'ಹಸಿರು ಶಕ್ತಿ' ಮಾಡುತ್ತದೆ ಜಾದೂ

ಕೆಲವರಿಗೆ ವಿಪರೀತ ಟೀ ಕುಡಿಯುವ ಅಭ್ಯಾಸ. ಇನ್ನು ಕೆಲವರಿಗೆ ವೃತ್ತಿ ನಿಮಿತ್ತ ಆಗಾಗ ಚಹಾ, ಕಾಫಿ ಕುಡಿಯುವುದು ಅನಿವಾರ್ಯ. ಇಂಥವರು ಗ್ರೀನ್ ಟಾ ಕುಡಿಯುವುದು ಉತ್ತಮ. ಚೀನಾದಲ್ಲಿ ಆರಂಭವಾದ ಗ್ರೀನ್ ಟೀ ಬಳಕೆ ಈಗ ಭಾರತವೂ ಸೇರಿದಂತೆ ಏಷ್ಯದ ಎಲ್ಲೆಡೆ ಸಾಮಾನ್ಯವಾಗಿದೆ. ಮಾಮೂಲಿಯಾಗಿ ಬಳಸುವ ಬ್ಲ್ಯಾಕ್ ಟೀಗಿಂತಲೂ ಇದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಆಹಾರ ತಜ್ಞರ ಅಭಿಪ್ರಾಯ. ಗ್ರೀನ್ ಟೀ ಸಿದ್ಧಪಡಿಸುವಾಗ ಆಕ್ಸಿಡೇಶನ್ ಪ್ರಕ್ರಿಯೆ ಬಹಳ ಕಡಿಮೆ ಪ್ರಮಾಣದಲ್ಲಿ ನಡೆಯುತ್ತದೆ ಎನ್ನುವುದೂ ಇದಕ್ಕೆ ಕಾರಣವಾಗಿರಬಹುದು. ಈಗೀಗ ಇದನ್ನು 'ಡಯಟರಿ ಸಪ್ಲಿಮೆಂಟ್' ಆಗಿಯೂ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ.
ಗ್ರೀನ್ ಟೀ ಅಲ್ಸರ್ಗೂ ಅತ್ಯುತ್ತಮ ಮದ್ದು ಎನ್ನುವುದನ್ನು ಕಂಡುಹಿಡಿದವರು ಜಪಾನೀಯರು. ಹೇಳಿಕೇಳಿ ಜಪಾನ್ನಲ್ಲಿ ಅಲ್ಸರ್ನಿಂದ ಬಳಲುವವರ ಸಂಖ್ಯೆ ಹೆಚ್ಚು. ಅಲ್ಲಿನ ಆಹಾರ ಪದ್ಧತಿಯೂ ಅದಕ್ಕೆ ಕಾರಣ. ಜಪಾನ್ನ ಡಾ.ಯುಕಿಹೊಕೊ ಹಾರಾ ಎನ್ನುವ ಆಹಾರ ತಜ್ಞ ಇಲಿಗಳ ಮೇಲೆ ಪ್ರಯೋಗ ನಡೆಸಿ ಗ್ರೀನ್ ಟೀ ಮಹಿಮೆಯನ್ನು ಕಂಡುಕೊಂಡ. ಯಥಾಪ್ರಕಾರ ಇಲಿಗಳಿಗೆ ಅಲ್ಸರ್ಕಾರಕಗಳನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಿದ. ಜೀರ್ಣಾಂಗ ವೃಣ ಕಾಣಿಸಿಕೊಂಡ ಬಳಿಕ ಕೆಲವು ಇಲಿಗಳಿಗೆ ನಿಯಮಿತವಾಗಿ ಗ್ರೀನ್ ಟೀ ಕುಡಿಸಿದ. ಕೆಲವೇ ದಿನಗಳಲ್ಲಿ ಅವು ಸಂಪೂರ್ಣ ಗುಣವಾಗಿದ್ದವು. ಅಲ್ಸರ್ಗೆ ಸಾಮಾನ್ಯವಾಗಿ ನೀಡಲಾಗುವ ಔಷಧಗಳನ್ನು ಕೆಲವು ಇಲಿಗಳಿಗೆ ಕೊಟ್ಟ. ಗ್ರೀನ್ ಟೀ ಸೇವಿಸಿದ ಇಲಿಗಳು ಗುಣಮುಖವಾದ ಅವಧಿಗೆ ಹೋಲಿಸಿದರೆ ಈ ಇಲಿಗಳ ಗಾಯ ಒಣಗುವಿಕೆ ಪ್ರಮಾಣ ಶೇ 22ರಷ್ಟು ಮಾತ್ರವೇ ಇತ್ತು! 'ಜಪಾನೀಯರು ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳದೇ ಇದ್ದಿದ್ದರೆ ಇಲ್ಲಿ ಅಲ್ಸರ್ಗೆ ತುತ್ತಾಗುವವರ ಸಂಖ್ಯೆ ಇನ್ನೂ ಗಣನೀಯವಾಗಿ ಏರುತ್ತಿತ್ತು' ಎಂದು ಖಚಿತವಾಗಿ ಹೇಳುತ್ತಾನೆ ಡಾ.ಯುಕಿಹೊಕೊ.
ಗ್ರೀನ್ ಟೀಯ ಯಾವ ಅಂಶ ನಿರ್ದಿಷ್ಟವಾಗಿ ಅಲ್ಸರ್ ಅನ್ನು ಗುಣಪಡಿಸುತ್ತದೆ ಎನ್ನುವ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಮೂಲತಃ ಹಸಿರು ಚಹಾ ಆ್ಯಂಟಿಬ್ಯಾಕ್ಟೀರಿಯಲ್ ಗುಣ ಅಂದರೆ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಪ್ರತಿರೋಧಿಸುವ ಗುಣ ಹೊಂದಿದೆ. ಇದರಲ್ಲಿರುವ ಕೆಲವು ರಾಸಾಯನಿಕಗಳು ಪಿತ್ತಕೋಶದ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಇವೆರಡೂ ಸೇರಿ ಅಲ್ಸರ್ ಬೇಗ ಗುಣವಾಗುವಂತೆ ಮಾಡುತ್ತವೆ ಎನ್ನುವ ವಾದವಿದೆ.
ನಿತ್ಯ ಹೆಚ್ಚು ಚಹಾ ಕುಡಿಯುವ ಅಭ್ಯಾಸ ಉಳ್ಳವರು ಗ್ರೀನ್ ಟೀ ರೂಢಿಸಿಕೊಂಡರೆ ಇಷ್ಟವಾದಾಗಲೆಲ್ಲ ಚಹಾವನ್ನೂ ಕುಡಿಯಬಹುದು, ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಏನಂತೀರಾ?
(ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


