ಭವಿಷ್ಯವನ್ನು ಭಾವನೆ ಮುರುಟಿಸದಿರಲಿ
ನಿಮ್ಮನ್ನು ನೀವೇ ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ನಿಮ್ಮ ಆಲೋಚನೆಗಳಲ್ಲೇ ಎಷ್ಟೊಂದು ಅಂತರವಿದೆ. ಅವು ಯಾವತ್ತಿಗೂ ನಿರಂತರವಾಗಿರುವುದೇ ಇಲ್ಲ. ಎರಡು ಸ್ವತಂತ್ರ ಆಲೋಚನೆಗಳ ನಡುವೆ ಸಾಕಷ್ಟು ಅಂತರವಿದ್ದೇ ಇರುತ್ತದೆ. ಬಹುತೇಕರು ಇದನ್ನು ಗಮನಿಸುವುದೇ ಇಲ್ಲ. ಒಂದೊಮ್ಮೆ ಈ ಆಲೋಚನೆಗಳ ಅಂತರವಿಲ್ಲದೇ ಹೋಗಿದ್ದರೆ ಬಹುಶಃ ಜಗತ್ತು ಇಷ್ಟು ವೈವಿಧ್ಯವಾಗಿರಲು ಸಾಧ್ಯವೇ ಇರಲಿಲ್ಲವೇನೋ. ಇದನ್ನು ಗುರುತಿಸುವುದು ಅತ್ಯಂತ ಕಷ್ಟ. ಈ ಆಲೋಚನೆಗಳೆಂದರೆ ಅದು ಗಡಿಯಾರದ ಲೋಲಕವಿದ್ದಂತೆ. ಹಿಂದೆ ತೂಗಿದ್ದು ಮುಂದೆ ಬರುವ ಕ್ಷಣದಲ್ಲೇ ಗೊತ್ತೇ ಆಗದಂತೆ ಮೂಲಸ್ಥಾನದಲ್ಲಿ ಲೋಲಕ ಹೇಗೆ ವಿರಾಮವನ್ನು ಪಡೆಯುತ್ತದೋ ಹಾಗೇ ಎರಡು ಆಲೋಚನೆಗಳ ನಡುವೆ ಪುಟ್ಟ, ಅತ್ಯಲ್ಪ ವಿರಾಮವಿರುತ್ತದೆ. ಅದನ್ನು ಗಮನಿಸಿಕೊಳ್ಳುವುದು ನಮ್ಮ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಭೂತದಿಂದ ಪ್ರಭಾವಿತವಾಗುವ ನಮ್ಮ ಆಲೋಚನೆಗಳು ಭವಿಷ್ಯವನ್ನು ಚಿಂತಿಸುವ ಮೊದಲು ಅತ್ಯಲ್ಪ ವಿರಾಮವನ್ನು ಪಡೆಯುತ್ತದೆ. ಇಂಥ ವಿರಾಮವನ್ನು ಸದುಪಯೋಗಪಡಿಸಿಕೊಂಡು, ಮುಂದಿನ ಆಲೋಚನೆಗಳು ಯಾವುದೇ ಒತ್ತಡಕ್ಕೆ ಒಳಗಾಗದಂತೆ ಸ್ವತಂತ್ರವಾಗಿ ಹರಿಯುವಂತೆ ಮಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣ. ನೀವು ಭೂತವನ್ನು ಒಪ್ಪಿಕೊಳ್ಳವುದಾದರೆ ಭವಿಷ್ಯವನ್ನೂ ಒಪ್ಪಿಕೊಳ್ಳಲೇಬೇಕು. ಆದರೆ ನಿಜವಾಗಿ ಇರುವುದು ಒಂದೇ ಸ್ಥಿತಿ. ಅದು ಪ್ರಜ್ಞೆಯಿಂದ ಹುಟ್ಟಿದ್ದು. ಭೂತದಿಂದಲೇ ನಮ್ಮಲ್ಲಿ ಪ್ರಜ್ಞೆ ಮೊಳೆಯುತ್ತದೆ. ಹಿಂದೆ ನಮ್ಮ ಜೀವನದಲ್ಲಿ ಏನು ನಡೆಯಿತು ಎಂಬುದು ಅನುಭವವಾಗಿ ನಿಲ್ಲುತ್ತದೆ. ಅಂಥ ಅನುಭವದಿಂದಲೇ ಪ್ರಜ್ಞೆ ಮೊಳೆಯುವುದು. ಅಂಥ ಪ್ರಜ್ಞೆಯನ್ನು ಬಳಸಿಕೊಂಡು ವರ್ತಮಾನದ ಹೆಜ್ಜೆಗಳನ್ನು ಇಟ್ಟಾಗ ತನ್ನಿಂದ ತಾನೆಯೇ ಭವಿಷ್ಯ ಸುಂದರವಾಗುತ್ತದೆ. ವರ್ತಮಾನವನ್ನು ಪರಿಷ್ಕಾರಗೊಳಿಸುವುದೇ ಇಂಥ ಭೂತದ ಬೆಂಬಲಿತ ಪ್ರಜ್ಞೆ. ಬಹುತೇಕ ಸಂದರ್ಭದಲ್ಲಿ ನಾವು ಪ್ರಜ್ಞೆಯನ್ನು ಬಳಸದೇ ಕೇವಲ ಭಾವನಾತ್ಮಕವಾಗಿ ಭವಿಷ್ಯವನ್ನು ಆಲೋಚಿಸತೊಡಗುತ್ತೇವೆ. ಬದುಕು ಹಳ್ಳ ಹಿಡಿಯುವುದೇ ಇಲ್ಲ. ಭಾವನೆಗಳು ಬೇಡವೆಂತಲ್ಲ. ಅದು ವಾಸ್ತವವನ್ನು ಮರೆಮಾಚಿ, ಭವಿಷ್ಯದ ಆಲೋಚನೆಗಳನ್ನು ಕೊಲ್ಲುವ ಮಟ್ಟದಲ್ಲಿ ಇರಕೂಡದು. ಇದು ನಮ್ಮ ಯಶಸ್ಸನ್ನು ಮುರುಟಿಸುತ್ತದೆ ಎಂಬುದು ನೆನಪಿರಲಿ. ಎರಡು ಆಲೋಚನೆಗಳ ನಡುವಿನ ಅಂತರದಲ್ಲಿ ಜಾಗೃತೆಯ ಹೆಜ್ಜೆ ನಿಮ್ಮದಾಗಲಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

