ಬೈಟುಕಾಫಿ

ಸಂಕೀರ್ಣ ಸಮಸ್ಯೆಗೆ ಪರಿಹಾರ ಎಂತು?

ಸಂಕೀರ್ಣ ಸಮಸ್ಯೆಗೆ ಪರಿಹಾರ ಎಂತು?
Published On :

ಉತ್ತರ ಕನ್ನಡದ ಯಲ್ಲಾಪುರದಿಂದ ಓದುಗ ಮಿತ್ರರೊಬ್ಬರು ವಿವರವಾದ ಪತ್ರ ಬರೆದಿದ್ದಾರೆ. 'ನಿಮ್ಮ ಬರಹಗಳಿಂದ ಸಾಕಷ್ಟು ಪ್ರಯೋಜನ ಆಗಿದೆ. ಈಗ ನಾನೊಂದು ವಿಚಿತ್ರ ಪರಿಸ್ಥಿತಿಯಲ್ಲಿದ್ದೇನೆ. ನನಗೆ ಮೂಲವ್ಯಾಧಿ ತೊಂದರೆ ಇದೆ. ತೀವ್ರ ಸ್ವರೂಪದ ಅಲ್ಸರ್ ಇರುವುದು ಇತ್ತೀಚೆಗೆ ದೃಢಪಟ್ಟಿದೆ. ಎರಡೂ ತೊಂದರೆಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಅಲ್ಸರ್ಗೆ ಸಂಬಂಧಿಸಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮೂಲವ್ಯಾಧಿ ಹೆಚ್ಚಾಗುತ್ತದೆ, ಮೂಲವ್ಯಾಧಿಯ ತೀವ್ರತೆ ಕಡಿಮೆಯಾಗುವಂಥ ಆಹಾರ ಸೇವಿಸಿದರೆ ಹೊಟ್ಟೆನೋವು (ಅಲ್ಸರ್) ಜಾಸ್ತಿ ಆಗುತ್ತದೆ. ಸದ್ಯದ ಮಟ್ಟಿಗೆ ನಾನು ಎಂತಹ ಆಹಾರ ಸೇವಿಸುವುದು ಸೂಕ್ತ?' ಇದು ಅವರ ಪತ್ರದ ಸಾರಾಂಶ.
ಯಾವ ಕಾಯಿಲೆಯಿಂದ ಯಾವ ಆಹಾರದಿಂದ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಸಿಕೊಡುವ ಉದ್ದೇಶದಿಂದಲೇ ನಾನು ಈ ಸರಣಿ ಆರಂಭಿಸಿದ್ದು. ಬಹಳಷ್ಟು ಮಂದಿಗೆ ಅದರಿಂದ ಪ್ರಯೋಜನ ಆಗುತ್ತಿದೆ ಎನ್ನುವುದು ಅವರು ಕಳಿಸುವ ಎಸ್ಎಂಎಸ್ಗಳು, ಪತ್ರಗಳಿಂದಲೇ ಗೊತ್ತಾಗುತ್ತಿದೆ. ಬಹಳಷ್ಟು ಸಮಸ್ಯೆಗಳನ್ನು ವೈದ್ಯರ ಸಹಾಯವಿಲ್ಲದೆ ಕೇವಲ ಆಹಾರ ಪದ್ಧತಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಆರಂಭದಲ್ಲೇ ಕಡಿಮೆ ಮಾಡಿಕೊಂಡಿರುವುದಾಗಿ ಅನೇಕರು ತಿಳಿಸಿದ್ದಾರೆ.
ಆದರೆ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಡಯಟ್ ವಿಚಾರವಾಗಿ ದ್ವಂದ್ವ, ಗೊಂದಲಗಳು ಸಾಮಾನ್ಯ. ಅವರು ಏಕಾಏಕಿ ತಮ್ಮ ಆಹಾರ ಪದ್ಧತಿ ಬದಲಿಸಿಕೊಳ್ಳುವುದೂ ಸರಿಯಲ್ಲ. ವೈದ್ಯರ ಸಲಹೆ ಮೇರೆಗೆ ತಮ್ಮ ತಿಂಡಿ, ಊಟಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ನಿಮ್ಮ ಕುಟುಂಬ ವೈದ್ಯರಿಗೆ (ಫ್ಯಾಮಿಲಿ ಫಿಜಿಶಿಯನ್) ಕುಟುಂಬದ ಪ್ರತಿ ವ್ಯಕ್ತಿಯ ದೇಹಪ್ರಕೃತಿ ಗೊತ್ತಿರುತ್ತದೆ. ನಿಮ್ಮ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆ ನೀಡುವಾಗ ಕೆಲವೊಮ್ಮೆ ಅವರೇ ಪಥ್ಯ ಅಥವಾ ಡಯಟ್ನಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳನ್ನೂ ಸೂಚಿಸುತ್ತಾರೆ. ಅದನ್ನು ಪಾಲಿಸುವುದು ಉತ್ತಮ. ಮುಖ್ಯವಾಗಿ ನಿಮ್ಮ ದೇಹಸ್ಥಿತಿ, ಆರೋಗ್ಯ ಸಮಸ್ಯೆಯ ತೀವ್ರತೆ ಎಲ್ಲವೂ ಅವರಿಗೆ ತಿಳಿದಿರುತ್ತದೆ ಮತ್ತು ನಿಮ್ಮ ಸಮಗ್ರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ಅವರು ಸಲಹೆ ಮಾಡುತ್ತಾರೆ. ಕೆಲವು ಆಸ್ಪತ್ರೆಗಳಲ್ಲಂತೂ ನುರಿತ ಡಯಟಿಶಿಯನ್ಗಳೇ ಇರುತ್ತಾರೆ. ಅವರ ಸಲಹೆ ಮೇರೆಗೇ ಪ್ರತಿ ರೋಗಿಗೂ ನಿತ್ಯ ಆಹಾರ ನೀಡಲಾಗುತ್ತದೆ. ಅವರು ಎಲ್ಲ ರೋಗಿಗಳ ಆರೋಗ್ಯ ಇತಿಹಾಸವನ್ನು ವಿವರವಾಗಿ ಅಧ್ಯಯನ ಮಾಡಿರುತ್ತಾರೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ರೋಗಿ ಪಾಲಿಸಬೇಕಾದ ಆರೋಗ್ಯಕರ ಆಹಾರ ಶೈಲಿ ಕುರಿತು ಮಾಹಿತಿ ನೀಡುತ್ತಾರೆ. ಆದ್ದರಿಂದ ಒದಕ್ಕಿಂತ ಹೆಚ್ಚು ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವವರು ನಿಮ್ಮ ವೈದ್ಯರನ್ನೂ ಒಮ್ಮೆ ಸಂಪರ್ಕಿಸಿ, ಅವರ ಸಲಹೆಯನ್ನೂ ಪಡೆದುಕೊಳ್ಳುವುದು ವಿಹಿತ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.