ಕ್ಲೀನರ್ ಕಿಡ್ನಿ!
ಮನಸ್ಸಿನಲ್ಲಿರುವ ಕಲ್ಮಶ ಹೊರಹಾಕುವ ಕೆಲಸವನ್ನು ನಾವು ಮಾಡುವುದೇ ಇಲ್ಲ ಬಿಡಿ. ಆದರೆ, ನಮ್ಮ ದೇಹದ ಪ್ರತಿ ಅಂಗಗಳು ನಮ್ಮ ಹಾಗೆಯೇ ವರ್ತಿಸಿಬಿಟ್ಟರೆ ಆ ವ್ಯಕ್ತಿಯ ಕಥೆ ಮುಗಿಯಿತು. ಅದರಲ್ಲೂ ಕಿಡ್ನಿ ನಮ್ಮ ಆರೋಗ್ಯಕ್ಕೆ ಅತಿಮುಖ್ಯದ ಪಾತ್ರಧಾರಿ. ದೇಹದ ಕಲ್ಮಶಗಳನ್ನು ಹೊರಹಾಕುವ ಆ ಅಂಗದ ಆರೋಗ್ಯವನ್ನು ಅಂದವಾಗಿ ನೋಡಿಕೊಳ್ಳುವ ಹೊಣೆ ನಮ್ಮದು.
ಕಿಡ್ನಿ ಕೆಡುವ ಸಮಸ್ಯೆ ಮಾಮೂಲಿ. ಬದಲಿ ಕಿಡ್ನಿ ಸಿಕ್ಕರೂ ಎಷ್ಟು ವರ್ಷ ಆಯುಸ್ಸು ಅಂತ ವೈದ್ಯರೇನೂ ಗ್ಯಾರೆಂಟಿ ಕೊಡುವುದಿಲ್ಲ. ಬದುಕಿನಲ್ಲಿ ಇಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುವ ಪ್ರಮೇಯವೇಕೆ? ನಮ್ಮ ಆಹಾರಕ್ರಮದಲ್ಲೇ ಕಿಡ್ನಿಯ ಆರೋಗ್ಯವನ್ನು ವರ್ಧಿಸಿಕೊಳ್ಳಬಹುದು.
ಹೆಚ್ಚು ನೀರು ಸೇವನೆಯಿಂದಲೇ ನಾವು ಕಿಡ್ನಿಯನ್ನು ಸುಧಾರಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಮೂತ್ರ ಪದೇ ಪದೇ ಹಳದಿ ಹೋಗುತ್ತಿದ್ದರೆ ನಮ್ಮಲ್ಲಿ ನೀರಿನಂಶ ಕಡಿಮೆಯಾಗಿದೆ ಅಂತಲೇ ಅರ್ಥ. ಕಿಡ್ನಿಗೆ ತೊಂದರೆಯಾಗುತ್ತಿದೆ ಅಂತಲೇ ಅರ್ಥ. ಇನ್ನು ದೇಹದಲ್ಲಿ ಪೊಟ್ಯಾಷಿಯಂ ಪ್ರಮಾಣ ಹೆಚ್ಚಾದಷ್ಟು ಕಿಡ್ನಿಗೆ ಕಿರಿಕಿರಿ ಹೆಚ್ಚಾಗುತ್ತದೆ. ಇಂಥ ವೇಳೆ ಚೆರ್ರಿ ಹಣ್ಣು ತಿಂದರೆ, ಪೊಟ್ಯಾಷಿಯಂ ಪ್ರಮಾಣ ತಗ್ಗುತ್ತದೆ.
ಮಿತಿ ಮೀರಿ ಮೈ ಬೆಳೆಯುವುದು (ಬೊಜ್ಜು) ಕೂಡು ಕಿಡ್ನಿಗೆ ತೊಂದರೆಯೇ. ಇಂಥವರಿಗೆ ಬೆಳ್ಳುಳ್ಳಿಯೇ ಶ್ರೇಷ್ಠ ಮದ್ದು. ಏಕೆಂದರೆ, ಬೆಳ್ಳುಳ್ಳಿಯಲ್ಲಿ ಆ್ಯಂಟಿಆ್ಯಂಕ್ಸಿಡೆಂಟ್‌ಗಳ ಪ್ರಮಾಣ ಹೆಚ್ಚಿರುತ್ತದೆ. ಈ ಅಂಶಗಳು ಬೊಜ್ಜನ್ನು ಸಲೀಸಾಗಿ ಕರಗಿಸಿ, ಕಿಡ್ನಿಯ ಆರೋಗ್ಯಕ್ಕೆ ಎದೆಕೊಟ್ಟು ನಿಲ್ಲುತ್ತವೆ.
ನಮ್ಮಲ್ಲಿ ಅನೇಕ ಹೆಂಗಸರು ದುಂಡನೆ ಇರುವ ಕೆಂಪು ಮೆಣಸನ್ನು ಖರೀದಿಸುವುದೇ ಇಲ್ಲ. ಆದರೆ, ಇದು ತಪ್ಪು. ಇದರಲ್ಲಿ ವಿಟಮಿನ್ 'ಎ', 'ಸಿ', 'ಬಿ6' ಅಂಶ ಯಥೇಚ್ಛವಾಗಿದ್ದು, ಇವು ಮೂತ್ರಪಿಂಡದ ಆರೋಗ್ಯಕ್ಕೆ ಅತ್ಯವಶ್ಯಕ. ಈ ಬಿರುಬೇಸಿಗೆಯಲ್ಲಿ ಹಣ್ಣೆಂದರೆ ಮ್ಯಾಂಗೋನೇ ಎನ್ನುವಷ್ಟು ಮಾವುಗಳ ರಾಶಿ ಕಣ್ಣಿಗೆ ರಾಚುತ್ತದೆ. ಇದರ ಸಿಹಿ ಮುಂದೆ ದ್ರಾಕ್ಷಿಯೂ ಸಪ್ಪೆಯಾಗಿ ಹೋಗುತ್ತದೆ. ಆದರೆ, ಆ ಪುಟ್ಟ ಪುಟ್ಟ ದ್ರಾಕ್ಷಿಗಳಿಗೆ ಕಿಡ್ನಿಯನ್ನು ಕಾಪಾಡುವ ಕಾಳಜಿ ಇದೆ ಎಂಬ ಸಂಗತಿ ನಿಮಗೆ ತಿಳಿದಿರಲಿ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಗುಣವೂ ಈ ದ್ರಾಕ್ಷಿಗಿದೆ ಮತ್ತು ಹೃದಯವೂ ಖುಷಿಯಾಗಿರುತ್ತದೆ.
ಈರುಳ್ಳಿ ಹಸಿಯಾಗಿದ್ದರೂ ಸೈ, ಸುಟ್ಟರೂ ಸೈ. ಕಿಡ್ನಿ ಸಂತಸದಿಂದಲೇ ಅದನ್ನು ಸ್ವೀಕರಿಸುತ್ತದೆ. ಮೊಳಕೆ ಬರಿಸಿದ ಕಾಳುಗಳಿರಬಹುದು ಅಥವಾ ಸೇಬು ಹಣ್ಣೇ ಇರಬಹುದು... ಇವೂ ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುವ ಆಹಾರಗಳು. ತುಂಬಾ ಉಷ್ಣಪದಾರ್ಥ ಎನ್ನುವ ಕಾರಣಕ್ಕೆ ಎಲೆಕೋಸನ್ನು ದೂರ ತಳ್ಳುವುದು ಒಳ್ಳೆಯದಲ್ಲ. ಕಿಡ್ನಿ ಶುದ್ಧವಾಗಿರಿಸುವಲ್ಲಿ ಇದರ ಪಾತ್ರ ತುಂಬಾ ಇದೆ.
ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಈ ದಿನಗಳಲ್ಲಿ ಹೆಚ್ಚು. ಹೀಗಾಗಿ, ನೀರು ಮತ್ತು ಹಣ್ಣಿನ ರಸಗಳನ್ನು ಆದಷ್ಟು ಸೇವಿಸುವುದೇ ಇದರ ಮುಕ್ತಿಗೆ ಇರುವ ದಾರಿ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

