ತಾಳ್ಮೆ ಬೇಡುವ ಸ್ವಯಂ ಪರೀಕ್ಷೆ

ಅನೇಕ ಆಹಾರ ಪದಾರ್ಥಗಳು ಗ್ಯಾಸ್ ಸಮಸ್ಯೆ ಹೆಚ್ಚಿಸುತ್ತವೆ ಎಂದಾದರೆ ಅವುಗಳೆಲ್ಲವನ್ನೂ ವರ್ಜಿಸಬೇಕೆ? ಗೊಂದಲ ಸಹಜ. ಎಲ್ಲವೂ ಎಲ್ಲರಲ್ಲೂ ತೊಂದರೆ ಉಂಟುಮಾಡುತ್ತವೆ ಎಂದಲ್ಲ. ಕೆಲವು ನಿರ್ದಿಷ್ಟ ಪದಾರ್ಥಗಳು ಕೆಲವರಿಗೆ ಆಗಿಬರುವುದಿಲ್ಲ. ಒಬ್ಬರಿಗೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಭಾದೆ ಜಾಸ್ತಿಯಾಗಬಹುದು; ಇನ್ನೊಬ್ಬರಲ್ಲಿ ಈ ತೊಂದರೆ ಬಟಾಟೆ ತಿಂದಾಗ ಕಾಣಿಸಿಕೊಳ್ಳಬಹುದು. ಅದು ಅವರವರ ದೇಹಪ್ರಕೃತಿಯನ್ನು ಆಧರಿಸಿರುತ್ತದೆ. ಏನು ತಿಂದರೆ ತೊಂದರೆಯಾಗುತ್ತದೆ ಎನ್ನುವುದನ್ನು ನೀವೇ ಕಂಡುಕೊಳ್ಳಬೇಕು ಮತ್ತು ಅದಕ್ಕೆ ಅಪಾರ ತಾಳ್ಮೆಯೂ ಬೇಕು.
ಅಮೆರಿಕದ ತರುಣನೊಬ್ಬನ ಕಥೆ ಹೇಳುತ್ತೇನೆ. ಆತನಿಗೆ 28 ವರ್ಷ ಪ್ರಾಯ ಅಷ್ಟೆ. ಸಿಕ್ಕಾಪಟ್ಟೆ ಗ್ಯಾಸ್ಟ್ರಿಕ್ ಸಮಸ್ಯೆ. ಭೇಟಿ ಮಾಡದ ಡಾಕ್ಟರ್ಗಳಿಲ್ಲ, ಒಳಪಡದ ಪರೀಕ್ಷೆಗಳಿಲ್ಲ. ಕರುಳಿನ ಭಾಗದಲ್ಲಿ ಎಂಡೊಸ್ಕೊಪಿಯಂಥ ಪರೀಕ್ಷೆಗಳನ್ನೂ ನಡೆಸಲಾಯಿತು. ಏನೂ ಪತ್ತೆಯಾಗಲಿಲ್ಲ. ಎಲ್ಲ ಪರೀಕ್ಷೆಗಳಲ್ಲೂ ನಾರ್ಮಲ್ ಎನ್ನುವ ರಿಪೋರ್ಟ್. ಆದರೆ ಭಾದೆಯಂತೂ ನಿಲ್ಲಲಿಲ್ಲ. ಕೊನೆಗೆ ಕೌನ್ಸೆಲಿಂಗ್ ಮಾಡಿ, ನಿಧಾನವಾಗಿ ಆಹಾರ ಸೇವಿಸುವಂತೆ ಮತ್ತು ಸಾಧ್ಯವಾದಷ್ಟು ಬಾಯಿ ಮುಚ್ಚಿಕೊಂಡಿರಲು ಸಲಹೆ ಮಾಡಲಾಯಿತು. ಅದೂ ಪ್ರಯೋಜನಕ್ಕೆ ಬರಲಿಲ್ಲ. ಸಾಕಷ್ಟು ರೀತಿಯ ಔಷಧೋಪಚಾರಗಳೂ ನಡೆದವು. ಅಂತಿಮವಾಗಿ, 'ಇದು ಮಾನಸಿಕ ಸಮಸ್ಯೆಯೇ ವಿನಾ ದೈಹಿಕವಾಗಿ ಏನೂ ಸಮಸ್ಯೆ ಇಲ್ಲ' ಎನ್ನುವ ನಿರ್ಧಾರಕ್ಕೆ ಬರಲಾಯಿತು.
ಆದರೆ ಆತ ಧೈರ್ಯಗೆಡಲಿಲ್ಲ. ಯಾವ ಆಹಾರ ಸೇವಿಸಿದಾಗ ಸಮಸ್ಯೆ ಹೆಚ್ಚುತ್ತದೆ ಎನ್ನುವುದರ ದಾಖಲಾತಿ ಶುರು ಮಾಡಿದ. ಡಾ.ಲೆವಿಟ್ ಎನ್ನುವ ವೈದ್ಯರು ಆತನ ನೆರವಿಗೆ ನಿಂತರು. ನಿತ್ಯ 34 ಸಲ 'ಗ್ಯಾಸ್ ವಿಸರ್ಜನೆ' ಆಗುತ್ತಿರುವುದು ಆತನ ಅರಿವಿಗೆ ಬಂತು. ಇದು ಆತನ ವಯಸ್ಸಿನವರಿಗೆ ಹೋಲಿಸಿದರೆ ಎರಡೂವರೆ ಪಟ್ಟು ಅಧಿಕವಾಗಿತ್ತು. ಲ್ಯಾಕ್ಟೋಸ್ ಅಲರ್ಜಿ ಇರಬಹದು ಎಂದು ತರ್ಕಿಸಿದ ಲೆವಿಟ್, ಆ ಸಂಬಂಧ ಪ್ರಯೋಗಕ್ಕೆ ಮುಂದಾದರು. ಕೆಲವು ದಿನಗಳ ನಿತ್ಯ ಎರಡು ಲೀಟರ್ ಹಾಲು ಕುಡಿಯಲು ಸಲಹೆ ಮಾಡಿದರು. ಆಗ 'ಗ್ಯಾಸ್ ವಿಸರ್ಜನೆ' ಸಂಖ್ಯೆ 34ರಿಂದ 141ಕ್ಕೆ ಏರಿತು. ಒಂದು ಕಪ್ ಹಾಲು ಕುಡಿದ ನಾಲ್ಕು ಗಂಟೆ ಅವಧಿಯಲ್ಲಿ 70 ಸಲ ಗ್ಯಾಸ್ ಹೊರಹಾಕಬೇಕಾದ ಪರಿಸ್ಥಿತಿ! ಹಾಲು ಕಡಿಮೆ ಮಾಡಿದರೂ ಸಮಸ್ಯೆ ಸ್ವಲ್ಪಮಟ್ಟಿಗೆ ಇತ್ತು. ಈರುಳ್ಳಿ, ಬೀನ್ಸ್, ಒಣದ್ರಾಕ್ಷಿ, ಕೆಲವು ಮಾಂಸದ ಪದಾರ್ಥಗಳನ್ನು ತಿಂದಾಗ ಗ್ಯಾಸ್ಟ್ರಿಕ್ ಬಾಧೆ ಹೆಚ್ಚುತ್ತದೆ ಎನ್ನುವುದನ್ನು ಕಂಡುಕೊಂಡ. ಹಂತಹಂತವಾಗಿ ಅವುಗಳ ಸೇವನೆ ಕಡಿಮೆ ಮಾಡಿ ಗ್ಯಾಸ್ಟ್ರಿಕ್ನಿಂದ ಬಹುತೇಕ ಮುಕ್ತಿ ಹೊಂದಿದ.
ಯಾವ ಆಹಾರ ನಿಮಗೆ ಕಿರಿಕಿರಿ ಉಂಟುಮಾಡುತ್ತದೆ ಎನ್ನುವುದನ್ನು ಪತ್ತೆ ಮಾಡಿಕೊಳ್ಳಲು ಎಷ್ಟು ತಾಳ್ಮೆ ಬೇಕು ಎನ್ನುವುದನ್ನು ವಿವರಿಸಲು ಈ ಕಥೆ ಹೇಳಬೇಕಾಯಿತು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


