ಆಹಾರ ಅಲರ್ಜಿಗಳೆಲ್ಲ ಐಬಿಎಸ್ ಅಲ್ಲ!

ಜನಸಾಮಾನ್ಯರು ಮಾತ್ರವಲ್ಲ, ಬಹಳಷ್ಟು ವೈದ್ಯರಲ್ಲೂ ಒಂದು ತಪ್ಪು ಕಲ್ಪನೆ ಇದೆ. ಅದೆಂದರೆ ಆಹಾರ ಅಲರ್ಜಿಗಳನ್ನು ಐಬಿಎಸ್ ಎಂದು ಗುರುತಿಸುವುದು. ವಾಸ್ತವದಲ್ಲಿ ಆಹಾರ ಅಲರ್ಜಿಗಳೆಲ್ಲ 'ಇರಿಟೆಬಲ್ ಬೋವೆಲ್ ಸಿಂಡ್ರೋಮ್' (ಐಬಿಎಸ್) ಅಲ್ಲ. ಐಬಿಎಸ್ ಅನ್ನು ಶಾಶ್ವತವಾಗಿ ಹೋಗಲಾಡಿಸುವುದು ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಅದು ಬಹುಮಟ್ಟಿಗೆ ನಿಜವೂ ಹೌದು. ಏಕೆಂದರೆ ಈ ತೊಂದರೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಔಷಧಗಳು ಇನ್ನೂ ಲಭ್ಯವಿಲ್ಲ. ಇದ್ದುದರಲ್ಲೇ ಸಮಾಧಾನದ ಸಂಗತಿ ಎಂದರೆ ಆಹಾರದಿಂದ ಇದನ್ನು ನಿಯಂತ್ರಿಸಬಹುದು ಎನ್ನುವುದು. ಈಗಿನ ಸಂಶೋಧನೆಗಳು 'ಆಹಾರ'ದಿಂದ ಕರುಳು ವ್ಯಾಧಿಯನ್ನು ಹತೋಟಿಯಲ್ಲಿಡಲು ಸಾಧ್ಯವಿದೆ ಎನ್ನುವುದನ್ನು ನಿರೂಪಿಸುತ್ತಲೇ ಇವೆ. 'ಆಹಾರದಿಂದ ಉಂಟಾಗುವ ಪ್ರತಿಕ್ರಿಯೆ ಕರುಳು ವ್ಯಾಧಿ ಮೂಲ' ಎನ್ನುವುದನ್ನು ಬ್ರಿಟನ್ನ ಸಂಶೋಧಕರು ಪತ್ತೆ ಮಾಡಿದ ಮೇಲೆ ಈ ವಾದಕ್ಕೆ ಇನ್ನಷ್ಟು ಬಲ ಬಂದಿದೆ. ಯಾವ ಬಗೆಯ ಆಹಾರ ಸೇವಿಸಿದಾಗ ಕಿರಿಕಿರಿ ಆಗುತ್ತದೆ ಎನ್ನುವುದನ್ನು ಪತ್ತೆ ಮಾಡಿಕೊಂಡು, ಅಂಥ ಆಹಾರಗಳ ಸೇವನೆ ಕಡಿಮೆ ಮಾಡಿದರೆ ಐಬಿಎಸ್ನಿಂದ ಪಾರಾಗಲು ಸಾಧ್ಯವಿದೆ ಎನ್ನುವುದು ತಜ್ಞರ ಸಲಹೆ. ಕಿರಿಕಿರಿ ಉಂಟುಮಾಡುವ ಆಹಾರಗಳನ್ನು ಸಂಪೂರ್ಣ ವರ್ಜಿಸಿದರೆ ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು.
ವೈದ್ಯರ ಬಳಿ ಹೋಗುವ ಮುನ್ನ ನೀವು ಒಂದು ಸಂಗತಿಯನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಏನೆಂದರೆ ನಿಮಗೆ ಹಾಲಿನ ಅಲರ್ಜಿ ಇದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಲ್ಯಾಕ್ಟೋಸ್ ಅಲರ್ಜಿಯನ್ನೂ ಐಬಿಎಸ್ ಎಂದು ತಪ್ಪಾಗಿ ಡಯೊಗ್ನೈಸ್ ಮಾಡುವ ಸಾಧ್ಯತೆ ಇರುತ್ತದೆ. ಇವೆರಡರ ಲಕ್ಷಣವೂ ಒಂದೇ ಆಗಿರುವುದರಿಂದ ವೈದ್ಯರನ್ನು ಪೂರ್ತಿ ದೂರಲೂ ಸಾಧ್ಯವಿಲ್ಲ. ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗಲೂ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ, ಐಬಿಎಸ್ ತೊಂದರೆಯಲ್ಲೂ ಕಿಬ್ಬೊಟ್ಟೆ ಭಾಗದಲ್ಲೇ ನೋವು ಜಾಸ್ತಿ ಕಾಣಿಸಿಕೊಳ್ಳುವುದು. ಹಾಲಿನಿಂದ ತೊಂದರೆ ಆಗುತ್ತಿದೆಯೇ, ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಸುಲಭ. ಮೂರು ವಾರ ಹಾಲು ಕುಡಿಯುವುದನ್ನು ನಿಲ್ಲಿಸಿ. ಏನೂ ತೊಂದರೆ ಆಗದಿದ್ದರೆ ಹಾಲು ಕುಡಿಯುವುದನ್ನು ಆರಂಭಿಸಿ. ಆಗ ಸಮಸ್ಯೆ ಶುರುವಾದರೆ ನಿಮಗಿರುವುದು ಹಾಲಿನ ಅನರ್ಜಿ ಎಂದು ಅರ್ಥ.
ದೀರ್ಘಕಾಲದಿಂದ ಕಿಬ್ಬೊಟ್ಟೆ ನೋವು, ಅತಿಸಾರ ಇತ್ಯಾದಿಗಳಿಂದ ಬಳಲುತ್ತಿದ್ದೀರಿ ಎಂತಾದರೂ ಹಾಲಿನ ಅಲರ್ಜಿ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ ಎನ್ನುವುದು ತಜ್ಞರ ಸಲಹೆ.
(ಮುಂದುವರಿಯುವುದು)
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


