ಭ್ರಮೆಯ ಪೊರೆ ಕಳಚಲಿ
ಈ ಭ್ರಮೆ ಎಂಬುದಿದೆಯಲ್ಲಾ ಅದಕ್ಕಿಂತ ಅಪಾಯಕಾರಿ ಸಂಗತಿ ಮತ್ತೊಂದಿಲ್ಲ. ಭ್ರಮೆಗೆ ಬಿದ್ದು ವರ್ತಿಸುವುದರಿಂದ ಜೀವನದಲ್ಲಿ ಅದೆಷ್ಟೋ ಅಮೂಲ್ಯ ಸಂಗತಿಗಳನ್ನು ನಾವು ಕಳಕೊಳ್ಳುತ್ತೇವೆ. ಬಹಳಷ್ಟು ಸಂದರ್ಭದಲ್ಲಿ ನಮ್ಮನ್ನು ನಾವು ಏನೋ ಅಂದುಕೊಂಡು ಸಾಗುತ್ತಿರುತ್ತೇವೆ. ನಮ್ಮಷ್ಟಕ್ಕೆ ನಾವೇ ಬುದ್ಧಿವಂತ ಅಂದುಕೊಳ್ಳುವುದೋ; ನನ್ನನ್ನು ಅವಳು ಸಿಕ್ಕಾಪಟ್ಟೆ ಪ್ರೀತಿ ಮಾಡುತ್ತಿದ್ದಾಳೆ. ಏಕೆಂದರೆ ಅವಳು ನನ್ನೊಂದಿಗೆ ಸದಾ ಹರಟುತ್ತಾ ಸಲುಗೆಯಿಂದ ಇರುತ್ತಾಳೆ; ನಾನು ಏನು ಮಾಡಿದರೂ ಅಪ್ಪ ಬಯ್ಯೋದಿಲ್ಲ, ಅಪ್ಪನಿಗೆ ನಾನೆಂದರೆ ಹೆಚ್ಚು ಪ್ರೀತಿ; ಬಾಸ್ ನನ್ನೆಲ್ಲ ತಪ್ಪುಗಳನ್ನು ಕ್ಷಮಿಸುತ್ತಾರೆ. ಏಕೆಂದರೆ ನಾನು ಅವರಿಗೆ ಆಫೀಸಿನಲ್ಲಿ ತೀರಾ ಹತ್ತಿರದವನು... ನಾನು ಅತ್ಯಂತ ಜನಪ್ರಿಯ ನಟ, ಹೀಗಾಗಿ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ...ಹೀಗೆ ಭ್ರಮಾ ಲೋಕದಲ್ಲಿ ವಿಹರಿಸುತ್ತಲೇ ಇರುತ್ತೇವೆ. ಇದಕ್ಕೆ ಯಾವುದೇ ಆಧಾರಗಳಿರುವುದಿಲ್ಲ. ಇದು ಎಲ್ಲ ಸಂದರ್ಭದಲ್ಲೂ ವಾಸ್ತವಕ್ಕೆ ಹತ್ತಿರವಿರಲೇಬೇಕೆಂದೂ ಇಲ್ಲ. ಆದರೂ ಪ್ರತಿಯೊಬ್ಬರೂ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಮನಸ್ಸಿನ ನೇರಕ್ಕೆ ಅಂದುಕೊಂಡು ನಡೆಯುತ್ತಲೇ ಇರುತ್ತಾರೆ. ಇದು ಹೀಗೇಕೆ ಎಂದು ಕೇಳಿದರೆ ಉತ್ತರವಿಲ್ಲ. ಸಿಕ್ಕರೂ ಅದು ಸ್ಪಷ್ಟವಾಗಿರುವುದಿಲ್ಲ. ಮಗು ಅಪ್ಪನನ್ನು ಅತಿಯಾಗಿ ಪ್ರೀತಿಸುತ್ತದೆ.ಹಾಗೆ ಯೇ ಅಪ್ಪನೂ ಮಗುವನ್ನು ಪ್ರೀತಿಸುತ್ತಾನೆ. ಅಂಥ ಪ್ರೀತಿಯಲ್ಲಿ ಅಪ್ಪ ತನಗೆ ಹೊಡೆಯಲಿಕ್ಕಿಲ್ಲ ಎಂಬುದು ಮಗುವಿನ ನಂಬುಗೆ. ಸಣ್ಣಪುಟ್ಟ ತಪ್ಪಿಗೆ ಹೊಡೆತದಂಥ ಶಿಕ್ಷೆ ಏಕೆ ಎಂಬ ಅಪ್ಪನ ಪ್ರಜ್ಞಾಪೂರ್ವಕ ನಡೆಯನ್ನೇ ಅಪ್ಪ ಏನು ಮಾಡಿದರೂ ನನ್ನನ್ನು ಶಿಕ್ಷಿಸುವುದಿಲ್ಲ ಎಂದು ಮಗು ಭ್ರಮಿಸುವುದು ತಪ್ಪಾಗುತ್ತದೆ. ಇಂಥ ಭ್ರಮೆ ಮಗುವಿನ ಕೈಯಲ್ಲಿ ಮುಂದೊಂದು ದಿನ ತೀರಾ ಅಪಾಯಕಾರಿ ಅಪರಾಧ ಮಾಡಿಸಲೂಬಹುದು. ಹೀಗೆಯೇ ಎಲ್ಲ ಸನ್ನಿವೇಶಕ್ಕೂ ಅನ್ವಯವಾಗುತ್ತದೆ. ನಮ್ಮೊಳಗಿನ ಭ್ರಮೆ ನಮನ್ನು ಮಿತಿಮೀರಿ ವರ್ತಿಸುವಂತೆ ಪ್ರೇರೇಪಿಸುತ್ತದೆ. ಅದರಿಂದ ನಿರೀಕ್ಷೆಗಳು ಹೆಚ್ಚುತ್ತಾ ಹೋಗುತ್ತವೆ. ಅಂಥ ನಿರೀಕ್ಷೆಗಳು ಹುಸಿಯಾದಾಗ ನಿರಾಸೆ ಕಾಡಿ ಭ್ರಮನಿರಸನದ ಹಂತ ತಲುಪುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ನಮ್ಮೊಳಗಿನ ಭ್ರಮೆ ಯಾವತ್ತಿದ್ದರೂ ಅಪಾಯಕಾರಿಯೇ. ಇದಕ್ಕಿರುವ ಏಕೈಕ ಮದ್ದು ನಮ್ಮೊಳಗಿನ ಇಂಥ ಪೊರೆಯನ್ನು ಕಳಚಿ ಸದಾ ಜಾಗೃತರಾಗಿರುವುದು. ಒಂದು ಅಂಶವನ್ನು ನೆನಪಿಟ್ಟುಕೊಳ್ಳಲೇಬೇಕು. ಭ್ರಮೆಯ ಮೇಲೆ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಜೀವನ ವಾಸ್ತವದ ಮೇಲೆ ನಿಂತಿರುತ್ತದೆಯೇ ವಿನಾ ಕಲ್ಪನೆಯ ಮೇಲಲ್ಲ. ನಮ್ಮ ಊಹಾ ಶಕ್ತಿ ನಮ್ಮೊಳಗಿನ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕೇ ವಿನಾ ಅದು ಯಾವತ್ತಿಗೂ ನಮ್ಮ ಸಾಧನೆಗೆ ಆಡ್ಡಿಯಾಗಬಾರದು. ಯಶಸ್ವಿ ವ್ಯಕ್ತಿಗೆ ಎಂದಿಗೂ ತನ್ನ ಬಗ್ಗೆಯಾಗಲೀ, ತನ್ನ ಸುತ್ತಲಿನವರ ಬಗೆಗಾಗಲೀ ಭ್ರಮೆಗಳಿರುವುದೇ ಇಲ್ಲ. ವಾಸ್ತವದ ವಿವೇಚನೆಯೊಂದಿಗೆ ಮಾತ್ರ ಆತ ತನ್ನನ್ನು ತಾನು ವಿಮರ್ಶೆಗೊಳಿಸಿಕೊಳ್ಳುತ್ತಾನೆ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

