ಸ್ವಾಮೀಜಿ ನೀಡಿದ ಸ್ಪರ್ಶದರ್ಶನ!
ವಾದಗಳು ಬುದ್ಧಿಗ್ರಾಹ್ಯವಾದರೆ, ಅನುಭವ ಆತ್ಮ ಆದಿಯಾಗಿ ಸರ್ವಗ್ರಾಹ್ಯ. ಓದಿದ್ದನ್ನು ಅನುಭವಕ್ಕಿಳಿಸದೆ ಯಾವ ಜ್ಞಾನವೂ ನಮ್ಮದಾಗದು. ಆದ್ದರಿಂದಲೇ ವಿವೇಕಾನಂದರು ಅಧ್ಯಯನಕ್ಕಿಂತ ಅನುಭವಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ದಿನಗಟ್ಟಲೆ ಚರ್ಚಿಸಿದರೂ, ಪುಟಗಟ್ಟಲೆ ಓದಿದರೂ ಅರ್ಥವಾಗದ್ದನ್ನು ಒಂದು ಅನುಭವ ಅರ್ಥಮಾಡಿಸಬಲ್ಲದು ಎಂಬುದನ್ನು ಸ್ವತಃ ಸ್ವಾಮೀಜಿಯೇ ಪ್ರಯೋಗಿಸಿ ತೋರಿಸಿದರು.
ಒಮ್ಮೆ ಸ್ವಾಮೀಜಿ ದಾರಿಯಲ್ಲಿ ಹೋಗುತ್ತಿದ್ದಾಗ, ಶ್ರೀಕೃಷ್ಣನ ಮೆರವಣಿಗೆಯೊಂದು ಬರುತ್ತಿತ್ತು. ಕೆಲವರು ಕೃಷ್ಣನ ವಿಗ್ರಹದ ಮುಂದೆ ಆನಂದದಿಂದ ಭಜನೆ ಮಾಡುತ್ತಿದ್ದರು. ಆಗ ಸ್ವಾಮೀಜಿ ಜತೆಯಲ್ಲಿದ್ದ ಹರಿಸಿಂಗ್ನನ್ನು ಸ್ಪರ್ಶಿಸಿ, 'ನೋಡು, ನೋಡು ಅಲ್ಲಿ ಸಾಕ್ಷಾತ್ ಭಗವಂತ!' ಎಂದು ಉದ್ಗರಿಸಿದರು. ಹರಿಸಿಂಗನ ಕಣ್ಣು ಶ್ರೀಕೃಷ್ಣನ ವಿಗ್ರಹದ ಮೇಲೆ ಬಿದ್ದದ್ದೇ ತಡ, ಅವರು ಭಾವಾತಿಶಯದಿಂದ ಮೈಮರೆತು ನಿಂತುಬಿಟ್ಟರು. ಅವರ ಕಂಗಳಿಂದ ಆನಂದಾಶ್ರು ಧಾರೆಯಾಗಿ ಸುರಿಯತೊಡಗಿತು!
ಸಾಮಾನ್ಯ ಸ್ಥಿತಿಗೆ ಮರಳಿದ ಹರಿಸಿಂಗ್ 'ಸ್ವಾಮೀಜಿ, ನೀವು ನನ್ನ ಒಳಗಣ್ಣನ್ನು ತೆರೆಸಿದಿರಿ. ಗಂಟೆಗಟ್ಟಲೆ ಚರ್ಚಿಸಿದರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದುದು ಕೆವಲ ನಿಮ್ಮ ಸ್ಪರ್ಶಮಾತ್ರದಿಂದ ಗ್ರಾಹ್ಯವಾಯಿತು. ನಿಜಕ್ಕೂ ನಾನು ಆ ವಿಗ್ರಹದಲ್ಲಿ ಸಾಕ್ಷಾತ್ ಭಗವಂತನನ್ನೇ ಕಂಡೆ!' ಎಂದನು.
ಹಿಂದೆ ರಾಮಕೃಷ್ಣರು ನರೇಂದ್ರನಿಗೆ ತಮ್ಮ ಸ್ಪರ್ಶಮಾತ್ರದಿಂದ ಹಲವು ಅದ್ಭುತ, ಅಲೌಕಿಕ ಅನುಭವಗಳನ್ನು ನೀಡಿದ್ದರು. ಈಗ ಸ್ವಾಮೀಜಿ ಮತ್ತೊಬ್ಬರಿಗೆ ತಮ್ಮ ಸ್ಪರ್ಶದಿಂದ ಭಗವದ್ದರ್ಶನ ಮಾಡಿಸಿದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

