ನರೇಂದ್ರ ಸನ್ಯಾಸಿಯಾಗಲು ಹೊರಟ ಪ್ರಸಂಗ
ನರೇಂದ್ರನ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೇ ಇತ್ತು. ಒಮ್ಮೆ ಒಂದಿಡೀ ದಿನ ಸುತ್ತಿದರೂ ಕೆಲಸ ಸಿಗಲಿಲ್ಲ. ಹಸಿವಿನಿಂದ ಸೋತು ನಿಶ್ಶಕ್ತಿಯಿಂದ ಕಣ್ಣಿಗೆ ಕತ್ತಲು ಕವಿದಂತಾಗಿ ರಸ್ತೆ ಪಕ್ಕದ ಮನೆಯ ಗೋಡೆಗೆ ಒರಗಿ ಕುಸಿದು ಕುಳಿತ. ಒಂದು ಕ್ಷಣ ಪ್ರಜ್ಞೆತಪ್ಪುವಂತಾಯಿತು. ಇದ್ದಕ್ಕಿದ್ದಂತೆ ಯಾವುದೋ ಅಲೌಕಿಕ ಶಕ್ತಿ ಅವನ ಅಂತರಾತ್ಮವನ್ನು ತುಂಬಿದಂತಾಯಿತು. ಕೆಲ ಕ್ಷಣಗಳ ನಂತರ ಎಚ್ಚರಗೊಂಡಾಗ ಅವನ ಮನಸ್ಸು ಶಾಂತವಾಗಿತ್ತು. ಅವನಲ್ಲಿ ನವಶಕ್ತಿ ತುಂಬಿತ್ತು, ಮನಸ್ಸಿನಲ್ಲಿ ವಿಶೇಷ ಹುರುಪು.
ಈ ಅಲೌಕಿಕ ಅನುಭವವಾದ ಮೇಲೆ ನರೇಂದ್ರನ ಸ್ವಭಾವದಲ್ಲಿ ಮಹತ್ವದ ಬದಲಾವಣೆಯಾಯಿತು. ತಾನು ಸಾಮಾನ್ಯ ಜನರಂತೆ ಹಣ ಸಂಪಾದನೆ ಮಾಡಿ ಸಂಸಾರ ಸಾಗಿಸುವುದಕ್ಕಾಗಿ ಜನ್ಮವೆತ್ತಿದವನಲ್ಲ ಎಂಬ ನಂಬಿಕೆ ಅವನಲ್ಲಿ ಆಳವಾಗಿ ಬೇರೂರಿತು. ಆತ ಸನ್ಯಾಸಿಯಾಗಿ ಮನೆಬಿಟ್ಟು ಹೊರಡಲು ಗುಟ್ಟಾಗಿ ಸಿದ್ಧತೆ ನಡೆಸಿದ. ಅದೃಷ್ಟಕ್ಕೆ ಆತ ಹೊರಡಬೇಕೆಂದಿದ್ದ ದಿನದಂದೇ ರಾಮಕೃಷ್ಣರು ಕೋಲ್ಕತ್ತಾಕ್ಕೆ ಬರುವವರಿದ್ದಾರೆ ಎಂಬ ವರ್ತಮಾನ ಸಿಕ್ಕಿ ಸಂತೋಷಗೊಂಡ. ಗುರುಗಳ ಆಶೀರ್ವಾದ ಪಡೆದುಕೊಂಡೇ ಸರ್ವಸಂಗ ಪರಿತ್ಯಾಗ ಮಾಡಿಬಿಡುತ್ತೇನೆಂದುಕೊಂಡ.
ರಾಮಕೃಷ್ಣರೊಡನೆ ದಕ್ಷಿಣೇಶ್ವರಕ್ಕೆ ಹೋದ ನರೇಂದ್ರ ಗುರುಗಳ ಒತ್ತಾಯದ ಮೇರೆಗೆ ಬಹಳಷ್ಟು ಹಾಡನ್ನು ಹಾಡಿದ. ಅವನ ಹಾಡನ್ನು ಕೇಳುತ್ತಲೇ ರಾಮಕೃಷ್ಣರು ಕಣ್ಣೀರು ಸುರಿಸಿದರು. ಬಳಿಕ 'ನರೇನ್, ನೀನು ಜನ್ಮತಾಳಿರುವುದೇ ಜಗನ್ಮಾತೆಯ ಕಾರ್ಯವನ್ನು ಸಾಧಿಸುವುದಕ್ಕಾಗಿ. ಆದರೆ ನಾನು ಬದುಕಿರುವವರೆಗೆ ನೀನು ಮನೆಯಲ್ಲೇ ಇರು' ಎಂದು ಗಟ್ಟಿಯಾಗಿ ಅತ್ತುಬಿಟ್ಟರು. ನರೇಂದ್ರ ತನ್ನ ನಿರ್ಧಾರವನ್ನು ಬದಲಿಸಬೇಕಾಯಿತು. ಮರುದಿನ ಗುರುಗಳಿಗೆ ನಮಿಸಿ ಮನೆಗೆ ಹೊರಟ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

