ನಿಮ್ಮ ಬಳಿಯೇ ಇದೆ ದಿವ್ಯಾಸ್ತ್ರ!
ನನಗೆ ತಿಳಿದಿರುವಂತೆ ಈಗೀಗ ಸರ್ಜನ್ಗಳು ಅಂಥ ಸಲಹೆ ಮಾಡುತ್ತಾರೆ. ಅದರಲ್ಲೂ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಸೇವನೆಯನ್ನು ಎರಡು ದಿನ ಮೊದಲೇ ಬಿಟ್ಟುಬಿಡಿ ಎನ್ನುತ್ತಾರೆ. ಶಸ್ತ್ರಚಿಕಿತ್ಸೆ ದಿನ ನಿಗದಿಯಾದ ದಿವಸದಿಂದಲೇ ಅವುಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿದರಂತೂ ಬಹಳ ಒಳ್ಳೆಯದು. ಆಸ್ಪಿರಿನ್ ರಕ್ತದ ಮೇಲೆ ಯಾವ ಪರಿಣಾಮ ಬೀರುತ್ತದೆಯೊ ಅದೇ ರೀತಿಯ ಪರಿಣಾಮವನ್ನು ಇವೂ ಬೀರುತ್ತವೆ! ಇವುಗಳಲ್ಲಿನ ರಾಸಾಯನಿಕಗಳು ರಕ್ತದ ಪ್ಲೇಟ್ಲೆಟ್ಗಳ ರಭಸವನ್ನು ಕುಗ್ಗಿಸುವುದರಿಂದ ರಕ್ತ ಹೆಪ್ಪುಗಟ್ಟಲು ಸಾಧ್ಯವಿಲ್ಲ. ಈಗಾಗಲೇ ಹೆಪ್ಪುಗಟ್ಟಿದ್ದರೆ ಅದನ್ನು ಹೋಗಲಾಡಿಸುವ ಗುಣ ಕೂಡ ಇವುಗಳಿಗೆ ಇದೆ. ಇದಕ್ಕೆ ವಿರುದ್ಧವಾಗಿ ಕರಿದ ತಿನಿಸುಗಳು ಪ್ಲೇಟ್ಲೆಟ್ಗಳು ಇನ್ನಷ್ಟು ಜಿಡ್ಡಾಗುವಂತೆ ಮಾಡುವ ಮೂಲಕ ರಕ್ತ ಹೆಪ್ಪುಗಟ್ಟಲು ನೆರವು ನೀಡುತ್ತವೆ. ಅದೇ ರೀತಿ ಕೆಲವು ಆಹಾರಗಳು ರಕ್ತದಲ್ಲಿನ ಫೈಬ್ರಿನ್ಗಳ ಏರಿಳಿತಕ್ಕೂ ಕಾರಣವಾಗುತ್ತವೆ. ಈ ಪ್ಲೇಟ್ಲೆಟ್ಸ್ ಮತ್ತು ಫೈಬ್ರಿನ್ಗಳು ರಕ್ತನಾಳಗಳಿಗೆ ಘಾಸಿಯಾದಾಗಲೇ ಕ್ರಿಯಾಶೀಲವಾಗುವ ಗುಣ ಹೊಂದಿರುವುದು ವಿಶೇಷ. ಇನ್ನು ಕೆಲವು ಆಹಾರಗಳು ಹೃದಯ, ಮೆದುಳು, ಶ್ವಾಸಕೋಶ, ಕಾಲುಗಳು ಹೀಗೆ ನಿರ್ದಿಷ್ಟ ಸ್ಥಳಗಳಲ್ಲಿ ಹೆಪ್ಪುಗಟ್ಟಲೂ ಕಾರಣವಾಗುತ್ತವೆ. ಒಟ್ಟಾರೆ ಹೃದಯಾಘಾತ, ಪಾರ್ಶ್ವವಾಯು ಮೊದಲಾದವುಗಳಿಂದ ಪಾರಾಗಲು ನಿಮ್ಮ ಬಳಿ ಇರುವ ದಿವ್ಯಾಸ್ತ್ರ ಎಂದರೆ ನೀವು ಸೇವಿಸುವ ಆಹಾರವೇ.
ಪದೇಪದೆ ಅದೇ ಹಣ್ಣು, ತರಕಾರಿ, ಬೇಳೆಕಾಳುಗಳ ಬಗ್ಗೆ ಹೇಳುವ ಬದಲು, ಒಂದನ್ನೇ ಆರಿಸಿಕೊಂಡು ಸಮಗ್ರವಾಗಿ ಹೇಳಬಹುದಲ್ಲ? ಉದಾಹರಣೆಗೆ ಬೆಳ್ಳುಳ್ಳಿ. ಅದು ಯಾವ್ಯಾವ ರೋಗಕ್ಕೆ ಹೇಗ್ಹೇಗೆ ಪ್ರತಿಕ್ರಿಯುತ್ತದೆ? ಅದರಲ್ಲಿನ ರೋಗ ನಿರೋಧಕ ಸ್ವಭಾವ ಏನು ಇತ್ಯಾದಿಗಳನ್ನು ಹೇಳಬಹುದಲ್ಲ ಎನ್ನುವ ಪ್ರಶ್ನೆಯನ್ನು ಕೆಲವು ಸ್ನೇಹಿತರು ಎತ್ತಿದರು. ಅವರು ಹೇಳುವುದೂ ನಿಜವೇ. ಆದರೆ ಒಂದೊಂದು ಆರೋಗ್ಯ ಸಮಸ್ಯೆಯನ್ನು ಇಟ್ಟುಕೊಂಡು, ನಮ್ಮ ಆಹಾರ ಪದ್ಧತಿಯಲ್ಲಿ ಅದಕ್ಕೆ ಏನೇನು ಪರಿಹಾರಗಳಿವೆ ಎನ್ನುವ ಕುರಿತು ಹೇಳುವುದು ಸೂಕ್ತ ಎನ್ನುವುದು ನನ್ನ ಭಾವನೆ. ಈ ಲೇಖನಮಾಲೆಯ ಆರಂಭದಲ್ಲಿಯೇ ಸ್ಪಷ್ಟಪಡಿಸಿದ್ದೆ, ಪುನರಾವರ್ತನೆ ಆದಂತೆ ನಿಮಗೆ ಅನ್ನಿಸಬಹುದು ಎಂದು. ನಿಜ ಏನೆಂದರೆ ವಿಷಯದ ಪುನರಾವರ್ತನೆ ಆಗಿರುವುದಿಲ್ಲ. ಹೃದ್ರೋಗ ಮತ್ತು ಕೊಲೆಸ್ಟರಾಲ್ಗೆ ಸಂಬಂಧಿಸಿ ಬೆಳ್ಳುಳ್ಳಿ, ಈರುಳ್ಳಿಗಳು ಹೇಗೆ ಪ್ರಯೋಜನಕಾರಿ ಎನ್ನುವುದನ್ನು ಚರ್ಚಿಸಿದ್ದೆವು. ಈಗ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಅವು ಹೇಗೆ ಸಹಾಯಕ ಎನ್ನುವ ಕುರಿತು ಚರ್ಚೆ ಮಾಡೋಣ. ಮುಂದೆ ಬೇರೆ ಆರೋಗ್ಯ ತೊಂದರೆ ಕುರಿತು ಹೇಳುವಾಗಲೂ ಇವು ಪ್ರಸ್ತಾಪ ಆಗಬಹುದು. ನಮ್ಮ ಶರೀರ ರಚನೆ ನಿಜಕ್ಕೂ ವಿಸ್ಮಯ. ಹಣ್ಣು, ತರಕಾರಿಗಳು ನಾವು ಸಂಪೂರ್ಣ ಆರೋಗ್ಯವಂತರಾಗಿದ್ದಾಗ ಬೀರುವ ಪ್ರಭಾವವೇ ಬೇರೆ, ನಿರ್ದಿಷ್ಟ ಕಾಯಿಲೆಗಳಿಗೆ ಸ್ಪಂದಿಸುವ ರೀತಿಯೇ ಬೇರೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

