ಬೈಟುಕಾಫಿ

ಸುರಕ್ಷಿತ, ಆರೋಗ್ಯಕರ

Published On :

ವಿವಾಹಪೂರ್ವ ಲೈಂಗಿಕತೆ ಖಂಡಿತಬೇಡ. ಕೈ ಕೊಟ್ಟ ಪ್ರೇಮಿ, ಒಲ್ಲದ ಮಗುವಿನ ಹತ್ಯೆ, ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ, ಮನದನ್ನನೇ ಮಾನಿನಿಯನ್ನು ಕಾಮಾಟಿಪುರಕ್ಕೆ ಮಾರಾಟ... ಇಂತಹ ಸುದ್ದಿಗಳೇ ನಿತ್ಯ ವಾರ್ತೆಗಳಾಗಿರುವ ವರ್ತಮಾನದಲ್ಲಿ ವಿವಾಹಪೂರ್ವ ಲೈಂಗಿಕತೆ ಅಪಾಯಕ್ಕೆ ಆಹ್ವಾನ ನೀಡಿ ಜೀವನ ಅಧ್ವಾನ ಮಾಡಿಕೊಂಡಂತೆ. ಒಂದು ಕ್ಷಣ ಇಂದ್ರಿಯ ನಿಗ್ರಹ ಕಳೆದುಕೊಂಡರೆ, ಆ ಒಂದು ಕ್ಷಣದ ತಪ್ಪಿಗಾಗಿ ಇಡೀ ಕುಟುಂಬ ತಲೆ ಎತ್ತಿ ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕೆ ಬದಲಾಗಿ ಪ್ರೀತಿಸಿದವರೊಂದಿಗೇ ಹಿರಿಯರ ಒಪ್ಪಿಗೆಯ 'ಶ್ರೀಕಾರ' ಪಡೆದು'ವೈವಾಹಿಕ ಬಂಧನ'ಕ್ಕೆ ಒಳಪಟ್ಟ ನಂತರವೇ ಲೈಂಗಿಕ ಬಯಕೆಗಳನ್ನು ತಣಿಸಿಕೊಳ್ಳುವುದು ಸುರಕ್ಷಿತವೂ ಹೌದು, ಆರೋಗ್ಯಕರವೂ ಹೌದು. ಎಷ್ಟೇ ಕದ್ದುಮುಚ್ಚಿ ನಡೆಸಿದರೂ ಅನೈತಿಕ ಸಂಬಂಧಗಳು ಯಾವತ್ತಿದ್ದರೂ ಅಪಾಯಕಾರಿಯೇ.
- ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ


ಆಗ ಸಮ್ಮತ, ಈಗೇಕೆ ತಪ್ಪು?
ಪುರಾಣ ಕಾಲದಲ್ಲಿ ಕುಂತಿ ಪ್ರಸಂಗ, ಪರಾಶರ- ಸತ್ಯವತಿ ಕಥೆಗಳು ಧರ್ಮ ಸಮ್ಮತ. ಆದರೆ ಹುಲುಮಾನವರು ಮದುವೆಗೆ ಮೊದಲೇ ಲೈಂಗಿಕ ಸಂಬಂಧ ಬೆಳೆಸಿಕೊಂಡರೆ ಅದ್ದು ತಪ್ಪು, ಅನೈತಿಕ. ಕಂಪ್ಯೂಟರ್ ಯುಗದಲ್ಲಿ ಈ ಕುರಿತ ಚರ್ಚೆಯೇ ಅನಗತ್ಯ. ಹೆಣ್ಣು-ಗಂಡಿನ ಸಂಬಂಧ ಸೃಷ್ಟಿ ಸಹಜವಾದದ್ದು. ಪರಸ್ಪರರ ಭಾವನೆಗಳು ಅರ್ಥವಾಗುವುದು ಇಬ್ಬರೂ ಪ್ರತಿಷ್ಠೆ ಮರೆತು ಕಾಮೇಷ್ಠಿಯಲ್ಲಿ ತೊಡಗಿಕೊಂಡಾಗಲೇ. 'ವಿವಾಹವಾಗದೆ ಕೂಡಿ ಜೀವನ ನಡೆಸುವುದು' ತಪ್ಪೇನಲ್ಲ. ಸರಿ ಹೊಂದಲಿಲ್ಲವೆಂದರೆ, ಸರಿ ಹೋಗುವವರ ಜೊತೆ ಕೂಡಿ ಬಾಳಲು ಅವಕಾಶವಿರುತ್ತದೆ. ವಿವಾಹ ಪೂರ್ವ ಲೈಂಗಿಕತೆ ಸಮ್ಮತವೋ ಅಸಮ್ಮತವೋ ಎನ್ನುವುದು ಮುಖ್ಯವಲ್ಲ. ಸಮ್ಮತದಿಂದ ಹಾಗೂ ಅಸಮ್ಮತದಿಂದ ವೈಯಕ್ತಿಕವಾಗಿ ಆಗುವ ಅನುಕೂಲಗಳೇ ಮುಖ್ಯವಾಗಿರುತ್ತದೆ.
- ಚಲಪತಿ ಭಾರದ್ವಾಜ್

ಶುದ್ಧ ಅವಿವೇಕತನ
ಆಧುನಿಕತೆಯ ಸೆಳೆತಕ್ಕೆ ಹಾತೊರೆದು ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಕಾಲದಲ್ಲಿಯೂ ತನ್ನ ಗಟ್ಟಿತನ ಉಳಿಸಿಕೊಂಡಿರುವ ಸಮಾಜದ ಅತ್ಯಂತ ಚಿಕ್ಕ ಘಟಕ ಕುಟುಂಬ. ಈ ಕುಟುಂಬ ರಚನೆಯ ಮೂಲವೇ ವಿವಾಹ.  ಇಂದು ಈ ಕಟ್ಟುಪಾಡುಗಳನ್ನು ಗಾಳಿಗೆ ತೂರಿರುವ ಕೆಲವು ಪ್ರಜ್ಞಾವಂತ ಯುವಕ-ಯುವತಿಯರು ತಮ್ಮ ಭವಿಷ್ಯದ ಸಾಧನೆಗೆ ವಿವಾಹ (ಸಂಸಾರ) ಎಂಬುದು ಅಡ್ಡಗೋಡೆಯಾಗಿದೆ ಎಂದು ಭ್ರಮಿಸಿ ಸ್ವೇಚ್ಛಾಚಾರವಾಗಿ ಪ್ರಾಣಿಗಳಂತೆ ಬದುಕುತ್ತಿರುವುದು ಒಂದೆಡೆ. ಕ್ಷುಲ್ಲಕ ಆಮಿಷ ಅಥವಾ ಪ್ರಚೋದನೆಗೆ ಒಳಗಾಗಿ ಕ್ಷಣಿಕ ಸುಖಕ್ಕೆ ಹಾತೊರೆದು, ಪ್ರೇಮ ಎಂಬ ಪವಿತ್ರ ಬಂಧನಕ್ಕೆ ಕಾಮದ ಕೆಸರು ಮೆತ್ತಿಕೊಂಡು ಪೋಷಕರ ಮನೆಗಳ ಮುಂದೆ ಧರಣಿ ಕೂರುವ, ಕತ್ತಲಾದ ಮೇಲೆ ಆಸ್ಪತ್ರೆಗಳ ಬಾಗಿಲು ತಟ್ಟುವ, ಇಲ್ಲವೆ ಹೇಡಿಗಳಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದರುವುದು ಇನ್ನೊಂದೆಡೆ. ಈ ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳೋಣ?
- ಹರೀಶ್ ಎಚ್.ಡಿ., ಹೆಗ್ಗೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.