ಪರಾವಲಂಬಿಯ ಸಂತಸ ಬೇಡ

ಸಂತಸ ಎನ್ನುವುದು ಸಹಜ ಪ್ರಕ್ರಿಯೆ. ತುಂಬ ಆತ್ಮೀಯರನ್ನು ನೋಡಿದಾಗ, ತೀರಾ ಹತ್ತಿರದವರೊಂದಿಗೆ ನಮ್ಮ ಚಿಂತನೆಗಳನ್ನು ಹಂಚಿಕೊಂಡಾಗ, ತುಂಬ ಸುಮಧುರವಾದುದನ್ನು ನೋಡಿದಾಗ, ನಮ್ಮ ನಿರೀಕ್ಷೆಗೆ ತಕ್ಕಂತೆ ಒಳಿತಾದಾಗ- ಹೀಗೆ ಸಂತಸಕ್ಕೆ ಕಾರಣಗಳು ಹಲವು. ಅದು ಆ ಕ್ಷಣವಷ್ಟೆ ಅಥವಾ ಆ ಸನ್ನಿವೇಶ ನಮ್ಮ ಕಣ್ಣ ಮುಂದಿರುವವರೆಗೂ ನಾವು ಸಂತಸ ಪಡುತ್ತಿರುತ್ತೇವೆ. ಹೆಚ್ಚೆಂದರೆ ಒಂದಿಡೀ ದಿನ. ಅಷ್ಟೇ, ಸಂತಸವೆಂಬುದು ನಮ್ಮ ನೆನಪಿನ ಚಿತ್ರಪಟವನ್ನು ಸೇರಿ ಬಿಡುತ್ತದೆ. ನಾವು ಅನುಭವಿಸಿದ್ದು ಮುಂದೆಲ್ಲ ಸುಂದರ ನೆನಪುಗಳಾಗಿ ಪರಿವರ್ತನೆಯಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಇಂಥ ಸವಿ ನೆನಪುಗಳನ್ನು ಮನಸ್ಸು ರೀಕಾಲ್ ಮಾಡಿಕೊಳ್ಳುತ್ತದೆ. ಆಗಲೂ ಎಂಥದ್ದೋ ಪುಳಕ. ಆದರದು ನೈಜ ಸಂತಸವಾಗಿರುವುದಿಲ್ಲ. ಏಕೆಂದರೆ ಅಂಥ ಸಂತಸದ ನೆನಪು ಯಾವಜ್ಜೀವ ಉಳಿದಿರಲು ಸಾಧ್ಯವೇ ಇಲ್ಲ. ಮತ್ತೊಂದು ಸನ್ನಿವೇಶವನ್ನು ಎದುರಿಸಿದಾಗ ಅಥವಾ ಇನ್ಯಾವುದೋ ಯೋಚನೆಗಳು ಬಂದಾಗ, ಇಲ್ಲವೇ ನಮ್ಮ ಗಮನ ಇನ್ನೊಂದೆಡೆಗೆ ಹರಿದಾಗ ತನ್ನಿಂದತಾನೇ ಸಂತಸದ ನೆನಪು ಮರೆಯಾಗಿಬಿಡುತ್ತದೆ. ಹಾಗಾಗಿ ಅದೊಂದು ಮೃತ ಸ್ಮರಣೆ. ಸಂತಸದ ಕ್ಷಣಗಳನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದೇವೆ ಎಂದರೆ ಅಂಥದ್ದನ್ನು ನಾವು ಮತ್ತೆ ಅನುಭವಿಸಲು ಕಾತರಿಸುತ್ತಿದ್ದೇವೆ ಎಂತಲೇ ಅರ್ಥ. ನೆನಪುಗಳೇ ನಿಜವಾದ ಸಂತಸವಾಗಿದ್ದರೆ ಪುನಃ ಅನುಭವವನ್ನೇ ಮನಸ್ಸು ಬಯಸುತ್ತಿರಲಿಲ್ಲ. ಹೀಗಾಗಿ ಕಣ್ಣ ಮುಂದಿರುವುದು ಮಾತ್ರವೇ ನೈಜ ಆನಂದ ಮತ್ತು ಸಂತಸ. ನೆನಪುಗಳ ಸಹಾಯವಿಲ್ಲದೇ ನಾವು ಸಂತಸವನ್ನು ಅನುಭವಿಸಲು ಸಾಧ್ಯವಾಗುವುದಾದರೆ ಮತ್ತು ಅಂಥ ಸಂತಸ ಯಾವಾಗಲೂ ನಮ್ಮ ಬಳಿಯೇ ಇರುತ್ತದೆ ಎನ್ನುವುದಾದರೆ ಅದು ಮಾತ್ರವೇ ಸತ್ಯ. ಹಾಗೆ ನೆನಪುಗಳನ್ನು ಬಿಸುಟು ಸ್ವತಂತ್ರವಾಗಿ ನಾವು ಸಂತಸವಾಗಿಯೇ ನಗುನಗುತ್ತಲೇ ಇರುವುದು ಸುಲಭದ ಮಾತಲ್ಲ. ಆಂತರಂಗಿಕವಾಗಿ ಮಾಗಿದವನು ಮಾತ್ರವೇ ಹೀಗೆ ಯಾವತ್ತಿಗೂ ಸಂತಸವಾಗಿಯೇ ಇರುತ್ತಾನೆ. ಅಂಥ ಸೂಕ್ಷ್ಮತೆಯ ಸಾಧನೆ ನಮ್ಮಿಂದ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ನಾವು ಸುಂದರ ನೆನಪುಗಳ ಮೊರೆ ಹೋಗುತ್ತೇವೆ. ಹೀಗೆ ಪರಾವಲಂಬಿ ಸಂತಸ ನಮಗೇಕೆ ಬೇಕು? ನೆನಪುಗಳನ್ನು ಪ್ರಚೋದಿಸದ ಸ್ವಚ್ಛಂದ ಸಂತಸದಲ್ಲಿ ನಮ್ಮ ಮನಸ್ಸು ಸದಾ ವಿಹರಿಸುವಂತಾಗುವ ಅಂತರಂಗ ಶುದ್ಧತೆಯನ್ನು ಸಾಧಿಸೋಣ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


