ಬೇಕು ಅನ್ನಿಸುವ ಎಲ್ಲವೂ ಅಗತ್ಯವಲ್ಲ
ಶ್ರೀ ರಮಣ ಮಹರ್ಷಿಗಳ ವಿಚಾರವೂ ಅದೇ ರೀತಿಯ ಸಂದೇಶವನ್ನು ಸಾರುವಂತಹದ್ದು. 'ಹೆಚ್ಚಿನದೇನನ್ನೂ ಬಯಸದೇ, ಹೇಗಿದ್ದಿಯೋ ಹಾಗೇ ಇರು' ಎಂದು. ಅನಾವಶ್ಯಕವಾದ ಬಯಕೆಗಳನ್ನು ಬಿಟ್ಟು ನಮ್ಮ ನಿತ್ಯದ ಬದುಕನ್ನು ಆಚರಿಸಿದರೆ, ಅದೆಷ್ಟೋ ಸುಂದರವಾದ ಕ್ಷಣಗಳನ್ನು ಬದುಕು ನಮಗೆ ಉಡುಗೊರೆಯನ್ನಾಗಿ ನೀಡುತ್ತದೆ. ಬದುಕು ಸುಂದರವಾದ ಪ್ರಯಾಣವಷ್ಟೇ ಅಲ್ಲ, ಅತಿದೊಡ್ಡ ಬಹುಮಾನವೂ ಆಗುತ್ತದೆ.
ಬಯಕೆಯ ಉಪಶಮನಕ್ಕೆ ಇರುವುದು ಎರಡೇ ಮಾರ್ಗ. ಒಂದು ಬಯಕೆಯನ್ನು ಈಡೇರಿಸಿಕೊಳ್ಳುವುದು, ಇನ್ನೊಂದು ಬಯಕೆಯನ್ನೇ ಕಿತ್ತು ಹಾಕುವುದು. ಬಯಕೆಯ ಪ್ರಾಮುಖ್ಯತೆ, ಪರಿಣಾಮವನ್ನು ಮನಗಂಡು ಅದರಿಂದ ದೂರವಿರುವುದು ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಿಂತ ಸುಲಭ. ತನ್ನಲ್ಲಿ ಇಲ್ಲವಾದದ್ದನ್ನೆಲ್ಲ ಬೇಕೆಂದು ಬಯಸುವ ಬದಲಾಗಿ ಯಾವುದು ಅತಿ ಅವಶ್ಯವೋ ಅದನ್ನು ಪಡೆಯುವುದಕ್ಕೆ ಪ್ರಯತ್ನಿಸುವುದರಿಂದ, 'ಬೇಕು' ಮತ್ತು 'ಅಗತ್ಯ' ಎರಡರ ನಡುವಿನ ವ್ಯತ್ಯಾಸವನ್ನು ಗುರುತಿಸಿ ನಡೆಯುವುದರಿಂದ ಹೆಚ್ಚು ಸುಖಿಯಾಗಿರಬಹುದು. ಬಹಳಷ್ಟು ಸಲ ನಮಗೆ 'ಬೇಕು' ಎಂದು ಅನಿಸುವುದರ 'ಅಗತ್ಯ' ನಮಗೆ ಇರುವುದಿಲ್ಲ. ತಿರುಗಾಟಕ್ಕೆ ನಮಗೆ ಒಂದು ವಾಹನ ಬೇಕು. ಇರಲಿ, ತೀರಾ ಕಳಪೆಯದ್ದು ಬೇಡ, ಉತ್ತಮ ಗುಣಮಟ್ಟದ ವಾಹನ ಬೇಕು, ಅದೂ ಇರಲಿ, ಬದಲಾಗಿ, ಮನೆಯಲ್ಲಿರುವ ಎಲ್ಲಾ ಐಷಾರಾಮಿ ವಸ್ತುಗಳೂ, ವ್ಯವಸ್ಥೆಯೂ ವಾಹನದಲ್ಲಿ ಇರಬೇಕೆಂದರೆ ಯಾಕೋ ಸ್ವಲ್ಪ ಹೆಚ್ಚಾಯಿತು ಎಂದು ಅನಿಸುವುದಿಲ್ಲವೇ? ಅಷ್ಟೇ ಅಲ್ಲ, ಅಂತಹ ವಾಹನ ಒಂದಲ್ಲ, ಹತ್ತು ಹಲವು ಇರಬೇಕೆಂದು ಬಯಸಿದರೆ ಅತಿ ಆಯಿತು ಎಂದೆನಿಸುವುದಿಲ್ಲವೇ? ಇದು ಕೇವಲ ಉದಾಹರಣೆಗೆ ಮಾತ್ರ ಇಂತಹ ಅದೆಷ್ಟೋ ಬಯಕೆಗಳು ನಮ್ಮಲ್ಲಿ ಮೂಡುವುದುಂಟು. ಬರುವ ನೀರು ಪುರಸಭೆಯ ತೊಟ್ಟಿಯದ್ದೇ ಎಂದಾದರೆ ಮನೆಯಲ್ಲಿನ ನಳ ಹಿತ್ತಾಳೆಯದ್ದಾದರೇನು? ಚಿನ್ನದ್ದಾದರೇನು?
ಏನನ್ನಾದರೂ ಪಡೆಯಬೇಕೆಂಬ ಬಯಕೆ ನಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ. ಪ್ರಜ್ಞಾಪೂರ್ವಕವಾಗಿಯೋ ಅಥವಾ ಉಪಪ್ರಜ್ಞೆಯಿಂದಲೋ ನಮ್ಮ ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಆಸಕ್ತಿ ಹುಟ್ಟಿಕೊಂಡಿರುತ್ತದೆ. ಆದರೆ ನಮ್ಮ ಬಯಕೆಗೆ ಶಾಶ್ವತವಾದ ಸಂತೃಪ್ತಿ ನೀಡಲು ಈ ಪ್ರಪಂಚದ ಯಾವುದೇ ವಸ್ತುವಿಗೂ ಸಾಧ್ಯವಿಲ್ಲ. ಒಂದು ವಸ್ತುವಾಗಲೀ, ವ್ಯಕ್ತಿಯಾಗಲೀ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವರಿಗೆ ಆಸಕ್ತಿಯ ವಿಷಯ ಇನ್ನೂ ಕೆಲವರಿಗೆ ಹಾಸ್ಯಾಸ್ಪದವಾಗಿಯೋ, ಅಸಂಬದ್ಧವಾಗಿಯೋ, ಬಾಲಿಶವಾಗಿಯೋ ಕಾಣಬಹುದು. ಒಬ್ಬ ವ್ಯಕ್ತಿ ಪ್ರಪಂಚಕ್ಕಿಂತ ಹೆಚ್ಚಾಗಿ ಯಾರನ್ನಾದರೂ ಪ್ರೀತಿಸುತ್ತಾನಾದರೂ, ಇಡೀ ಪ್ರಪಂಚಕ್ಕೆ ಆ ವ್ಯಕ್ತಿ ಅಷ್ಟೇ ಪ್ರೀತಿಪಾತ್ರನಾಗಿರುತ್ತಾನೆ ಎಂದೇನೂ ಅಲ್ಲ. ಲೋಕದ ದೃಷ್ಟಿಯಲ್ಲಿ ಅವನೊಬ್ಬ ಸಾಮಾನ್ಯನೋ ಅಥವಾ ಅದಕ್ಕೂ ಕಡೆಯೋ ಆಗಿರಬಹುದು. ಲೋಕದಲ್ಲಿ ಯಾವುದೇ ವಸ್ತುವಿಗೆ ಅದಕ್ಕೇ ಆದ ಬೆಲೆ ಇಲ್ಲ. ಮನುಷ್ಯನ ಬುದ್ಧಿ ಇಲ್ಲಿ ಪ್ರತಿಯೊಂದಕ್ಕೂ ಬೆಲೆ ಕಟ್ಟುತ್ತದೆ. ನಾವು ಯಾವುದರ ಬಗ್ಗೆ ಕೇಳಿಲ್ಲವೋ, ಕಂಡಿಲ್ಲವೋ ಅಥವಾ ಅನುಭವಿಸಲಿಲ್ಲವೋ ಅದರ ಬಗ್ಗೆ ನಾವು ಎಂದೂ ಚಿಂತಿಸುವುದಿಲ್ಲ. ಅದು ನಮಗೆ ಬೇಕೆಂದು ಅನಿಸುವುದೂ ಇಲ್ಲ.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

