ಬೈಟುಕಾಫಿ

ಕತ್ತಲೆಯಲ್ಲಿ ಮಿಂಚು ಹುಳುವಾಗಿ!

Published On :

ಸುತ್ತೆಲ್ಲ ಕತ್ತಲಾವರಿಸಿರುತ್ತದೆ. ಒಬ್ಬರ ಮುಖ ಒಬ್ಬರಿಗೆ ಕಾಣದಷ್ಟು ಗಾಢ ಕತ್ತಲೆ. ಅಲ್ಲೊಂದು ಮಿಣುಕು ದೀಪವನ್ನು ಹಚ್ಚಿಡಿ, ಕ್ಷಣದಲ್ಲಿ ನಿಮ್ಮನ್ನು ಆವರಿಸಿದ್ದ ಆತಂಕ, ದುಗುಡಗಳು ನಿವಾರಣೆಯಾಗಿ ಮುಖದಲ್ಲೊಂದು ಮಂದಹಾಸ ತೇಲಿ ಹೋಗುತ್ತದೆ. ಆವರೆಗೆ ಕವಿದಿದ್ದ ಎಂಥದ್ದೋ ಭಯ ದೂರವಾಗುತ್ತದೆ. ಒಂದು ರೀತಿಯ ನಿರಾಳತೆಯ ಭಾವ ಮೂಡಿ ನಿಟ್ಟುಸಿರು ಹೊರಬರುತ್ತದೆ. ಅಷ್ಟಕ್ಕೆಲ್ಲ ಕಾರಣ ಆ ಒಂದು ಪುಟ್ಟ ದೀಪ.
ನಿಧಾನಕ್ಕೆ ಸಹಜ ಮಾತಿಗೆ ಆರಂಭಿಸಿರುತ್ತೀರಿ. ಅಷ್ಟಕ್ಕೂ ದೀಪವೇನೂ ನಿಮಗೆ ಅಭಯವನ್ನು ನೀಡಲಿಲ್ಲ. ಬಾಯಿ ಬಿಟ್ಟು ನಾನಿದ್ದೇನೆ ಹೆದರಬೇಡಿ ಎಂದು ಹೇಳಲಿಲ್ಲ. ತನ್ನ ಪಾಡಿಗೆ ತಾನು ಬೆಳೆಗಲು ಆರಂಭಿಸುತ್ತದೆಯಷ್ಟೆ. ಏನೊಂದು ಹೇಳದಿದ್ದರೂ ನಿಮಗೆ ಇಡೀ ವಾತಾವರಣದ ಸ್ಪಷ್ಟ ಕಲ್ಪನೆಯನ್ನು ಅದು ಮೂಡಿಸಿರುತ್ತದೆ. ಬದುಕಿನಲ್ಲಿ ಸಾಧನೆ ಎಂಬುದು ಹಾಗೆಯೇ, ಸದ್ದಿಲ್ಲದೇ ಆಗಬೇಕಾದುದು. ನಮ್ಮ ಸಾಮರ್ಥ್ಯವೇನೆಂಬುದು ತನ್ನಿಂದ ತಾನೆಯೇ ಸುತ್ತಲಿನವರಿಗೆ ಅರಿವಾಗಬೇಕೇ ಹೊರತೂ ಬಾಯಿಬಿಟ್ಟು ಹೇಳಿಕೊಳ್ಳುವಂತಾಗಬಾರದು. ನಿಜವಾದ ಯಶಸ್ಸು ಕತ್ತಲೆಯಲ್ಲಿ ಬೆಳಗುವ ದೀಪದಂತೆ. ಅದರ ಅಸ್ತಿತ್ವನ್ನು ಸ್ವತಃ ಅದು ಎಂದಿಗೂ ಸಾರುವುದಿಲ್ಲ. ಸುತ್ತೆಲ್ಲ ಬೆಳಗಲಾರಂಭಿಸುತ್ತಿದ್ದಂತೆಯೇ ದೀಪ ಅಲ್ಲಿದೆ ಎಂಬುದು ಸಹಜವಾಗಿ ಅರಿವಿಗೆ ಬರುತ್ತದೆ. ಅದರ ಪ್ರಾಮುಖ್ಯತೆ ಎಷ್ಟು ಎಂಬುದಕ್ಕೆ ಸಾಕ್ಷಿ ಆವರೆಗೆ ಅಲ್ಲಿ ಆವರಿಸಿದ್ದ ಕತ್ತಲೆಯೇ. ಹಾಗೆಯೇ ಸಾಧನೆ ಸಹ.
ನಮ್ಮ ನೈಜ ಪ್ರಯತ್ನದ ಫಲವಾಗಿ ಒಗ್ಗೂಡುವ ಸಾಧನೆ, ಅದರಿಂದ ದೊರಕುವ ಯಶಸ್ಸನ್ನು ಸಾರಿ ಹೇಳಬೇಕಾದುದಿಲ್ಲ. ಸುತ್ತಲಿನವರಿಗೆ ನಿಮ್ಮ ಪ್ರತಿಭೆ ಏನೆಂಬುದು ತನ್ನಿಂದ ತಾನೆಯೇ ಗೊತ್ತಾಗುವಂತೆ ಆಗಬೇಕು. ಯಾವೊಂದೂ ಮಾತನ್ನೂ ಹೇಳದೇ ನಿಮ್ಮ ಪಾಡಿಗೆ ನಿಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗುತ್ತಿರಬೇಕು. ಅದು ಪ್ರಾಮಾಣಿಕವಾದುದೇ ಆಗಿದ್ದರೆ ತನ್ನಿಂದ ತಾನೆಯೇ ಸಮಾಜ ನಿಮ್ಮನ್ನು ಗುರುತಿಸುತ್ತದೆ. ಕಾಡಲ್ಲಿ ಓಡಾಡುವ ಮಿಣುಕು ಹುಳು ಎಷ್ಟೇ ಸಣ್ಣದಿದ್ದರೂ ಹೇಗೆ ತನ್ನ ಮಿನುಗುವಿಕೆಯಿಂದಲೇ ಕತ್ತಲೆಯನ್ನು ಭೇದಿಸಿ ಹೊಳೆಯುತ್ತದೆಯೋ, ಅಗಾಧ ಕತ್ತಲ ಪ್ರಪಂಚವನ್ನು ಸೀಳಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆಯೋ ಹಾಗೆಯೇ ನಮ್ಮ ಆತ್ಮವಿಶ್ವಾಸದೊಂದಿಗೆ ಮಾತ್ರವೇ ವಿಶಾಲ ಜಗತ್ತಿನಲ್ಲಿ ನಾವೇನೆಂದು ತೋರಿಸಿಕೊಡಬೇಕು. ವಿನಾ ಕಾರಣ ನಮ್ಮನ್ನು ನಾವು ಹೊಗಳಿಕೊಳ್ಳುವುದರಿಂದ, ಬಡಾಯಿ ಕೊಚ್ಚಿಕೊಳ್ಳುವುದರಿಂದ, ಸಭೆ- ಸಮಾರಂಭಗಳಲ್ಲಿನ ಸನ್ಮಾನ, ಪ್ರಶಸ್ತಿಗಳಿಂದ ನಾವು ಸಾಧಕರೆನಿಸಲು ಸಾಧ್ಯವೇ ಇಲ್ಲ. ನಿಮ್ಮ ಸುತ್ತಲೂ ಹರಡಿರುವ ನಿಮ್ಮ ವ್ಯಕ್ತಿತ್ವದ ಪ್ರಭೆ ಜನರ ಗಮನವನ್ನು ಅನಾಯಾಸವಾಗಿ ನಿಮ್ಮತ್ತ ಸೆಳೆಯುತ್ತದೆ. ಕತ್ತಲೆಯಲ್ಲಿ ಮಿನುಗುವ ಮಿಂಚು ಹುಳುವಾಗಬೇಕೇ ಹೊರತೂ ಉರಿಯುವ ಅಗ್ನಿಕೊಂಡದ ಮೇಲೆ ಏಳುವ ಬೂದಿಯಾಗಬಾರದು. ನಿಮ್ಮ ಪಾಡಿಗೆ ನೀವು ಪ್ರಜ್ವಲಿಸಿ. ಸಾರ್ಥಕ್ಯ ಅದರಲ್ಲೇ ಅಡಗಿದೆ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.