ಬೈಟುಕಾಫಿ

ಸುಮ್ಮನೆ ತಿನ್ನುವುದಲ್ಲ, ಸತ್ವಯುತವಾದದ್ದನ್ನೇ ತಿನ್ನಿ

Published On :

ರಕ್ತಪರಿಚಲನೆಯಲ್ಲಿ ತೊಂದರೆ ಉಂಟಾದರೆ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಅಧಿಕ ಮತ್ತು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಇದರಿಂದ ಪಾರಾಗಬಹುದು ಎಂದಾಯಿತು. ಅಷ್ಟೇ ಅಲ್ಲ, ಆಹಾರ ಪದ್ಧತಿ ಕೂಡ ನಿಮ್ಮನ್ನು ಪಾರ್ಶ್ವವಾಯುವಿನ ಅಪಾಯದಿಂದ ಬಚಾವು ಮಾಡಬಲ್ಲದು. ಅದಕ್ಕೆ ನೀವು ಡಯಟ್ ಅನ್ನೇ ಬದಲಿಸಿಕೊಳ್ಳಬೇಕು ಅಂತಿಲ್ಲ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರಾಯಿತು. ಅಡೆತಡೆರಹಿತ ರಕ್ತಪರಿಚಲನೆಗೆ ಎಂಥ ಆಹಾರ ಪದ್ಧತಿ ಇರಬೇಕು ಎನ್ನುವುದನ್ನು ಸಾಕಷ್ಟು ವಿವರವಾಗಿಯೇ ಚರ್ಚಿಸಿದ್ದೇವೆ. ಅದನ್ನು ಅಳವಡಿಸಿಕೊಂಡರೂ ಪಾರ್ಶ್ವವಾಯುವಿನ ಸಾಧ್ಯತೆಯಿಂದ ಪಾರಾಗಬಹುದು. ಆದರೂ ಇಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಚರ್ಚೆ ಮಾಡೋಣ ಎನ್ನುವುದು ನನ್ನ ಭಾವನೆ.

ರಕ್ತದಲ್ಲಿ ಆಮ್ಲಜನಕದ ಕೊರತೆ ಎದುರಾಗುವುದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಶರೀರಕ್ಕೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಗಬೇಕು ಅಂತಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು. 'ಹಸಿವಾಗುತ್ತದೆ, ಹೊಟ್ಟೆ ತುಂಬಬೇಕು ಎನ್ನುವ ಕಾರಣಕ್ಕೆ ಸಿಕ್ಕಿದ್ದನ್ನು ತಿನ್ನುವುದಲ್ಲ. ನಾವು ಏನೇ ತಿಂದರೂ ಅದು ಸತ್ವಭರಿತವಾಗಿರಬೇಕು, ಅದರಲ್ಲಿ ಪೌಷ್ಟಿಕಾಂಶ ಇರಬೇಕು' ಎನ್ನುವುದನ್ನು ನಾನು ಪದೇಪದೆ ಹೇಳುತ್ತಿರುವುದು ಇದಕ್ಕೇ. ಪ್ರಾಯಕಾಲದಲ್ಲಿ ನಮಗೆ ಏನೂ ತೊಂದರೆ ಆಗದೇ ಇರಬಹುದು. ಆದರೆ ಸಮಸ್ಯೆ ಕಾಡುವುದು ವಯಸ್ಸಾದ ಬಳಿಕ. ಪಾರ್ಶ್ವವಾಯುವನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ಸ್ಟ್ರೋಕ್‌ಗೆ ತುತ್ತಾಗುವವರು 55 ವರ್ಷ ದಾಟಿದವರು. ಆದರೆ ಯಾರು ಬೇಕಾದರೂ ಪಾರ್ಶ್ವವಾಯುವಿಗೆ ತುತ್ತಾಗಬಹುದು ಎನ್ನುವುದನ್ನು ಮರೆಯಲಾಗದು. ಅನುವಂಶೀಯತೆಯೂ ಒಂದು ಕಾರಣ ಅಂತಿಟ್ಟುಕೊಳ್ಳಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಪಾರ್ಶ್ವವಾಯುವಿನ ತೊಂದರೆ ಕಾಡಿದ್ದಲ್ಲಿ ನೀವು ಚ್ಚೆತ್ತುಕೊಳ್ಳುವುದು ಅಗತ್ಯ. ಸರಿಯಾದ ಆಹಾರ ಕ್ರಮದಿಂದ ನೀವು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಿಕೊಳ್ಳಬಹುದು.

ಖಿನ್ನತೆಯಿಂದ ಬಳಲುವವರು, ಅತಿಯಾದ ಧೂಮಪಾನ ಮತ್ತು ಮದ್ಯಪಾನದ ಚಟ, ಅಧಿಕ ಕೊಲೆಸ್ಟರಾಲ್, ಬೊಜ್ಜು, ಮಧುಮೇಹ, ಹೃದಯದ ತೊಂದರೆ, ರಕ್ತದಲ್ಲಿ ಅಮೀನೊ ಆಮ್ಲದ ಪ್ರಮಾಣ ಹೆಚ್ಚುವುದು, ಅನುವಂಶೀಯತೆ ಇವೆಲ್ಲ ಪಾರ್ಶ್ವಯುವಿಗೆ ಕಾರಣವಾಗುವ ಸಾಮಾನ್ಯ ಲಕ್ಷಣಗಳು. ಪಾರ್ಶ್ವವಾಯುವಿನ ಮುನ್ಸೂಚನೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದಿದ್ದೆ. ತಲೆ ತಿರುಗುವುದು, ನಡೆದಾಡುವಾಗ ಸಮತೋಲನ ಕಳೆದುಕೊಳ್ಳುವುದು, ಮಾತನಾಡುವಾಗ ತೊಂದರೆ, ದೇಹದ ಕೆಲ ಭಾಗಗಳು ಮರಗಟ್ಟಿದಂತೆ ಆಗುವುದು, ಏನನ್ನೇ ನೋಡಿದರೂ ಎರಡೆರಡು ಸಲ ಕಾಣಿಸುವುದು ಅಥವಾ ದೃಷ್ಟಿಮಂದವಾಗುವುದು, ಏಕಾಏಕಿ ವಿಪರೀತ ತಲೆನೋವು ಇವೆಲ್ಲ ಪಾರ್ಶ್ವವಾಯುವಿನ ಲಕ್ಷಣಗಳಾಗಿರಬಹುದು. ನಿಮ್ಮ ಪ್ರಾಯ 55 ದಾಟಿದ ನಂತರ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ಗಂಭೀರವಾಗಿ ಪರಿಗಣಿಸಲೇಬೇಕು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.