ಬೈಟುಕಾಫಿ

ಕರುಳು ವ್ಯಾಧಿಗೆ ಗೊತ್ತಿಲ್ಲ ಕಾರಣ

ಕರುಳು ವ್ಯಾಧಿಗೆ ಗೊತ್ತಿಲ್ಲ ಕಾರಣ
Published On :

ಬಹುಶಃ ಇಂತಹ ತೊಂದರೆ ಅನುಭವಿಸಿದವರಲ್ಲಿ, ಅನುಭವಿಸುತ್ತ ಇರುವವರಲ್ಲಿ ನಿಮ್ಮ ಹತ್ತಿರದವರೂ ಇರಬಹುದು. ಆಗಾಗ ಹೊಟ್ಟೆ ಕೆಡುತ್ತದೆ. ಎಷ್ಟೇ ಪಥ್ಯ ಮಾಡಿದರೂ, ಆಹಾರದಲ್ಲಿ ಕಟ್ಟುನಿಟ್ಟು ಮಾಡಿದರೂ ಪ್ರಯೋಜನ ಆಗುವುದಿಲ್ಲ. ಎಷ್ಟೆಲ್ಲ ವೈದ್ಯರಿಗೆ ತೋರಿಸಿ, ಅವರು ಹೇಳಿದ ಪರೀಕ್ಷೆಗಳಿಗೆಲ್ಲ ಒಳಪಟ್ಟು, ಬರೆದುಕೊಟ್ಟ ಮಾತ್ರೆಗಳನ್ನೆಲ್ಲ ತಿಂದರೂ ಹೊಟ್ಟೆ ಮಾತ್ರ ಸರಿಹೋಗುವುದೇ ಇಲ್ಲ. ನಮಗೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹೊಟ್ಟೆ ಕೆಟ್ಟುಬಿಡುತ್ತದೆ. ಮನೆ ಬಿಟ್ಟು ಹೊರಗಡೆ ಏನನ್ನೂ ತಿಂದಿರುವುದಿಲ್ಲ, ಆದರೂ ಬಾಧೆ. ಆಗಲೂ ಅಷ್ಟೇ. ಏನೇ ಮನೆಮದ್ದು ಮಾಡಿಕೊಂಡರೂ ಪ್ರಯೋ ಜನವಾಗದು. ಕೆಲಹೊತ್ತಿನ ಬಳಿಕ ತಂತಾನೇ ಸಮಸ್ಯೆ ಮಾಯ. ಇದೇಕೆ ಹೀಗೆ ಎನ್ನುವ ಸಮಸ್ಯೆ ವೈದ್ಯಲೋಕವನ್ನೂ ಕಾಡಿದೆ. ಅವರು ಕಂಡುಕೊಂಡಿರುವ ಸಮಾಧಾನ ಎಂದರೆ ಇದಕ್ಕೆಲ್ಲ ಕಾರಣ ದುರ್ಬಲ ಕರುಳು' ಎಂಬುದು. ಪದೇಪದೇ ಅಜೀರ್ಣ, ಭೇದಿ ಇತ್ಯಾದಿ ತೊಂದರೆಗಳಿಗೆ ಒಳಗಾಗುತ್ತಿದ್ದರೆ ಅದನ್ನು 'ಇರಿಟೆಬಲ್ ಬೋವೆಲ್ ಸಿಂಡ್ರೋಮ್‌' (ಐಬಿಎಸ್) ಎನ್ನುವ ತಾಂತ್ರಿಕ ಹೆಸರಿನಿಂದ ಕರೆಯಲಾಗುತ್ತಿದೆ. ಅಕ್ಷರಶಃ ಅನುವಾದ ಮಾಡುವ ಸಾಹಸ ಬೇಡ. ಹಾಗೆ ಮಾಡಲು ಹೋದರೆ 'ಕೆರಳಿಸುವ ಕರುಳಿನ ಸಹಲಕ್ಷಣಗಳು' ಎಂದು ಕರೆಯಬೇಕಾದೀತು! ನಮ್ಮ ಅನುಕೂಲಕ್ಕೆ 'ಕರುಳು ವ್ಯಾಧಿಗಳು' ಎಂದು ಹೇಳಿಕೊಳ್ಳಬಹುದೇನೋ.
ಕರುಳು ವ್ಯಾಧಿಗಳಿಗೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟ. ಕಾರಣವನ್ನೇ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದಮೇಲೆ ಯಾವ ಮದ್ದು ಕೊಡುವುದು? ಆದರೂ ರೋಗಿಯ ಸಮಾಧಾನಕ್ಕಾಗಿ ದೇಹಕ್ಕೆ, ಆರೋಗ್ಯಕ್ಕೆ ಹಾನಿಕರವಲ್ಲದ ಒಂದಷ್ಟು ಔಷಧಗಳನ್ನು ಕೊಡುವುದು ವೈದ್ಯರಿಗೆ ವೃತ್ತಿ ಅನಿವಾರ್ಯ. ಇಲ್ಲದಿದ್ದರೆ, 'ಈ ಡಾಕ್ಟರ್ ಸರಿಯಿಲ್ಲ. ನನ್ನ ಕಾಯಿಲೆಗೆ ಮದ್ದನ್ನೇ ಕೊಟ್ಟಿಲ್ಲ' ಎಂದು ಜನ ಆಡಿಕೊಳ್ಳುವುದಿಲ್ಲವೆ? ಅಮೆರಿಕ ಜನಸಂಖ್ಯೆಯ ಶೇ.15ರಿಂದ 30ರಷ್ಟು ಮಂದಿ ಒಂದಿಲ್ಲೊಂದು ಬಗೆಯ ಕರುಳು ವ್ಯಾಧಿಯಿಂದ ಬಳಲುತ್ತಾರೆ ಎಂದರೆ ಇದರ ತೀವ್ರತೆ ಎಷ್ಟಿರಬಹುದು ಊಹಿಸಿ. ಕರುಳಿನ ದುರ್ಬಲತೆ, ಕರುಳು ವ್ಯಾಧಿ ಇತ್ಯಾದಿಗಳಿಗೆ ಕಾರಣ ಕಂಡುಕೊಳ್ಳುವ ಪ್ರಯತ್ನ ಜಗತ್ತಿನ ಎಲ್ಲೆಡೆ ನಡೆಯುತ್ತಿದೆ. ಬ್ರಿಟನ್ ತಜ್ಞರು 'ಆಹಾರದಿಂದ ಉಂಟಾಗುವ ಪ್ರತಿಕ್ರಿಯೆ ಕರುಳು ವ್ಯಾಧಿಯ ಮೂಲ' ಎನ್ನುವ ನಿಲುವಿಗೆ ಬಂದಿದ್ದಾರೆ. ಅದಕ್ಕೆ ಬಹುತೇಕ ದೇಶಗಳ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ ಕೂಡ. ಅದರ ಆಧಾರದ ಮೇಲೆ ನಾವು ಧೈರ್ಯವಾಗಿ ಹೇಳಬಹುದು, 'ನಮ್ಮ ಆಹಾರದ ಕುರಿತು ಕೊಂಚ ನಿಗಾ ವಹಿಸಿದರೆ ಕರುಳು ವ್ಯಾಧಿಗಳನ್ನು ತಡೆಯಬಹುದು' ಎಂದು!

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.