ಸಮಾಜಜೀವನದಲ್ಲಿ ನಮ್ಮ ನಡೆ-ನುಡಿಗಳನ್ನು ಅನುಕೂಲಕ್ಕೆ ತಕ್ಕಂತೆ ತೂಗಿಸಿಕೊಂಡು ಮುನ್ನಡೆಯುತ್ತೇವೆ. ಆದರೆ ನಾವು ಸಚ್ಚಾರಿತ್ರ್ಯವುಳ್ಳವರಾದಾಗ ಸಮಾಜವನ್ನೇ ಚಾರಿತ್ಯ್ರಕ್ಕನುಗುಣವಾಗಿ ಸಮನ್ವಯಿಸುತ್ತೇವೆ. ಆಗ ವ್ಯಕ್ತಿ ಮತ್ತು ಸಮಾಜವೆರಡೂ ಸಚ್ಚಾರಿತ್ಯ್ರ ಹೊಂದುತ್ತವೆ. ನಾವು ಸಮಾಜಕ್ಕೆ, ದೇಶಕ್ಕೆ, ಭವಿಷ್ಯದ ಜನಾಂಗಕ್ಕೆ ಕೊಡಮಾಡಬೇಕಾದ್ದು ಇದನ್ನೇ.
'ಜಗತ್ತಿಗೆ ಬೇಕಾಗಿರುವುದು ಶುದ್ಧ ಚಾರಿತ್ರ್ಯ. ಯಾರ ಜೀವನದಲ್ಲಿ ನಿರಂತರವೂ ನಿಸ್ವಾರ್ಥ ಪ್ರೇಮ, ತ್ಯಾಗಗಳು ನಂದಾದೀವಿಗೆಯಂತೆ ಉರಿಯುತ್ತಿವೆಯೋ, ಅಂತಹ ಪುಣ್ಯಾತ್ಮರು ಜಗತ್ತಿಗೆ ಬೇಕಾಗಿದ್ದಾರೆ. ಸತ್ಯ, ಪ್ರೇಮ, ನಿಷ್ಕಾಪಟ್ಯದೆದುರು ಯಾವುದೂ ನಿಲ್ಲಲಾರದು. ಸಹನೆ, ಪಾವಿತ್ಯ್ರ, ಧೈರ್ಯ ಮತ್ತು ದೃಢವಾದ ಕಾರ್ಯವನ್ನು ನೆನಪಿನಲ್ಲಿಡು.'
'ಒಳ್ಳೆಯದನ್ನೇ ಮಾಡು, ಒಳ್ಳೆಯದನ್ನೇ ಆಲೋಚಿಸು, ಯಾರನ್ನೂ ಕೆಟ್ಟವರೆಂದು ಹೇಳಬೇಡ. ಆತ್ಮಗೌರವದಿಂದ ವ್ಯವಹರಿಸು. ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ನಿಗ್ರಹಿಸಿ. ಇಚ್ಛಾಶಕ್ತಿಯ ಮೂಲಕ ಅದು ಕೇವಲ ಮೃಗೀಯ ಆನಂದದಲ್ಲಿ ವ್ಯರ್ಥವಾಗದಂತೆ, ಅಧ್ಯಾತ್ಮಿಕ ಶಕ್ತಿಯನ್ನಾಗಿ ಪರಿವರ್ತಿಸಬೇಕು. ಎಲ್ಲ ನೀತಿ, ಧರ್ಮದ ತಳಹದಿಯೇ ಬ್ರಹ್ಮಚರ್ಯ.'
ಬ್ರಹ್ಮಚರ್ಯದ ಅಭ್ಯಾಸದಿಂದ ಮೆದುಳಿನಲ್ಲಿ ವಿಶೇಷ ಶಕ್ತಿ ಉಂಟಾಗುವುದು. ಅಂತಹವರಲ್ಲಿ ಅದ್ಭುತವಾದ ಸಂಕಲ್ಪಶಕ್ತಿ ಇರುವುದು. ಕಟ್ಟುನಿಟ್ಟಾದ ಬ್ರಹ್ಮಚರ್ಯದ ಅಭ್ಯಾಸದಿಂದ ಎಲ್ಲ ವಿದ್ಯೆ ಕಲಿಕೆ ಅತ್ಯಲ್ಪ ಕಾಲದಲ್ಲೇ ಕರತಲಾಮಲಕವಾಗುತ್ತದೆ. ನಮ್ಮ ದೇಶದಲ್ಲಿ ಬ್ರಹ್ಮಚರ್ಯದ ಅಭಾವದಿಂದ ಎಲ್ಲವೂ ವಿನಾಶದ ಅಂಚಿನಲ್ಲಿರುವುದು. ಆದ್ದರಿಂದ ಚಾರಿತ್ರ್ಯವಂತರಾಗಿ...
- ಆನಂದ ಎಸ್.ಎನ್.