ಗೋಹತ್ಯೆ ನಿಷೇಧ

'ನಾನು ಹೋದ ಮ್ಯಾಲ ಈ ಆಕಳುಗಳನ್ನ ಯಾರಿಗೂ ಕೊಡಬ್ಯಾಡ್ರಿ. ಕಟುಕರಿಗೆ ಮಾತ್ರ ಯಾವತ್ತೂ ಕೊಡಬ್ಯಾಡ್ರಿ' ಅಂತ ತಂದೆ ಮಕ್ಕಳಿಗೆ ಆಜ್ಞೆ ಮಾಡಿದ, ಮಕ್ಕಳು ಆತು ಮಾಡ್ತಿವಿ ಅಂದ್ರು. ಕೆಲ ವರ್ಷಗಳ ನಂತರ ತಂದೆ ತೀರಿಹೋದ. ತಂದೆ ಮಾತಿಗೆ ಬೆಲೆ ಕೊಟ್ಟು ಮಕ್ಕಳು, ಮೊಮ್ಮಕ್ಕಳು ಸಾಕಿದ ಆಕಳು ಸಂತತಿ ಬೆಳೆದು ಇಂದು 35ಕ್ಕೆ ತಲುಪಿದೆ.
ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಎಂಬ ಪುಟ್ಟ ಗ್ರಾಮದ ಗಂಥಡೆ ಕುಟುಂಬದಲ್ಲಿ ಕಂಡುಬರುವ ಸಂಗತಿ. ಹಿರಿಯ ರಾಮಚಂದ್ರ ಗಂಥಡೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯಾ ಪೂರ್ವ ಒಂದು ದಿನ ಮನೆ ಮುಂದಿನ ರಸ್ತೆಯಲ್ಲಿ ಕಟುಕರು ಒಂದು ಆಕಳನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದರು. ಇದನ್ನು ಕಂಡ ರಾಮಚಂದ್ರ ಆ ಆಕಳನ್ನು ಖರೀದಿಸುವ ಮನಸ್ಸು ಮಾಡಿದರು. ಆಗಿನ ಕಾಲಕ್ಕೇ ಕಟುಕರು ಆಕಳಿಗೆ ರು. 10 ಬೆಲೆ ಹೇಳಿದರು. ರು. 2 ಹೆಚ್ಚು ಕೊಟ್ಟು ಖರೀದಿಸಿದರು.
ಆಕಳು ರಾಮಚಂದ್ರ ಅವರ ಮನೆಯಲ್ಲಿ ಬೆಳೆಯಿತು. ಕರು ಹಾಕಿತು, ಕರುಗಳು ಬೆಳೆದವು. ಮಕ್ಕಳಿಗೆ ಈ ಆಕಳು ಮತ್ತು ಇದರ ಕರುಗಳನ್ನು ಕಟುಕರಿಗೆ ಕೊಡಬೇಡಿ ಎಂದು ಆಜ್ಞೆ ಮಾಡಿದರು. 1988ರಲ್ಲಿ ರಾಮಚಂದ್ರ ನಿಧನರಾದರು. ಹಿರಿಯ ಮಗ ಬಳಿರಾಮ ಗಂಥಡೆ ಹಸುಗಳನ್ನು ಸಾಕಿದರು. ಈಗ ಬಳಿರಾಮ ಅವರ ಮಕ್ಕಳು ಈ ದನಗಳನ್ನು ನೋಡಿಕೊಳ್ಳುತ್ತಿದ್ದಾರೆ.
80 ವರ್ಷ ಹಿಂದೆ ಕೊಂಡಿದ್ದ ಆ ಆಕಳ ಸಂತತಿಯ ಸಂಖ್ಯೆ ಇವತ್ತು 35ಕ್ಕೆ ತಲುಪಿದೆ. ಒಂದೇ ಒಂದು ಆಕಳನ್ನು ಯಾರಿಗೂ ಮಾರಿಲ್ಲ. ಆದರೆ ಗಂಡು ಕರುಗಳನ್ನು ಸಾಕುವವರಿಗೆ ಮಾರಾಟ ಮಾಡಿದ್ದಾರೆ. ಈವರೆಗೆ 40-45 ಆಕಳು ಸಾವನ್ನಪ್ಪಿದ್ದು, ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ದನಗಳ ಸಂಖ್ಯೆ ಹೆಚ್ಚಾದಂತೆ ಸಾಕುವ ವೆಚ್ಚವೂ ಹೆಚ್ಚಾಯಿತು. ಸಾಕಲು ಇಷ್ಟಪಟ್ಟು ಮುಂದೆ ಬಂದವರಿಗೆ, ಮಾರಬಾರದು ಎಂಬ ಕರಾರಿನ ಮೇರೆಗೆ ಒಂದೆರಡು ಹಸು ಕೊಟ್ಟಿದ್ದಾರೆ. ಇವು ಪಕ್ಕಾ ಜವಾರಿ ತಳಿ ಆಕಳು. ಹೆಚ್ಚು ಹಾಲು ಕೊಡುವುದಿಲ್ಲ. ಸದ್ಯ ಇರುವ 35 ದನಗಳಲ್ಲಿ 8 ಹಾಲು ಕೊಡುತ್ತವೆ. 2ರಿಂದ 3 ಲೀ. ಹಾಲು ಸಂಗ್ರಹವಾಗುತ್ತವೆ. ಹಾಲು ಮಾರುವ ಪ್ರಶ್ನೆಯೇ ಇಲ್ಲ.
ಸಾಕಣೆ ಕಷ್ಟ
ಇರುವುದೇ 3 ಎಕರೆ ಭೂಮಿ. ಇದರಲ್ಲಿಯೇ ಸಾಗುವಳಿ ಮಾಡಬೇಕು. ಆಕಳಿಗಾಗಿ ಹುಲ್ಲು ಬೆಳೀಬೇಕು. ಮೇವು ಕೊರತೆ ಆಗಬಾರದು ಎಂಬ ಕಾರಣಕ್ಕೆ ಕಬ್ಬು ಸಹ ನಾಟಿ ಮಾಡಿಲ್ಲ. ಆದರೂ ಮೇವು ಸಾಕಾಗುವುದಿಲ್ಲ. ಒಂದು ಟ್ರ್ಯಾಕ್ಟರ್ ಮೇವಿಗೆ ರು. 4 ಸಾವಿರ ಇದೆ. ಜೋಳದ ಕಣಕಿ, ಔಷಧಿ ವೆಚ್ಚವೂ ಸಾಕಷ್ಟಿದೆ ಎಂಬುದು ರಾಮಚಂದ್ರ ಅವರ ಮೊಮ್ಮಗ ಪಾಂಡುರಂಗ ಅಭಿಪ್ರಾಯ. ಬೇಸಿಗೆ, ಬರಗಾಲದಲ್ಲಿ ಬಹಳ ಕಷ್ಟ. ಸರ್ಕಾರ ತೆರೆಯುವ ಗೋಶಾಲೆಯಿಂದ ಒಂದಿಷ್ಟು ಮೇವು, ಗ್ರಾಪಂ ವತಿಯಿಂದ ಬೋರ್ವೆಲ್ ಹಾಗೂ ಶೆಡ್ಗಳು ಅವರ ಬೇಡಿಕೆ.(95918 35169)
- ಸಲೀಮ ಬಳಬಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


