ಮಿಸ್ ಮಾಡ್ಕೊಳ್ತೀರಾ?
ಈ ಜಗತ್ತಿಗೆ ಕಾಲಿಡುವಾಗ ಅಳುತ್ತಿರುತ್ತೇವೆ. ನಮ್ಮ ಆಗಮನ ಸುತ್ತಮುತ್ತ ಇರುವವರಲ್ಲಿ, ಮನೆ ಮಂದಿಯಲ್ಲಿ ಸಂತಸದ ವಾತಾವರಣವೊಂದನ್ನು ನಿರ್ಮಿಸಿಬಿಡುತ್ತದೆ. ಈ ಲೋಕದ ವ್ಯಾಪಾರ ಮುಗಿಸಿ ಹೊರಡುವಾಗ ನಾವು ನಗುತ್ತಲೇ ಇರಬೇಕು. ನಮ್ಮ ಅಸ್ತಿತ್ವದ ಕೊರತೆ ಇತರರನ್ನು ಕಾಡುತ್ತಿರಬೇಕು. ಅದು ಸುಲಭದಲ್ಲಿ ಸಾಧ್ಯವೆ?
ದೀರ್ಘ ಕಾಲದ ಯಾತ್ರೆಗೋ, ಪ್ರವಾಸಕ್ಕೋ ಹೋಗಿದ್ದಿರಿ. ಮನೆಗೆ ಮರಳಿದಾಗ 'ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಂಡೆ' ಎಂದು ಕುಟುಂಬದ ಸದಸ್ಯರಲ್ಲಿ ಎಷ್ಟು ಜನ ಹೇಳಬಹುದು? ಮೊಬೈಲ್ ಇದೆ, ಇಂಟರ್ನೆಟ್ ಇದೆ. ಅವುಗಳಿಂದ ನಿತ್ಯ ಯಾವುದಾದರೊಂದು ರೂಪದಲ್ಲಿ ಸಂವಹನ, ಭೇಟಿ ಮಾಡಬಹುದು ಖರೆ. ಆದರೆ, ಭೌತಿಕ ಉಪಸ್ಥಿತಿಯೇ ಬೇರೆ ಅಲ್ಲವೆ? ಅದು ಬಿಡಿ. ನಾಲ್ಕಾರು ದಿನ ರಜೆ ಹಾಕುತ್ತೀರಿ. ನಿಮ್ಮ ಸಹೋದ್ಯೋಗಿಗಳಲ್ಲಿ ಯಾರಾದರೂ ನಿಮ್ಮನ್ನು ಮಿಸ್ ಮಾಡಿಕೊಂಡ ಹಾಗೆ ಫೀಲ್ ಮಾಡಿಕೊಳ್ಳುತ್ತಾರಾ? ಹತ್ತಾರು ವರ್ಷ ಒಂದು ಏರಿಯಾದಲ್ಲಿದ್ದವರು ಮತ್ತೊಂದು ಬಡಾವಣೆಗೆ ಮನೆ ಬದಲಾಯಿಸುತ್ತೀರಿ. ಕೆಲದಿನಗಳ ಬಳಿಕ ಮೊದಲಿದ್ದ ಜಾಗಕ್ಕೆ ಸುಮ್ಮನೆ ಒಂದು ಭೇಟಿ ಕೊಡಿ. ಅಷ್ಟು ವರ್ಷ ನಿಮ್ಮ ಮನೆಗೆ ಪೇಪರ್ ಹಾಕಿದ ಹುಡುಗನಾಗಲಿ, ಹಾಲು ಕೊಟ್ಟವನಾಗಲಿ, ನೀವು ನಿತ್ಯ ಚಹಾ ಕುಡಿಯುತ್ತಿದ್ದ ಹೋಟೆಲ್ನವನಾಗಲಿ, ತರಕಾರಿ-ದಿನಸಿ ತರುತ್ತಿದ್ದ ಅಂಗಡಿಯವರಾಗಲಿ 'ಬಹಳ ದಿನಗಳಿಂದ ಕಾಣುತ್ತಲೇ ಇಲ್ಲ' ಎಂದು ಹೃದಯಪೂರ್ವಕವಾಗಿ ಹೇಳುತ್ತಾರಾ?
ನಮ್ಮ ಅನುಪಸ್ಥಿತಿ ಕಾಡಬೇಕು, ನಾವು ಇಲ್ಲದಿದ್ದಾಗಲೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಿರಬೇಕು ಎಂದಾದರೆ ನಾವು ಆ ರೀತಿ ಬದುಕಬೇಕು. ಸದಾ ಉಪದ್ರ ನೀಡುತ್ತಿದ್ದ ವ್ಯಕ್ತಿಗಳು ದೂರ ಆದಾಗಲೂ ಅವರ ಅನುಪಸ್ಥಿತಿ ಕಾಡುತ್ತದೆ ನಿಜ. ಆದರೆ ಅದರಲ್ಲಿ ಖುಷಿಯೂ ಅಡಗಿರುತ್ತದೆ ಅಲ್ಲವೆ? ನಿಜವಾಗಿ 'ಮಿಸ್' ಮಾಡಿಕೊಳ್ಳುತ್ತಿದ್ದೇವೆ ಅಂತನ್ನಿಸುವುದು ಯಾವಾಗ? ಆಪ್ತರು, ಕಷ್ಟದ ಸಂದರ್ಭದಲ್ಲಿ ನೆರವಾದವರು, ಬಿಕ್ಕಟ್ಟುಗಳಿಂದ ಪಾರಾಗಲು ದಾರಿ ತೋರಿದವರು, ಯಾವುದಾದರೂ ಸಂದರ್ಭದಲ್ಲಿ ಸಹಾಯ ಮಾಡಿದವರು ದೂರವಾದಾಗ ಖಂಡಿತ ಕೆಲಕಾಲವಾದರೂ ಅವರ ಅನುಪಸ್ಥಿತಿ ಕಾಡಿಯೇ ಕಾಡುತ್ತದೆ. ಕೇವಲ ನಿರುಪದ್ರವಿಯಾಗಿ ಬದುಕಿದರಷ್ಟೇ ಸಾಲದು. ಅಗತ್ಯ ಇರುವವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು. ಅದೂ ಆಗಲಿಲ್ಲ ಎಂದುಕೊಳ್ಳೋಣ. ಆ ಕ್ಷಣದ ಆಪತ್ತಿನಿಂದ ಪಾರಾಗುವ ದಾರಿಯನ್ನಾದರೂ ತೋರಿಸೋಣ. ಅದೂ ಬೇಡ, ಆಪ್ತವಾದ ಮುಗುಳ್ನಗೆಯೊಂದಿಗೆ ಹೃದಯದಿಂದ ಮಾತನಾಡಿದರೂ ಸಾಕು. ಅದು ಅದ್ಭುತ ಪರಿಣಾಮ ಬೀರಬಲ್ಲದು.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

