ಬೈಟುಕಾಫಿ

ವೇಗ ನಿಯಂತ್ರಣವಿಲ್ಲ

Published On :

ಖಾಸಗಿ ಬಸ್‌ಗಳ ಮುಖ್ಯ ಉದ್ದೇಶ ವಾಣಿಜ್ಯಮಯವಾಗಿದ್ದು ಅವರಲ್ಲಿ ಹಣ ಗಳಿಸುವುದೇ ಮುಖ್ಯ ಧ್ಯೇಯವಾಗಿರುತ್ತದೆ. ಆದರೆ, ಸರ್ಕಾರಿ ಬಸ್‌ಗಳು ಸೇವಾ ಮನೋಭಾವನೆಯ ಜೊತೆಗೆ ಪ್ರಯಾಣಿರ ಸುರಕ್ಷತಾ ಜವಾಬ್ದಾರಿಯನ್ನು ಹೊಂದಿರುತ್ತವೆ. ಖಾಸಗಿ ಬಸ್‌ಗಳಲ್ಲಿ ಜನರ ಭಾವನೆಗಳಿಗೆ ಮನ್ನಣೆ ಇರುವುದಿಲ್ಲ. ಅವರು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಾರೆ. ಚಿಕ್ಕದಾದ ಸೀಟುಗಳು, ಸ್ಪಂದನೆ ಇಲ್ಲದ ಚಾಲಕ ನಿರ್ವಾಹಕರು, ತಮಗೆ ಬೇಕಾದ ಹೋಟೆಲ್‌ಗಳಲ್ಲಿಯೇ ತಿಂಡಿ ತಿನ್ನುವ ಅನಿವಾರ್ಯ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಸರ್ಕಾರಿ ಬಸ್‌ಗಳು ವೇಗ ನಿಯಂತ್ರಣ ಹಾಗೂ ನುರಿತ ಚಾಲಕರನ್ನು ಹೊಂದಿರುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆ. ಇದು ಖಾಸಗಿ ಬಸ್‌ಗಳಲ್ಲಿ ವ್ಯತಿರಕ್ತವಾಗಿರುತ್ತದೆ. ಸರ್ಕಾರಿ ಬಸ್‌ಗಳಲ್ಲಿ ವಿಕಲಚೇತನರಿಗೆ ಹಿರಿಯರಿಗೆ, ಮಹಿಳೆಯರಿಗೆ ಆಸನ ವ್ಯವಸ್ಥೆ ಇರುತ್ತವೆ. ಆದರೆ ಖಾಸಗಿ ಬಸ್‌ಗಳಲ್ಲಿ ಈ ಎಲ್ಲ ಸೌಕರ್ಯಗಳು ಇರುವುದಿಲ್ಲ. ಹೀಗಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವುದು ಕ್ಷೇಮಕರ.
- ಬಸವರಾಜ ಆರ್ ಹೊನಗೌಡರ, ಬಸಾಪೂರ

ಮುಜುಗರ ಪ್ರಯಾಣ
ಖಾಸಗಿ ಬಸ್ ಪ್ರಯಾಣವು ಅತಿ ಮುಜುಗರದ ಅನುಭವ. ಕೆಲವಡೆ ಸರ್ಕಾರಿ ಬಸ್‌ಗಳ ಓಡಾಟ ಇರುವುದಿಲ್ಲವೋ ಅಲ್ಲೆಲ್ಲ ಖಾಸಗಿ ಬಸ್‌ನವರದೇ ಸಾಮ್ರಾಜ್ಯ. ಖಾಸಗಿ ಬಸ್ ಪ್ರಯಾಣದ ಫಜೀತಿ ಅದರಲ್ಲಿ ಪ್ರಯಾಣಿಸಿದರೆ ತಿಳಿಯುತ್ತದೆ. ಈ ಬಸ್ಸುಗಳಲ್ಲಿ ಒಳಗೆ ಜಾಗವಿಲ್ಲದಿದ್ದರೂ ಸಹ ಜಾಗ ಇರುವುದೆಂದು ನಂಬಿಸಿ ಇರುವ ಸೀಟುಗಳಿಗಿಂತ ಮೂರು ಪಟ್ಟು ಜನರನ್ನು ತುಂಬಿಸಿಕೊಳ್ಳುತ್ತಾರೆ. ಅದರಿಂದ ಪಿಕ್‌ಪ್ಯಾಕೆಟ್, ಆಭರಣ ಕಳ್ಳತನಗಳು ನಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಹೆಂಗಸರು, ಮಕ್ಕಳು, ವಯೋವೃದ್ಧರು ಪ್ರಯಾಣಿಸುವುದು ಪ್ರಯಾಸದ ಮಾತೇ ಆಗಿದೆ. ಅಷ್ಟೇ ಅಲ್ಲದೆ ಹಣದ ಆಸೆಗಾಗಿ ಬಸ್‌ನ ಟಾಪ್‌ನಲ್ಲೂ ಜನರನ್ನು ತುಂಬಿಸಿಕೊಳ್ಳುತ್ತಾರೆ. ಅವರ ಚಾಲನೆಯ ವೈಖರಿ ಮತ್ತು ಅತಿಯಾದ ಜನ ಸಂದಣಿಯ ಕಾರಣ ಅನಾಹುತಗಳಿಗೆ ಅವಕಾಶ ಮಾಡಿಕೊಡುತ್ತಾರೆ.
- ಮಮತಗೌಡ .ಕೆ

ಕಾನೂನು ನಿರ್ಲಕ್ಷ್ಯ
ಎಲ್ಲಾ ವಿಧದ ವಾಹನಗಳು ವಾಹನ ಕಾಯ್ದೆಯಡಿಯಲ್ಲಿ ಬರುವ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಎಲ್ಲ ಮೋಟಾರು ವಾಹನಗಳ ಕಾರ್ಯ ನಿರ್ವಹಣೆಯ ಬಗ್ಗೆ ಅದರ ಬಳಕೆಯ ಉದ್ದೇಶಕ್ಕೆ ಅನುಗುಣವಾಗಿ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಖಾಸಗಿ ಬಸ್ಸುಗಳ ವಿಷಯಕ್ಕೆ ಬಂದಾಗ, ಹೆಚ್ಚಿನ ಬಸ್ಸುಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ನಿಯಮ ಪಾಲನೆಯ ಬಗ್ಗೆ ಜವಾಬ್ದಾರಿ ಇರುವ ಇಲಾಖೆಗಳ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವ ಹಾಗಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಜನರನ್ನು ನಿಯಮ ಮೀರಿ ತುಂಬಿಸಿಕೊಳ್ಳುವುದು, ರಹದಾರಿ ಪಡೆಯದೇ ಇರುವುದು, ವಿಮೆ ಮಾಡಿಸದಿರುವುದು, ರಸ್ತೆ ತೆರಿಗೆ ವಂಚನೆ ಮುಂತಾದವುಗಳು ಖಾಸಗಿ ಬಸ್ಸುಗಳಲ್ಲಿ ಹೆಚ್ಚಾಗಿದೆ. ಈ ಮೂಲಕ ಖಾಸಗಿ ಬಸ್ಸುಗಳು ಪ್ರಯಾಣಕ್ಕೆ ಅಸುರಕ್ಷಿತವಾಗಿವೆ.
- ರಾಘವೇಂದ್ರ ಅಡಿಗ ತೀರ್ಥಹಳ್ಳಿ,  ಬೆಂಗಳೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.