ನಾಲ್ಕು ಬಣ್ಣ ಸೇರಿ... ಕಲರ್ಫುಲ್ ಪ್ರಿಸ್ಮ್ಯಾಟಿಕ್

ವಿವಿಧತೆಯಲ್ಲಿ ಏಕತೆ ಅನ್ನೋದಕ್ಕೆ ಇಲ್ಲೊಂದು ಕಲರ್ಫುಲ್ ಉದಾಹರಣೆ ಇದೆ. ಕಲೆ ಎಂಬುದು ಅಪರಿಚಿತರನ್ನೂ ಒಂದುಗೂಡಿಸಬಲ್ಲದು ಎಂಬುದಕ್ಕೂ ಇದು ನಿದರ್ಶನ. ರೆಮ್ಯಾ ಕುಮಾರ್, ಕಿಶೋರ್ ಸಾಹು, ಸೆಲ್ವ ಸೆಂಥಿಲ್ ಕುಮಾರ್ ಮತ್ತು ಶೀಲಾ ಮರಾಡಿ ಎಂಬ ನಾಲ್ವರು ಸಾಧಕರು ಇಂದಿನಿಂದ ಒಂದು ವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಬಣ್ಣಗಳ ಪರಿಷೆ ನಡೆಸಲಿದ್ದಾರೆ. 'ಪ್ರಿಸ್ಮ್ಯಾಟಿಕ್' ಎಂಬ ಹೆಸರಿನ ಈ ಸಾಮೂಹಿಕ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಎಸ್. ಜಿ. ವಾಸುದೇವ್ ಉದ್ಘಾಟಿಸಲಿದ್ದಾರೆ .
ಚಿತ್ರಕಲಾ ಪರಿಷತ್ನಲ್ಲಿ ಕಲಾ ವಸ್ತುಪ್ರದರ್ಶನಗಳು ಅಪರೂಪವೇನಲ್ಲ. ಆದರೆ ಈ ಕಲಾಪ್ರದರ್ಶನ ಅಪರೂಪವೆನಿಸುವುದಕ್ಕೆ ಕಾರಣಗಳಿವೆ. ಇಲ್ಲಿ ಸೇರಿರುವ ನಾಲ್ವರು ಕಲಾವಿದರು ಸಮಾನ ಆಸಕ್ತಿ, ಅಂದರೆ ಚಿತ್ರಕಲೆಯ ಬಗ್ಗೆ ಅಪಾರ 'ಪ್ಯಾಶನ್' ಇಟ್ಟುಕೊಂಡವರು. ಒಬ್ಬೊಬ್ಬರೂ ಒಂದೊಂದು ರಾಜ್ಯಕ್ಕೆ ಸೇರಿದವರು. ಒಬ್ಬೊಬ್ಬರೂ ಈ ಮೊದಲು ಚಿತ್ರಕಲೆಯಿಂದಾಚೆಗೆ ಬೇರೊಂದು ವೃತ್ತಿಯಲ್ಲಿ ತೊಡಗಿಕೊಂಡವರು ಹಾಗೂ ಅದರಿಂದ ಪೂರ್ಣವಾಗಿ ವಿಮುಖಗೊಂಡು ಚಿತ್ರಕಲೆಯನ್ನೇ ತಮ್ಮ ಉಸಿರಾಗಿಸಿಕೊಳ್ಳಲು ನಿರ್ಧರಿಸಿದವರು.
ಕಿಶೋರ್ ಸಾಹು ಒರಿಸ್ಸಾದವರು. 'ಪೆರಿಲ್ಸ್ ಆಫ್ ಮೆಟೀರಿಯಲಿಸ್ಮ್' ಎಂಬ ಥೀಮ್ ಇಟ್ಟುಕೊಂಡು ತಮ್ಮ ಅದನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ರಚಿಸುತ್ತ ಬಂದಿದ್ದಾರೆ. ಸೆಲ್ವ ಸೆಂಥಿಲ್ ಕುಮಾರ್ ನೆರೆರಾಜ್ಯದ ಚೆನ್ನೈನವರು. 'ವಾಟರ್ ಕ್ರೈಸಿಸ್' ಎಂಬ ವಿಷಯವನ್ನು ಆಧರಿಸಿ ಪೇಂಟಿಂಗ್ ರಚಿಸುತ್ತಾ ಸಾಧನೆಯ ಹಾದಿಯಲ್ಲಿರುವವರು. ತಮ್ಮ ಸಾಧನೆಯ ಆರಂಭದ ದಿನಗಳಲ್ಲೇ ಹಲವು ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಶೀಲಾ ಮರಾಡಿ ನಮ್ಮದೇ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಫೈನ್ ಆರ್ಟ್ಸ್ ಪದವಿ ಪಡೆದು ನಿಸರ್ಗದ ಶಕ್ತಿಯಿಂದ ಪ್ರಭಾವಿತಗೊಂಡ 'ದಿ ಫಿಫ್ತ್ ಎಲಿಮೆಂಟ್-ಲವ್' ಎಂಬ ಥೀಮ್ನೊಂದಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.
ರೆಮ್ಯಾ ಕುಮಾರ್ ಕೇರಳ ಮೂಲದವರು. ಆದರೆ, ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿರುವವರು. ವಾಸ್ತುಶಿಲ್ಪದಲ್ಲಿ ಎಂಜಿನಿಯರಿಂಗ್ ಮಾಡಿ, ಅಮೆರಿಕದಲ್ಲಿ ಕೆಲಕಾಲ ನೌಕರಿ ಮಾಡಿದರೂ ಬಣ್ಣದ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ, ಕೆಲಸಕ್ಕೆ ತಿಲಾಂಜಲಿಯಿತ್ತು ಪೂರ್ಣಪ್ರಮಾಣದಲ್ಲಿ ಕಲೆಯನ್ನೇ ವೃತ್ತಿಯಾಗಿಸಿಕೊಳ್ಳಲು ನಿರ್ಧ್ಧರಿಸಿದವರು. ರೆಮ್ಯಾರವರು ಪ್ರಕೃತಿಗೆ ಸಂಬಂಧಪಟ್ಟ ಕೆಲವು ಅಪರೂಪದ ಪೇಂಟಿಂಗ್ಗಳನ್ನು ಪ್ರದರ್ಶಿಸಲಿದ್ದಾರೆ.
ಈ ಹೊಸಹುರುಪಿನ ಹೊಸ ಪರಿಕಲ್ಪನೆಯ ಚಿತ್ರಕಲಾವಿದರಿಗೆ ಬೆಂಗಳೂರಿನ ಚಿತ್ರಕಲಾಪರಿಷತ್ ವೇದಿಕೆ ಒದಗಿಸಿದೆ ಎಂಬುದು ವಿಶೇಷ. ಇದೇ ಥರ ಚಿತ್ರಪ್ರದರ್ಶನವನ್ನು ಇಡೀ ದೇಶಾದ್ಯಂತ ಹಾಗೂ ಹೊರದೇಶದಲ್ಲೂ ಏರ್ಪಡಿಸುವ ಕನಸಿದೆಯೆಂದೂ, ಇದೇ ನಾಲ್ವರ ಟೀಂ 'ಪ್ರಿಸ್ಮ್ಯಾಟಿಕ್' ಎಂಬ ಹೆಸರಲ್ಲೇ ದೊಡ್ಡಮಟ್ಟದ ಕನಸು ಕಾಣುತ್ತಿದೆಯೆಂದೂ ರೆಮ್ಯಾ ತಮ್ಮ ಕನಸನ್ನು ಬಿಚ್ಚಿಟ್ಟರು.
ಕಲಾಸಕ್ತರು 18ರಿಂದ 24ರ ವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಪ್ರದರ್ಶನಕ್ಕೆ ಭೇಟಿ ನೀಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


