ಆಹಾರದಲ್ಲೇ ಇದೆ, ಹೃದ್ರೋಗದ ಮೂಲ
ಹೃದಯಕ್ಕೂ, ಆಹಾರಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಹಲವರದ್ದು. ಹೃದಯದ ಬಗ್ಗೆ ಹೇಳಲು ಹೊರಟರೆ ಅದು ವಿಜ್ಞಾನ ಪಾಠವಾದೀತು. ಹೃದಯದ ಬಗ್ಗೆ ನಾವು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಾಕಷ್ಟು ಓದಿಕೊಂಡು ಬಂದಿದ್ದೇವೆ. ರಕ್ತವನ್ನು ಪಂಪ್ ಮಾಡುವುದಷ್ಟೇ ಹೃದಯದ ಕೆಲಸವಲ್ಲ. ಅದು ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ. ಆ ಚೈತನ್ಯ ಅದಕ್ಕೆ ಬರುವುದು ಆಮ್ಲಜನಕದಿಂದ. ಆಮ್ಲಜನಕಯುಕ್ತ ಶುದ್ಧ ರಕ್ತವನ್ನು ಹೃದಯಕ್ಕೆ ಅಭಿಧಮನಿಗಳು ಪೂರೈಸುತ್ತವೆ. ಅಪಧಮನಿಗಳು ಅಲ್ಲಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ರವಾನಿಸುತ್ತವೆ. ಅಂದರೆ ಹೃದಯದ ಆಧಾರಸ್ತಂಭ ಎಂದರೆ ರಕ್ತಪರಿಚಲನೆ ಎಂದಾಯಿತು. ಇದು ಸರಾಗವಾಗಿದ್ದರೆ ಮಾತ್ರ ಹೃದಯ ತನ್ನ ಪಾಡಿಗೆ ತಾನು ಕಾರ್ಯಮಗ್ನವಾಗಿರುತ್ತದೆ. ಹೃದಯಕ್ಕೆ ರಕ್ತ ಪೂರೈಸುವ ಅಥವಾ ಅಲ್ಲಿಂದ ಇತರ ಭಾಗಗಳಿಗೆ ರಕ್ತ ಸಾಗಿಸುವ ರಕ್ತನಾಳಗಳಲ್ಲಿ ತಡೆ ಉಂಟಾಯಿತು ಅಂತಾದರೆ ಸಮಸ್ಯೆ ಶುರುವಾಗುತ್ತದೆ. ತೊಂದರೆಯ ಸ್ವರೂಪ ಮತ್ತು ತೀವ್ರತೆಗೆ ಅನುಗುಣವಾಗಿ ಹೃದಯಾಘಾತ, ಹೃದಯ ವೈಫಲ್ಯ ಇತ್ಯಾದಿ ಹೆಸರುಗಳಿಂದ ಕರೆದರೂ ಮೂಲ ಕಾರಣ ಮಾತ್ರ ರಕ್ತಪರಿಚಲನೆಗೆ ಉಂಟಾಗುವ ಅಡ್ಡಿ. ಕೆಲವು ಆಹಾರಗಳು ರಕ್ತನಾಳಗಳು, ಅದರಲ್ಲೂ ವಿಶೇಷವಾಗಿ ಹೃದಯದೊಂದಿಗೆ ಸಂಪರ್ಕ ಹೊಂದಿರುವ ರಕ್ತನಾಳಗಳು ಹೆಪ್ಪುಗಟ್ಟುವಂತೆ ಅಥವಾ ಈ ರಕ್ತನಾಳಗಳಲ್ಲಿ ಸುಗಮ ಪರಿಚಲನೆಗೆ ಅಡ್ಡಿಯಾಗುವಂತೆ ಮಾಡುತ್ತವೆ. ಹೃದಯ ಮತ್ತು ಆಹಾರದ ನೆಂಟಸ್ತಿಕೆ ಏನು ಎನ್ನುವುದು ಅರ್ಥವಾಯಿತಲ್ಲ?
ನಾವು ಹುಟ್ಟುವಾಗ ಅಪಧಮನಿ, ಅಭಿಧಮನಿಗಳು ಸೇರಿದಂತೆ ರಕ್ತನಾಳಗಳು ಸ್ವಚ್ಛವಾಗಿಯೇ ಇರುತ್ತವೆ. ಅಗತ್ಯಕ್ಕೆ ತಕ್ಕಂತೆ ಹಿಗ್ಗುವ ಗುಣವನ್ನೂ ಪಡೆದಿರುತ್ತವೆ. ನಾವು ದೊಡ್ಡವರಾದಂತೆ ಕೊಬ್ಬಿನ ಆಹಾರ ಸೇವನೆ ಜಾಸ್ತಿ ಮಾಡಿದರೆ ರಕ್ತನಾಳದಲ್ಲಿ ತೊಂದರೆ ಶುರುವಾಗುವುದು. ನೆನಪಿಟ್ಟುಕೊಳ್ಳಿ. ಯಾವುದೂ ಏಕಾಏಕಿ ಬೃಹತ್ ರೂಪ ತಾಳುವುದಿಲ್ಲ. ಕೊಬ್ಬಿನ ಅಂಶ ಅತ್ಯಂತ ತೆಳುಗೆರೆ ರೂಪದಲ್ಲಿ ಅಪಧಮನಿಗಳಲ್ಲಿ ಶೇಖರಗೊಳ್ಳುತ್ತದೆ. ನಿಧಾನವಾಗಿ ಅವು ಬಿಲ್ಲೆಯ ಆಕಾರಕ್ಕೆ ರೂಪಾಂತರಗೊಳ್ಳುತ್ತವೇ. ಆಗಲೇ ರಕ್ತ ಸಂಚಾರಕ್ಕೆ ತಡೆ ಎದುರಾಗುವುದು. ಶುರುವಿನಲ್ಲಿಯೇ ಇದು ಪತ್ತೆಯಾಗಿ ಅಡೆತಡೆ ನಿವಾರಿಸಿದರೆ ಹೃದಯಕ್ಕೆ ಮತ್ತಷ್ಟು ಹಾನಿ ಆಗುವುದನ್ನು ತಪ್ಪಿಸಬಹುದು. ಈ ಬಿಲ್ಲೆಗಳು ದೊಡ್ಡದಾಗಿ ರಕ್ತ ಸಂಚಾರವನ್ನು ತಡೆದರೆ ಹೃದಯದ ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆಗಲೇ ಹೃದಯಾಘಾತ ಮತ್ತಿತರ 'ಆಘಾತ'ಗಳು ಸಂಭವಿಸುವುದು. ರಕ್ತಪೂರೈಕೆ ಕಡಿಮೆಯಾದರೆ ಹೃದಯ ಬಡಿತದಲ್ಲೂ ಏರಿಳಿತ ಉಂಟಾಗುತ್ತದೆ. ಹೃದಯ ಕಂಪಿಸತೊಡಗುತ್ತದೆ. ಒಮ್ಮೆಲೇ ಸಾವು ಕೂಡ ಸಂಭವಿಸಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

