ಬೈಟುಕಾಫಿ

ಎಲ್ಲವೂ ನಿಖರವಾಗಿರಲು ಸಾಧ್ಯವಿಲ್ಲ

Published On :

ಅದನ್ನು ಹಾಗೆಯೇ ಬಿಟ್ಟುಬಿಡಿ. ಮತ್ತೆ ಬದಲಿಸಲು ಸಾಧ್ಯವೇ ಇಲ್ಲ. ಈ ಜೀವನದಲ್ಲಿ ಯಾವುದೂ ನೂರಕ್ಕೆ ನೂರು ಸರಿಯಾಗಿ ಇರಲು ಸಾಧ್ಯವೇ ಇಲ್ಲ. ಹಂಡ್ರೆಡ್ ಪರ್ಸೆಂಟ್ ಪರ್ಫೆಕ್ಟ್ ಅನ್ನೋದು ಒಂದು ಭ್ರಮೆಯೇ ಹೊರತು ವಾಸ್ತವ ಆಗಿರಲು ಸಾಧ್ಯವೇ ಇಲ್ಲ. ಇನ್ನೂ ಅಚ್ಚರಿಯ ಸತ್ಯವೆಂದರೆ ಹೀಗೆ ನಿರೀಕ್ಷಿಸುವುದು ಒಂದು ರೀತಿಯಲ್ಲಿ ಮಾನಸಿಕ ಕಾಯಿಲೆ ಎಂದೂ ಅನ್ನಿಸಿಕೊಳ್ಳುತ್ತದೆ. ಮನೆಯಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುತ್ತಾ ಗೊಣಗಾಡುತ್ತಿರುವ, ಕೂಗಾಡುತ್ತಿರುವ ಎಷ್ಟೋ ಮಂದಿಯನ್ನು ನೀವು ನೋಡುತ್ತಿರುತ್ತೀರಿ. ಹಾಗೆ ಮಾಡುವುದು ಕೇವಲ ಉದ್ದೇಶಪೂರ್ವಕ ಅಲ್ಲವೇ ಅಲ್ಲ. ಶಿಸ್ತಾಗಿರಬೇಕು, ಬದುಕಿನಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕೆಂಬುದರಲ್ಲಿ ಎರಡನೇ ಮಾತೇ ಇಲ್ಲ. ಹಾಗೆಂದು ಅದೇ ಗೀಳಾಗಿ ಪರಿಣಮಿಸಬಾರದು. ಅಂಥವರು ಮಾಡಿದ್ದನ್ನೇ ಮಾಡುತ್ತಿರುತ್ತಾರೆ. ಎಷ್ಟು ಸ್ವಚ್ಛ ಮಾಡಿದರೂ ಸಾಲುವುದೇ ಇಲ್ಲ.  ಪೀಠೋಪಕರಣಗಳು ಸರಿ ಇದ್ದಂತೆಯೇ ಕಾಣುವುದಿಲ್ಲ. ಬಟ್ಟೆ ಎಷ್ಟು ಒಗೆದರೂ ಸ್ವಚ್ಛವಾದಂತೆ ಅನ್ನಿಸುವುದೇ ಇಲ್ಲ. ಪಾತ್ರೆಗಳನ್ನು ತೊಳೆದಷ್ಟೂ ಸಾಲುವುದಿಲ್ಲ. ಹೀಗೆ ಎಲ್ಲದರಲ್ಲೂ ಅಸಮಾಧಾನ. ಅದು ಅಪೂರ್ಣ ಎಂಬ ಅತೃಪ್ತಿ. ಮನೆ, ಕಚೇರಿ, ಹೊರಗೆ... ಹೀಗೆ ಎಲ್ಲಿ ಹೋದರೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುತ್ತಲೇ ತಮ್ಮ ಅತೃಪ್ತಿಯ ಹೊರಹಾಕುತ್ತಲೇ ಇರುತ್ತಾರೆ ಅವರು. ಇದು ಖಂಡಿತಾ ಗೀಳಾಗಿ ಅವರನ್ನು ಕಾಡುತ್ತಿರುತ್ತದೆ. ಇಂಥ ಮನಸ್ಥಿತಿಯಿಂದ ಹೊರಬರದಿದ್ದರೆ ತೀವ್ರ ಮಾನಸಿಕ ಉದ್ವೇಗ ಮತ್ತು ಒತ್ತಡಕ್ಕೆ ಒಳಗಾಗುವ ಅಪಾಯ ಇರುತ್ತದೆ. ಎಲ್ಲವನ್ನೂ ಸರಿ ಮಾಡಬೇಕು, ನೂರಕ್ಕೆ ನೂರು ಸೂಕ್ತವಾದುದನ್ನೇ ಮಾಡಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡಬೇಕಾದುದು ಸರಿಯೇ. ನಾವು ಮಾಡುವ ಕೆಲಸದಲ್ಲಿ ಅಂಥದ್ದೊಂದು ಶ್ರದ್ಧೆ ಮತ್ತು ಪ್ರಯತ್ನವನ್ನು ನಾವು ಹೊಂದಿರಲೇಬೇಕು. ಹಾಗೆಂದು ಯಾವುದೂ ಸರಿ ಇಲ್ಲ, ಯಾರೊಬ್ಬರೂ ಸರಿಯಾಗಿ ಮಾಡುವುದೇ ಇಲ್ಲ ಎಂಬುದು ಮೂರ್ಖತನದ ಜತೆಗೆ ಅಹಮಿಕೆ ಎಂದೂ ಕರೆಯಲ್ಪಡುತ್ತದೆ. ಅದರಿಂದ ಕೊನೆಕೊನೆಗೆ ಸಂಪೂರ್ಣ ಮನಃಶ್ಶಾಂತಿಯೇ ನಾಶವಾಗಿ ಹೋಗುತ್ತದೆ. ಇಡೀ ದಿನ ಅಸಮಾಧಾನ, ಕೋಪಗಳೊಂದಿಗೆ ಎಲ್ಲರಿಂದಲೂ ದೂರ ಉಳಿಯುವ ವ್ಯಕ್ತಿ ತಾನೊಬ್ಬನೇ ದ್ವೀಪವಾಗುವ ಸಂದರ್ಭಗಳಿರುತ್ತವೆ. ಪ್ರತಿಯೊಬ್ಬರಲ್ಲಿ, ಪ್ರತಿಯೊಂದರಲ್ಲಿ ನಿಖರತೆಯನ್ನು ನಿರೀಕ್ಷಿಸುವುದನ್ನು ನಿಲ್ಲಿಸಿ ನಿರಾಳವಾಗಿರಲು ಕಲಿಯಿರಿ. ನಿಮ್ಮ ನಿಯತ್ರಣಕ್ಕೆ ಸಿಗದ ವಿಷಯದಲ್ಲಿ ವೃಥಾ ತಲೆ ಕೆಡಿಸಿಕೊಳ್ಳುವುದು ಅರ್ಥಹೀನ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.