ ಮಾಡಿದ ದ್ರೋಹಕ್ಕೆ ತಕ್ಕ ಶಾಸ್ತಿ ಮಾಡುತ್ತೇನೆ. ಜೀವನಪರ್ಯಂತ ನನ್ನನ್ನು ನೆನಪಿಸಿಕೊಳ್ಳುತ್ತಿರಬೇಕು, ಹಾಗೆ ಮಾಡುತ್ತೇನೆ'. ಆತ ಮಾಡಿದ್ದು ತಪ್ಪೇ. ಅದರಲ್ಲಿ ಎರಡು ಮಾತಿಲ್ಲ. ನಿಮಗೆ ನೋವಾಗಿದೆ ಎನ್ನುವುದೂ ನಿಜವೇ. ಸ್ವಾಭಾವಿಕ ಬಿಡಿ. ಬೇರೆಯವರಿಂದ ಮೋಸವಾದರೆ, ಅನ್ಯಾಯವಾದರೆ ಅಷ್ಟು ನೋವಾಗುವುದಿಲ್ಲ. ಆದರೆ ಜತೆಯಲ್ಲೇ ಇದ್ದು, ಸಮಯ ನೋಡಿ ಕೈ ಕೊಡುವವರಿದ್ದಾರಲ್ಲ. ಅಂತಹವರು ಮಾಡಿದ ಮೋಸ ಗೊತ್ತಾದಾಗ ಮನಸ್ಸು ವಿಲವಿಲ ಒದ್ದಾಡುತ್ತದೆ. ಮೋಸ ಹೋದೆ ಎನ್ನುವ ಭಾವನೆಗಿಂತ ಆತನ ಮೇಲೆ ಸೇಡು ತೀರಿಸಿಕೊಳ್ಳುವ ಹಠ ಬೆಳೆಯುತ್ತದೆ. ಒಂದು ದಿನ, ಎರಡು ದಿನ... ಸಿಟ್ಟಿನ ಅಬ್ಬರ ಎಷ್ಟು ಹೊತ್ತು ಇದ್ದೀತು? ಅದು ತಣಿಯುವವರೆಗೆ ಸುಮ್ಮನಿದ್ದು ಬಿಡಿ. ಬೇರೆ ವಿಷಯಗಳತ್ತ ಗಮನ ಹರಿದಾಗ ನಿಮಗಾದ ಅನ್ಯಾಯ ಮರೆತು ಹೋಗುತ್ತದೆ. ಆಗ ಶಾಂತವಾಗಿ ಕುಳಿತು ನಿರ್ಧಾರಕ್ಕೆ ಬನ್ನಿ. 'ಯಾವುದೋ ಒತ್ತಡದಲ್ಲಿಯೋ, ಪರಿಸ್ಥಿತಿಯ ಬಲಿಪಶುವಾಗಿಯೋ ನನಗೆ ಮೋಸ ಮಾಡಿರಬಹುದು. ಹಾಗಂತ ನಾನು ಅವನ ಮೇಲೆ ಪ್ರತೀಕಾರಕ್ಕೆ ಮುಂದಾದರೆ ನನಗೂ ಅವನಿಗೂ ವ್ಯತ್ಯಾಸವೇನು? ಅವನನ್ನು ಕ್ಷಮಿಸಿಬಿಡುತ್ತೇನೆ. ತಾನು ಮಾಡಿದ ತಪ್ಪಿನ ಅರಿವು ಅವನಿಗೆ ಮುಂದೆಂದಾದರೂ ಆದೀತು'. ಮರುಕ್ಷಣ ನಿಮಗಾಗುವ ಆನಂದ ಇದೆಯಲ್ಲ. ಅದು ಬೆಲೆ ಕಟ್ಟಲಾಗದ್ದು. ಹೆಗಲ ಮೇಲಿದ್ದ ಭಾರವೊಂದು ಇಳಿದ ಅನುಭವ. ಅದೇ ನಿಜವಾದ ತೃಪ್ತಿ. ಸಂತೋಷದ ಮೂಲ ಇರುವುದೇ ಕ್ಷಮಿಸುವ ಗುಣದಲ್ಲಿ. ಕ್ಷಮೆಯ ಬೆಲೆಯಾದರೂ ಎಂಥದ್ದು? ಆತ ನಾಝಿ ಕೈದಿ. ಸಾವಿನ ದವಡೆಯಲ್ಲಿದ್ದ ಜರ್ಮನ್ ಸೈನಿಕನ ಪಕ್ಕ ಮಲಗುವ ಸನ್ನಿವೇಶ ಎದುರಾಗುತ್ತದೆ. ಸೈನಿಕ ಹೇಳುತ್ತಾನೆ, 'ನಾನು ಮರಣದ ಕ್ಷಣಗಣನೆಯಲ್ಲಿದ್ದೇನೆ. ನನಗೊಂದು ಉಪಕಾರ ಮಾಡು. ನನ್ನನ್ನು ಕ್ಷಮಿಸಿರುವುದಾಗಿ ಹೇಳಿಬಿಡು. ನಿಶ್ಚಿಂತೆಯಿಂದ ಪ್ರಾಣ ಬಿಡುತ್ತೇನೆ'. ಕೈದಿ ಹಿಂದೆಮುಂದೆ ನೋಡಲಿಲ್ಲ. 'ಕ್ಷಮಿಸಿದ್ದೇನೆ' ಎಂಬ ಮಾತು ಆತನ ಬಾಯಿಂದ ಹೊರಬೀಳುತ್ತಿದ್ದಂತೆ ಯೋಧ ಕೊನೆಯುಸಿರೆಳೆದ. ಕ್ಷಮೆ ನೀಡುವ ಆನಂದವನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಮತ್ತು ಕ್ಷಮಾ ಗುಣವೇ ನಿಮ್ಮನ್ನು ಸದಾ ಕಾಪಾಡಬಲ್ಲದು.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.