ಬೈಟುಕಾಫಿ

ಶಿಶುವಿನ ರಚ್ಚೆಗೆ ಕಾರಣ ಏನು?

ಶಿಶುವಿನ ರಚ್ಚೆಗೆ ಕಾರಣ ಏನು?
Published On :

ಸದಾ ಖುಷ್‌ಖುಷಿಯಾಗಿರುವ ಸದಾಶಿವ ರಾಯರು ಅಂದು ಮಂಕಾಗಿದ್ದರು. ಸರಿಯಾಗಿ ನಿದ್ದೆ ಮಾಡಿಲ್ಲ ಎನ್ನುವುದು ಅವರ ಮುಖದ ಆಯಾಸದಿಂದಲೇ ಗೊತ್ತಾಗುತ್ತಿತ್ತು. ಆದರೂ ಕಿಚಾಯಿಸಲೆಂದು ಕೇಳಿದೆ, 'ಏನು ರಾಯರು ಇನ್ನೂ ನಿದ್ದೆ ಮೂಡಿನಲ್ಲೇ ಇರುವಂತಿದೆ?' 'ಅಯ್ಯೋ ಬಿಡು ಮಾರಾಯಾ. ನಿದ್ದೆ ಮೂಡಲ್ಲ, ರಾತ್ರಿಯಿಡೀ ನಿದ್ದೆಯೇ ಇಲ್ಲ. ಮೊಮ್ಮಗು ಇಡೀ ರಾತ್ರಿ ಅಳುತ್ತಾ ಇತ್ತು. ಎಷ್ಟು ಸಮಾಧಾನಿಸಿದರೂ, ದೃಷ್ಟಿ ತೆಗೆದರೂ ಅಳು ನಿಲ್ಲಿಸಿಲ್ಲ. ನನಗೋ ಮುಂಜಾನೆಯ ವಾಕಿಂಗ್ ತಪ್ಪಿಸಿ ಅಭ್ಯಾಸವಿಲ್ಲ. ಹೀಗಾಗಿ ಬಂದೆ. ಈಗಲೂ ಕಿವಿಯಲ್ಲಿ ಮಗು ಅಳುತ್ತಿರುವಂತೆ ಕೇಳಿಸುತ್ತಿದೆ' ಎಂದು ಅಲವತ್ತುಕೊಂಡರು.
ಶಿಶು ಅಳುವುದು ಸ್ವಾಭಾವಿಕ. ಅದರ ಅಭಿವ್ಯಕ್ತಿ ಮಾಧ್ಯಮವೇ ಅಳು. ತನಗೆ ಹಸಿವಾದಾಗ, ಬೇಸರವಾದಾಗ, ಅಮ್ಮನ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು ಅದಕ್ಕೆ ಅಳುವುದು ಬಿಟ್ಟರೆ ಬೇರೆ ಯಾವ ದಾರಿ ಇದೆ ಹೇಳಿ? ಹಾಲು ಕುಡಿಸಿದ ನಂತರವೂ ಮಗು ಅಳು ನಿಲ್ಲಿಸಿದಿದ್ದರೆ ದೃಷ್ಟಿ ತಗುಲಿರಬಹುದು ಎಂದುಕೊಂಡು ದೃಷ್ಟಿ ತೆಗೆಯುತ್ತೇವೆ. ಆಗಲೂ ಅಳು ನಿಲ್ಲದಿದ್ದರೆ ಮಗುವನ್ನು ಸಂತೈಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ. ಅದೂ ಫಲ ನೀಡದಿದ್ದರೆ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ ಎನ್ನುವ ತೀರ್ಮಾನಕ್ಕೆ ಬಂದು ಜೀರಿಗೆ ನೀರು ಕುಡಿಸುತ್ತೇವೆ. ಮಗುವಿಗೆ ಸ್ವಲ್ಪ ಹಾಯೆನಿಸುತ್ತದೆ. ಅಳು ನಿಲ್ಲಿಸುತ್ತದೆ.
ಮತ್ತೆ ಕೆಲವೇ ಕ್ಷಣಗಳಲ್ಲಿ ಅಳು ಶುರುವಾದರೆ...? ಡಾಕ್ಟರುಗಳು ಏನೆಂದು ಸಂದೇಹಿಸುತ್ತಾರೆ ಗೊತ್ತಾ? ಮಗುವಿಗೆ ಹೊಟ್ಟೆ ನೋವು ಅಥವಾ ಉದರ ಶೂಲೆ ಕಾಣಿಸಿಕೊಂಡಿದೆ ಎಂದು. ವೈದ್ಯಕೀಯ ಲೋಕದ ಲೆಕ್ಕಾಚಾರದ ಪ್ರಕಾರ, ಮಗು ತಿಂಗಳಲ್ಲಿ ಕನಿಷ್ಠ ಮೂರು ವಾರದವರೆಗೆ ದಿನದಲ್ಲಿ ಮೂರು ತಾಸು; ವಾರದಲ್ಲಿ ಮೂರು ದಿನ ಅಳುತ್ತಿದೆ ಎಂತಾದರೆ ಅದಕ್ಕೆ ಉದರಶೂಲೆಯಾಗಿದೆ.
ಉದರಶೂಲೆ ಪ್ರತಿ ಹತ್ತರಲ್ಲಿ ಮೂರು ಶಿಶುಗಳಲ್ಲಿ ಸಾಮಾನ್ಯ. ಕಾರಣವೇ ಇಲ್ಲದೆ ಅಳುತ್ತಿದೆ ಮತ್ತು ಎಷ್ಟು ಸಂತೈಸಿದರೂ ಸುಮ್ಮನಾಗುತ್ತಿಲ್ಲ ಅಂತಾದರೆ ಅದು ಉದರಶೂಲೆಯಿಂದ ನರಳುತ್ತಿದೆ ಎಂದು ಸಂದೇಹಿಸಬಹುದು. ಅದರಲ್ಲೂ ಅಳುವಾಗ ಮೊಳಕಾಲನ್ನು ಎತ್ತಿ ಕಿಬ್ಬೊಟ್ಟೆಗೆ ತಾಗಿಸಿಕೊಳ್ಳುತ್ತಿದ್ದರೆ ಅನು ಮಾನವೇ ಬೇಡ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಹೊಟ್ಟೆ ನೋವಿನಿಂದ ಅಳುತ್ತಿದ್ದರೆ ಅದರ ಧ್ವನಿ ಬೇರೆಯಾಗಿರುತ್ತದೆ. ಶಿಶುವಿಗೆ ನಿದ್ರೆ ಬರುವವರೆಗೂ ಅಳು ಮುಂದುವರಿಯುತ್ತದೆ. ಸಾಮಾನ್ಯವಾಗಿ ಮಗುವಿಗೆ ಮೂರ್ನಾಲ್ಕು ತಿಂಗಳು ಕಳೆಯುವವರೆಗೂ ಉದರಶೂಲೆ ಬಾಧೆ ಇರುತ್ತದೆ.  ಆ ಬಳಿಕ ತಾನೇತಾನಾಗಿ ಕಡಿಮೆಯಾಗುತ್ತದೆ ಮತ್ತು ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ. ಆದರೆ, ಈ ಅವಧಿಯಲ್ಲಿ ಮಾತ್ರ ಯಾವುದೇ ಸಮಯದಲ್ಲಿ ನೋವು ದಿಢೀರ್ ಕಾಣಿಸಿಕೊಳ್ಳಬಹುದು; ನೋವಿನ ಚಕ್ರ ಹೊತ್ತುಗೊತ್ತಿಲ್ಲದೆ ಪುನರಾವರ್ತನೆ ಆಗುತ್ತಿರಬಹುದು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.