ಜಾಸ್ತಿ ನಾರು ತಿನ್ನದೆ ಕೆಡಿಸಿಕೊಂಡೆ ಹೊಟ್ಟೆ
ಬಹುಶಃ ಪ್ರತಿಯೊಬ್ಬರೂ ಸಾಮಾನ್ಯವಾಗಿ ಅನುಭವಿಸುವ ಜೀರ್ಣಾಂಗಗಳಿಗೆ ಸಂಬಂಧಪಟ್ಟ ಸಮಸ್ಯೆ ಎಂದರೆ ಮಲಬದ್ಧತೆ. ವೈದ್ಯಕೀಯ ಲೋಕ ಕರುಳಿನ ಭಾಗದಲ್ಲಿ ಮಲದ ನಿಧಾನ ಚಲನೆ ಮಲಬದ್ಧತೆಗೆ ಪ್ರಮುಖ ಕಾರಣ ಎಂದು ಗುರುತಿಸುತ್ತದೆ. ವಾರದಲ್ಲಿ ಮೂರು ದಿನವಾದರೂ ಮಲವಿಸರ್ಜನೆ ಸರಿಯಾಗಿ ಆಗಿಲ್ಲ ಎಂದಾದರೆ ಅದನ್ನು ಮಲಬದ್ಧತೆ ಎಂದು ಹೇಳಲಾಗುತ್ತದೆ. ನೀವು ನಂಬಲಾರಿರಿ. ಕೆಲವರಲ್ಲಿ ಈ ಸಮಸ್ಯೆಯ ತೀವ್ರತೆ ಎಷ್ಟಿರುತ್ತದೆ ಎಂದರೆ ವಾರಕ್ಕೊಮ್ಮೆ ಕೂಡ ಮಲವಿಸರ್ಜನೆ ಆಗುವುದಿಲ್ಲ. ಯಾವಾಗಲೋ ಒಮ್ಮೆ ಆದರೂ ವಿಪರೀತ ನೋವು. ಶೌಚಾಲಯದಿಂದ ಹೊರಬರುವಷ್ಟರಲ್ಲಿ ಮರುಜನ್ಮ ಪಡೆದ ಅನುಭವ ಆಗಿರುತ್ತದೆ.
ಮಲಬದ್ಧತೆಗೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಬಹುದು. ಕರುಳಿನಲ್ಲಿ ಏನಾದರೂ ತೊಂದರೆ ಇದ್ದರೆ- ವಿಶೇಷವಾಗಿ ದೊಡ್ಡಕರುಳು ನಿಶ್ಯಕ್ತವಾದರೆ, ನಾರಿನ ಅಂಶ ಕಡಿಮೆ ಇರುವ ಆಹಾರಗಳನ್ನು ಅತಿಯಾಗಿ ಸೇವಿಸುತ್ತಿದ್ದರೆ, ಹಾರ್ಮೋನುಗಳ ಏರಿಳಿತವಿದ್ದರೆ ಮಲಬದ್ಧತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ಕಾಯಿಲೆಗಳ ಮುನ್ಸೂಚನೆಯೂ ಇದಾಗಿರಬಹುದು. ಅತಿಯಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದರೂ ಮಲಬದ್ಧತೆ ಉಂಟಾಗಬಹುದು. ಗರ್ಭಿಣಿಯರಲ್ಲಂತೂ ಇದು ಸಾಮಾನ್ಯ ಸಮಸ್ಯೆ. ಗರ್ಭಧಾರಣೆ ಆದಾಗ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನುಗಳ ಮಟ್ಟ ಜಾಸ್ತಿ ಇರುವುದರಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ.
ವೈದ್ಯರು ಸುಲಭವಾದ ಕೆಲವು ತಪಾಸಣೆಗಳ ಮೂಲಕ ಮಲಬದ್ಧತೆಗೆ ಕಾರಣವಾದ ಅಂಶವನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ಹಿಂದಿನ ಆರೋಗ್ಯ ತೊಂದರೆಗಳ ಬಗ್ಗೆ ವೈದ್ಯರೊಂದಿಗೆ ವಿವರವಾಗಿ ಹೇಳಿಕೊಳ್ಳುವುದು ಅಗತ್ಯ. ನೀವು ಯಾವುದಾದರೂ ಸಣ್ಣ ಸಂಗತಿಯನ್ನು ಮುಚ್ಚಿಟ್ಟರೆ ಅದು ಕೂಡ ಚಿಕಿತ್ಸೆ ಮೇಲೆ ನೇರ ಪರಿಣಾಮ ಬೀರಬಹುದು.
ಮಲಬದ್ಧತೆಗೆ ಚಿಕಿತ್ಸೆ, ಔಷಧಗಳಿವೆ ಸರಿ. ಎಷ್ಟು ಸಲ ಅಂತ ಅದನ್ನು ತೆಗೆದುಕೊಳ್ಳುತ್ತೀರಿ. ನಿತ್ಯವೂ ಮಲವಿಸರ್ಜನೆಗೆ ಮಾತ್ರೆ ಅಥವಾ ಚಿಕಿತ್ಸೆಯನ್ನೇ ಅವಲಂಬಿಸುತ್ತೀರೇನು? 'ಚಿಕಿತ್ಸೆ ಪಡೆದಿದ್ದೇನೆ. ಇನ್ನು ನಿಶ್ಚಿಂತನಾಗಿರಬಹುದು' ಎಂದು ಕೊಂಡರೆ ಸಮಸ್ಯೆಯನ್ನು ಮತ್ತೆ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ಎಲ್ಲಿಯವರೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
ಬಹುತೇಕರಲ್ಲಿ ತೊಂದರೆಗೆ ಮೂಲ ಕಾರಣವೇ ಆಹಾರ. ನಾರಿನ ಅಂಶವಿರುವ ಆಹಾರ ಸೇವನೆ ಜಾಸ್ತಿ ಮಾಡಿದರೆ, ನೀರನ್ನು ಹೆಚ್ಚು ಕುಡಿದರೆ, ಮುಂಜಾನೆ ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿನೀರು (ಅದಕ್ಕೆ ಲಿಂಬೆ ರಸ ಸೇರಿಸಿಕೊಂಡರೆ ಇನ್ನೂ ಉತ್ತಮ) ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆಯ ತೊಂದರೆಯಿಂದ ಪಾರಾಗಬಹುದು. ನಾರಿನ ಅಂಶ ತರಕಾರಿಗಳು, ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಿತ್ಯ ಒಂದಾ ದರೂ ಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಿದ್ದುದಕ್ಕೆ ಇದೂ ಒಂದು ಕಾರಣ ಇರಬಹುದೇನೊ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

