ಬೈಟುಕಾಫಿ

ಜೀಪಿನ ಬಾನೆಟ್ ಮೇಲೆ ಚಿರತೆ ಪಟ್ಟಾಂಗಕ್ಕೆ ಕುಳಿತರೆ ಏನ್ಮಾಡ್ತೀರ?

ಜೀಪಿನ ಬಾನೆಟ್ ಮೇಲೆ ಚಿರತೆ ಪಟ್ಟಾಂಗಕ್ಕೆ ಕುಳಿತರೆ ಏನ್ಮಾಡ್ತೀರ?
Published On :

`ಈ ಕಾಡು ಪ್ರಾಣಿಗಳು ಏನೂ ಮಾಡೋದಿಲ್ಲವಾ? ಒಂದು ವೇಳೆ ಅವು ಮನುಷ್ಯನ ಮೇಲೆ ಅಟ್ಯಾಕ್ ಮಾಡಿದರೆ?'
ಈ ಪ್ರಶ್ನೆಯನ್ನು ದಕ್ಷಿಣ ಆಫ್ರಿಕಾದ ಕಾಡುಗಳಿಂದ ಬಂದ ಬಳಿಕ ನನ್ನ ಹೆಂಡತಿ, ಮಗ ಸೇರಿದಂತೆ ನೂರಾರು ಮಂದಿ ನನಗೆ ಕೇಳಿದ್ದಾರೆ. ಕಾಡು ಪ್ರಾಣಿಗಳ ಸನಿಹದಲ್ಲಿ ನಾವು ನಿಂತ ಫೋಟೊಗಳನ್ನು ನೋಡಿ ದಂಗಾಗಿ ಈ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಕೇಳುವುದಿರಲಿ, ಈ ಪ್ರಶ್ನೆಯನ್ನು ನಾನು ಸಫಾರಿ ಗೈಡ್ಗೆ ಒಂದಲ್ಲ, ಹತ್ತಾರು ಬಾರಿ ಕೇಳಿದ್ದೆ. ಗೇಮ್ ರಿಸವರ್್ನ ಮಾಲೀಕ, ಮ್ಯಾನೇಜರ್ಗಳನ್ನು, ಸಫಾರಿ ಡ್ರೈವರ್ಗಳನ್ನು ಕುಳ್ಳಿರಿಸಿಕೊಂಡು ಪುಟ್ಟ ಮಗುವಿನಂತೆ ಕೇಳಿದ್ದೆ.
ಇದು ನನ್ನ, ನಿಮ್ಮದೊಂದೇ ಅಲ್ಲ, ಎಲ್ಲರ ಪ್ರಶ್ನೆ. ಕಾಡಿನಲ್ಲಿ ಮುಕ್ತವಾಗಿ, ರಾಜಾರೋಷವಾಗಿ ಅಲೆದಾಡುವ ಈ ವನ್ಯಮೃಗಗಳು, ಮನುಷ್ಯರನ್ನು ಕಂಡರೆ ಏನೂ ಮಾಡುವುದಿಲ್ಲವಾ? ಜೀಪನ್ನೇರಿ ಅವುಗಳ ಮುಂದೆ ನಿಂತುಕೊಂಡರೂ ಸುಮ್ಮನಿರುವು ದೇಕೆ? ನಿದ್ರಿಸುವಾಗ, ವಿಶ್ರಾಂತಿ ತೆಗೆದುಕೊಳ್ಳುವಾಗ ಅವುಗಳ ಏಕಾಂತಕ್ಕೆ ಭಂಗವುಂಟಾದಾಗಲೂ ಏನೂ ಮಾಡುವುದಿಲ್ಲವಲ್ಲ? ಹಾಗಾದರೆ ಇವು ಪಳಗಿಸಿದ ಪ್ರಾಣಿಗಳಾ? ಈ ಎಲ್ಲ ಪ್ರಶ್ನೆಗಳೂ ಸಹಜವೇ.
`ಇಲ್ಲಿ ತನಕ ಯಾರ ಮೇಲೂ ಅಟ್ಯಾಕ್ ಮಾಡಿಲ್ಲ ಅಂದ್ರೆ, ಅಟ್ಯಾಕ್ ಮಾಡೋದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ' ಎಂಬ ಸಫಾರಿ ಡ್ರೈವರ್ನ ಮಾತು ಈ ಪ್ರಶ್ನೆಗಳಿಗೆ ಉತ್ತರವಾಗಲಾರದು. ಸಾಕಿದ ನಾಯಿಯೇ ಒಮ್ಮೊಮ್ಮೆ ಕಚ್ಚುವಾಗ, ಇನ್ನು ವನ್ಯಪ್ರಾಣಿಗಳನ್ನು ನಂಬುವುದಾದರೂ ಹೇಗೆ? ಇಲ್ಲಿ ತನಕ ಕಚ್ಚಿಲ್ಲ, ಎರಗಿ ಬಂದಿಲ್ಲ ಅಂದ್ರೆ ಕಚ್ಚುವುದೇ ಇಲ್ಲ, ಎರಗಿ ಬರುವುದೇ ಇಲ್ಲ ಎಂದಲ್ಲ. ವನ್ಯಪ್ರಾಣಿಗಳನ್ನು ನಂಬುವುದು ಯಾವತ್ತಿದ್ದರೂ ಅಪಾಯವೇ. ಈ ರಿಸ್ಕ್ ತೆಗೆದುಕೊಂಡೇ ಕಾಡನ್ನು ಪ್ರವೇಶಿಸಬೇಕು. ಪ್ರಾಯಶಃ ಪ್ರತಿದಿನ ನಾಲ್ಕೈದು ಬಾರಿ ಜೀಪಿನಲ್ಲಿ ಬರುವ ಮನುಷ್ಯರನ್ನು ನೋಡಿ ನೋಡಿ ವನ್ಯಪ್ರಾಣಿಗಳಿಗೆ ರೂಢಿಯಾಗಿರಬಹುದು. ಈ ಮನುಷ್ಯರಿಂದ ಅಪಾಯವಿಲ್ಲವೆಂಬುದು ಅವುಗಳಿಗೆ ಖಾತ್ರಿಯಾಗಿರಬಹುದು. ಈ ಸಮಾಧಾನಕರ ಅಂಶವೇ ನಮಗೂ, ಸಫಾರಿ ಗೈಡ್ಗಳಿಗೂ ಉತ್ತೇಜಕ ಸಂಗತಿ. ಹಾಗೆಂದು ಕಾಡು ಪ್ರಾಣಿಗಳು ತಮ್ಮ ತಮ್ಮಲ್ಲಿ ಕಾದಾಡುತ್ತವೆ. ಜೀಬ್ರಾ ಹಾಗೂ ಜಿಂಕೆಯನ್ನು ಕಂಡಾಗ ಹಸಿದ ಸಿಂಹಗಳು ಬೇಟೆಯಾಡಲು ಬೆನ್ನಟ್ಟಿ ಹೋಗುತ್ತವೆ. ಚಿರತೆಗಳು ಕಡವೆಗಳನ್ನು ಕಂಡರೆ ಬಿಡುವುದಿಲ್ಲ. ಸಾಯಿಸಿ, ಹಿಸಿದು ತಿನ್ನುತ್ತವೆ. ಆದರೆ, ಮನುಷ್ಯರನ್ನು ಕಂಡರೆ ಸುಮ್ಮನಿರುತ್ತವೆ. ಹಾಗಾದರೆ ಕಾಡಿನಲ್ಲಿರುವ ಪ್ರಾಣಿಗಳಿಗೆ ಮನುಷ್ಯರನ್ನು ಕಂಡರೆ ಭಯವಾ? ವಾಹನದ ಶಬ್ದಕ್ಕೆ ಅವುಗಳಲ್ಲಿ ಒಂದು ರೀತಿಯ ಭಯವಿದ್ದಿರಬಹುದು. ಆದರೆ, ಆನೆಗಳಿಗೆ ಎಂಥ ಭಯ? ಸಿಂಹ, ಚಿರತೆಯಂಥ ಪ್ರಾಣಿಗಳು ಮಲಗಿರುವ ಸ್ಥಳದಿಂದ ನಾಲ್ಕು-ಐದು ಮೀಟರ್ ಹತ್ತಿರಕ್ಕೆ ಜೀಪಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಜೀಪನ್ನು ಅದರ ಮುಂದೆಯೇ ಹತ್ತು-ಹದಿನೈದು ನಿಮಿಷ ನಿಲ್ಲಿಸಿರುತ್ತಾರೆ. ಜೀಪಿನಲ್ಲಿದ್ದವರ್ಯಾರೂ ಮಾತಾಡದೇ ಮೌನವನ್ನು ಕಾಪಾಡುತ್ತಾರೆ. ಆದರೆ, ಜೀಪು, ಅದರಲ್ಲಿರುವ ಮನುಷ್ಯರಿರುವುದು ಪ್ರಾಣಿಗಳಿಗೆ ಗೊತ್ತಿರುತ್ತದೆ. ಕೆಲಹೊತ್ತಾದ ಬಳಿಕ ಅವು ತಮ್ಮ ಪಾಡಿಗೆ ತಾವು ಹೋಗುತ್ತವೆ. ಆಗ ಸಫಾರಿ ಗೈಡ್ಗಳು ಅವುಗಳ ಹಾದಿಗೆ ಅಡ್ಡವಾಗಿ ವಾಹನವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ಇದು ವನ್ಯಮೃಗಗಳಿಗೆ ಕಿರಿಕಿರಿ ಹುಟ್ಟಿಸುವ ಸಂಗತಿಯೇ. ಆದರೂ ಅವು ಏನೂ ಮಾಡದಿರುವುದು ಸೋಜಿಗ.
ಸಫಾರಿ ಗೈಡ್ ಪ್ರಾಣಿಗಳ ಮೂಡನ್ನು ಅರಿಯುವುದರಲ್ಲಿ ಭಲೇ ನಿಷ್ಣಾತ. ಪ್ರತಿದಿನ ಒಂದೆರಡು ಸಲ ಆತ ಅವುಗಳನ್ನು ನೋಡುವುದ ರಿಂದ, ಸೂಕ್ಷ್ಮವಾಗಿ ಅವುಗಳ ಚಲನವಲನ ಗ್ರಹಿಸುವುದರಿಂದ, ಆತನಿಗೆ ಅವುಗಳ ಸ್ವಭಾವ ಕಾಲಕಾಲಕ್ಕೆ ಅವುಗಳಲ್ಲಾಗುವ ಬದಲಾವಣೆ ಗೊತ್ತಾಗುತ್ತದೆ. ವನ್ಯಮೃಗಗಳೂ ಮೂಗಾಳಿಯಿಂದ ಈ ಗೈಡ್ಗಳನ್ನು ಅರಿಯುವ ಪ್ರಯತ್ನ ಮಾಡುತ್ತವೆ. ಆದರೆ, ಚಿರತೆ ಏಕಾಏಕಿ ನಿಮ್ಮ ಜೀಪಿನ ಬಾನೆಟ್ ಮೇಲೆ ಬಂದು ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡರೆ ಏನು ಮಾಡುತ್ತೀರಿ? ಮೊದಲೇ ಅದು ಓಪನ್ ಜೀಪು. ಜೋರಾಗಿ ಓಡಿಸಿ ಪಾರಾಗುವ ಛಾನ್ಸೇ ಇಲ್ಲ. ಜೀಪಿಗಿಂತ ಹತ್ತು ಪಟ್ಟು ವೇಗವಾಗಿ ಚಿರತೆ ಓಡುತ್ತದೆ. ಕನಸಿನಲ್ಲಿ ಕಂಡರೆ ಕಿಟಾರನೆ ಕಿರುಚುವ ಭಯ ಉಕ್ಕಿಸುವ ಚಿರತೆ ನಮ್ಮ ಮುಂದೆ ಸಾಕ್ಷಾತ್ ಪಟ್ಟಾಂಗಕ್ಕೆ ಕುಳಿತರೆ ಏನಾಗಬೇಡ? ಅದನ್ನು ನೋಡಿ ಕಿರುಚುವಂತಿಲ್ಲ, ಓಡುವಂತಿಲ್ಲ, ನಗು(?!)ವಂತಿಲ್ಲ. ಕ್ಯಾಮೆರಾ ತೆಗೆಯಲು ಅಳುಕು. ಕಣ್ಣು ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ಅದನ್ನೇ ದಿಟ್ಟಿಸಿ ನೋಡಲು ಪುಕಪುಕ. ಇಂಥ ಘನಘೋರ ಶಿಕ್ಷೆ ಇನ್ನೊಂದಿಲ್ಲ! ನಮ್ಮ-ನಿಮ್ಮ ಕತೆ ಬಿಡಿ, ಇಂಥ ಸಂದರ್ಭದಲ್ಲಿ ಸಫಾರಿ ಗೈಡ್ನ `ಪ್ರಸಾದ'ವೂ ಒಣಗಿರುತ್ತದೆ.
ಇದಕ್ಕೆ ವೈಲ್ಡ್ಲೈಫ್ ಗೈಡ್ಗಳ ಭಾಷೆಯಲ್ಲಿ Near Fatal ಅಂತಾರೆ. ಅಂದರೆ ಹೆಚ್ಚು-ಕಮ್ಮಿ ಕತೆ ಮುಗಿಯಿತು ಎಂದರ್ಥ. ಇಂಥ ಸಂದರ್ಭದಲ್ಲಿ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ, ದೇವರನ್ನು ಸ್ಮರಿಸುತ್ತಾ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕೂರಬೇಕು. ಚಿರತೆ ಐದು ನಿಮಿಷಗಳಲ್ಲಿ ಎದ್ದು ಹೋಗಬಹುದು. ಅದು ಎಷ್ಟು ಬೇಗ ಹೋಗುತ್ತದೆಂಬುದು ಅದು ಯಾವ ಕಾಲ- ಬೇಸಿಗೆಯೋ, ಚಳಿಗಾಲವೋ- ಎಂಬುದನ್ನು ಅವಲಂಬಿಸಿರುತ್ತದೆ. ಬೇಸಿಗೆ ಕಾಲವಾದರೆ ಒಂದೆರಡು ನಿಮಿಷಗಳಲ್ಲಿ ಬಾನೆಟ್ ಮೇಲಿಂದ ಕೆಳಗೆ ಜಿಗಿದು ಹೊರಟು ಹೋಗುತ್ತದೆ. ಅದೇ ಚಳಿಗಾಲವಾದರೆ ಇಪ್ಪತ್ತು-ಮೂವತ್ತು ನಿಮಿಷವಾದರೂ ಅಲ್ಲಿಯೇ ಕುಳಿತಿರುತ್ತದೆ. ಅಥವಾ ಮಲಗಿರುತ್ತದೆ. ಕಾರಣ ಇಷ್ಟೆ, ಚಳಿಗಾಲವಾದರೆ ಕಾದಿರುವ ಬಾನೆಟ್ ಮೇಲೆ ಬೆಚ್ಚಗೆ ಮಲಗಲು ಹಿತವಾಗುತ್ತದೆ. ಒಮ್ಮೊಮ್ಮೆ ಚಿರತೆ ಅಥವಾ ಸಿಂಹ ಅರ್ಧ, ಮುಕ್ಕಾಲು ಗಂಟೆ ಬಾನೆಟ್ ಮೇಲೆ ಶರೀರ ಚೆಲ್ಲಿಕೊಂಡು, ಸುಮ್ಮನೆ ಮಲಗಿಬಿಡುತ್ತವೆ. ಅವುಗಳಿಗೇನೋ ಹಿತಾನುಭವ!
ಆದರೆ, ಜೀಪಿನಲ್ಲಿ ಕುಳಿತವರ ಪರಿಸ್ಥಿತಿ ಮಾತ್ರ ಕೇಳುವುದೇ ಬೇಡ. ನೀವು ವನ್ಯಜೀವಿ ಫೋಟೊಗ್ರಾಫರ್ಗಳಾದರೆ, ಆಗ ನಿಮ್ಮ ಬಳಿ ಕ್ಯಾಮೆರಾ ಇದ್ದರೆ, ಇದೇ ಅತ್ಯುತ್ತಮ ಅವಕಾಶ ಎಂದು ನೂರಾರು ಫೋಟೊ ತೆಗೆಯಬಹುದು. ಆದರೂ ಕ್ಯಾಮೆರಾ ಷಟರ್ ಸಪ್ಪಳ ಬಾನೆಟ್ ಮೇಲಿನ ಪ್ರಾಣಿಗೆ ಕಿರಿಕಿರಿಯಾಗಬಹುದು. ಇಂಥ ಸಂದರ್ಭದಲ್ಲಿ ಕ್ಯಾಮೆರಾವನ್ನು ಮುಟ್ಟಲೇಬಾರದೆಂದು ಗೈಡ್ಗಳು ಹೇಳುತ್ತಾರೆ. ಆ ಪ್ರಾಣಿಗಳಿಗೇನು ಗೊತ್ತು ನಿಮ್ಮ ಕೈಯಲ್ಲಿರುವುದು ಕ್ಯಾಮೆರಾ ಎಂದು. ನೀವು ಅದರ ಮೇಲೆ ದಾಳಿ ಮಾಡಲು ಹತ್ಯಾರ ಹಿಡಿದುಕೊಂಡಿರಬಹುದೆಂದು ಅದು ಭಾವಿಸಲೂಬಹುದು. ಈ ಕಾರಣಕ್ಕಾಗಿ ಕೆಲ ವನ್ಯಜೀವಿ ಫೋಟೊಗ್ರಾಫರ್ಗಳು ಕೊಳವೆಯಾಕಾರದ ಲೆನ್ಸ್ಗೆ ಒಣಗಿದ ಎಲೆಯನ್ನು ಕವರ್ ಮಾಡಿಕೊಂಡಿರುತ್ತಾರೆ ಇಲ್ಲವೇ ಅದೇ ಬಣ್ಣ ಲೇಪಿಸಿಕೊಂಡಿರುತ್ತಾರೆ. ಇಷ್ಟಕ್ಕೂ ಇವೆಲ್ಲ ಸಿದ್ಧತೆಗಳು ನಮ್ಮ ಸಮಾಧಾನಕ್ಕೆ ಎಂಬುದು ಸಹ ಅಷ್ಟೇ ಸತ್ಯ.
ಹಾಗಂತ ಸಫಾರಿ ರೈಡ್ ಅಪಾಯ ಮುಕ್ತ ಎಂದು ಹೇಳುವಂತಿಲ್ಲ. ಏನು ಬೇಕಾದರೂ ಆಗಬಹುದು. ಅದರಲ್ಲೂ ಆಯುಷ್ಯ ತೀರಿದ್ದರೆ, ಆ ವನ್ಯಜೀವಿಗಳ ಬಾಯಿಗೆ ಆಹಾರವಾಗಬೇಕೆಂದು ವಿಧಿ ಬರೆದಿದ್ದರೆ ಯಾರು ತಾನೆ ರಕ್ಷಿಸಬಲ್ಲರು? ದಕ್ಷಿಣ ಆಫ್ರಿಕಾದಲ್ಲಿ ಸಫಾರಿಗೆ ಹೋದ ಹಲವರು ಮೃತ್ಯುವಿನ ದವಡೆ ಮುಟ್ಟಿ ಬಚಾವಾಗಿ ಬಂದು ತಮ್ಮ ರೋಮಾಂಚಕ ಅನುಭವಗಳನ್ನು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಆನೆಯ ದಾಳಿಯಿಂದ ಪಾರಾಗಿ ಬಂದ ಷೆಲ್ಲರ್ ಪೀಟರ್ಸನ್, ಚಿರತೆಯ ಆಕ್ರಮಣದಿಂದ ಕೂದಲೆಳೆ ಅಂತರದಲ್ಲಿ ಬಚಾವಾದ ಮೊಬುಕು ಗುಂತಿನೆಲೆ ಅವರ ಅನುಭವ ಕಥನಗಳನ್ನೇನಾದರೂ ಓದಿ ಕೊಂಡರೆ, ಈ ಜನ್ಮದಲ್ಲಿ ನೀವು ಗೇಮ್ ರೈಡ್ಗೆ ಅಥವಾ ಸಫಾರಿಗೆ ಹೋಗುವುದಿಲ್ಲ.
ಕ್ವಾಝುಲು- ನಟಾಲ್ ಪ್ರದೇಶದಲ್ಲಿನ ಖಾಸಗಿ ಗೇಮ್ ರಿಸವರ್್ (ಥಂಡಾದಲ್ಲಿ ಅಲ್ಲ)ನಲ್ಲಿ ಷೆಲ್ಲರ್ ಪೀಟರ್ಸನ್ ಸಫಾರಿಗೆ ಹೋದಾಗ ಬೆದೆ(ಹೀಟ್)ಗೆ ಬಂದ ಆನೆಯೊಂದು ರೋಷಾವೇಷದಿಂದ ಬಂದು ಡ್ರೈವರ್ ಸೇರಿ ಐವರು ಕುಳಿತ ಜೀಪನ್ನು ಬಲವಾಗಿ ಒದ್ದಿತು. ಜೀಪಿನ ಮುಂದಿನ ಬಾನೆಟ್ ನಪ್ಪಿಹೋದ ಅಲ್ಯುಮಿನಿಯಂ ಕೊಡಪಾನದಂತಾಗಿತ್ತು. ಆನೆ ಒದ್ದ ಹೊಡೆತಕ್ಕೆ ಜೀಪು ಹತ್ತು ಮೀಟರ್ ಹಿಂದೆ ಹೋಗಿ ಬಿದ್ದಿತ್ತು. ಅಷ್ಟಕ್ಕೂ ಸಮಾಧಾನವಾಗದ ಆನೆ ಪುನಃ ಓಡೋಡಿ ಬಂದು ಬಾನೆಟ್ ಕೆಳಗಿನಿಂದ ತನ್ನ ಸೊಂಡಿಲನ್ನು ಚಾಚಿ ಜೋರಾಗಿ ಮೇಲಕ್ಕೆತ್ತಿ ಬೀಸಿದ ಹೊಡೆತಕ್ಕೆ ಜೀಪು ಗಾಳಿಯಲ್ಲಿ ಮೂರು ಸಲ ಗಿರಕಿ ಹೊಡೆದು, ಅದೃಷ್ಟವಶಾತ್ ಚಕ್ರಗಳು ನೆಲಕ್ಕೆ ತಾಕಿಕೊಂಡು ದೊಪ್ಪೆಂದು ಬಿದ್ದಿತು. ಚಕ್ರಗಳೇನಾದರೂ ಮೇಲಕ್ಕೆದ್ದಿದ್ದರೆ ಜೀಪಿನಲ್ಲಿದ್ದವರ್ಯಾರೂ ಬದುಕುಳಿಯುತ್ತಿರಲಿಲ್ಲ.
ಅಷ್ಟಾದರೂ ಅದರ ದುಸಮುಸ ಕೋಪ ಶಮನವಾಗಿರಲಿಲ್ಲ. ತನ್ನಿಂದ ಹದಿನೈದು-ಇಪ್ಪತ್ತು ಮೀಟರ್ನಷ್ಟು ದೂರದಲ್ಲಿದ್ದ ಜೀಪಿನತ್ತ ಪುನಃ ಓಡಿ ಬರುವುದನ್ನು ಕಂಡ ಡ್ರೈವರ್, ಗಾಡಿಯನ್ನು ರಿವಸರ್್ನಲ್ಲಿ ನೂರಾರು ಮೀಟರ್ ಓಡಿಸಿಕೊಂಡು, ಆ ನಂತರ ತಕ್ಷಣ ಎಡಕ್ಕೆ ಹೊರಳಿಸಿ ವಾಯುವೇಗದಲ್ಲಿ ಯಾವ್ಯಾವುದೋ ಮಾರ್ಗದಲ್ಲಿ ಡ್ರೈವ್ ಮಾಡಿ ಬಚಾವ್ ಆಗಿದ್ದ, ಉಳಿದವರ ಪ್ರಾಣಗಳನ್ನೂ ರಕ್ಷಿಸಿದ್ದ. ಆದರೆ, ಈ ದಾಳಿಯಲ್ಲಿ ಎಲ್ಲ ಐವರೂ ಗಂಭೀರವಾಗಿ ಗಾಯ ಗೊಂಡಿದ್ದರು. ಮೊದಲು ಆನೆ ಬಾನೆಟ್ಗೆ ಒದ್ದ ಹೊಡೆತಕ್ಕೆ ಎಲ್ಲರ ಮುಖ ಜಜ್ಜಿ, ದವಡೆ ಕಿತ್ತು ಹೋಗಿತ್ತು. ಸುಮಾರು ಹನ್ನೆರಡು- ಹದಿನೈದು ಮೀಟರ್ ಎತ್ತರದಿಂದ ಜೀಪ್ ಸಮೇತ ನೆಲಕ್ಕೆ ಬಿದ್ದರೆ ಏನಾಗ ಬೇಡ?
ಈ ಪ್ರಸಂಗವನ್ನು ನೆನೆಯುತ್ತಾ ಒಂದೆಡೆ ಪೀಟರ್ಸನ್ ಹೇಳು ತ್ತಾನೆ - `ಆನೆ ಬಲ ಅಂದ್ರೆ ಏನು ಎಂಬುದನ್ನು ಊಹಿಸಬಲ್ಲೆ. ಆದರೆ, ಅದು ತನ್ನ ಸೊಂಡಿಲಿನಿಂದ ಅನಾಮತ್ತಾಗಿ ಜೀಪನ್ನು ಎತ್ತಿ ಗಾಳಿಯಲ್ಲಿ ಚಿಮ್ಮಿತಲ್ಲ, ಅದರ ರಭಸ ಎಷ್ಟಿತ್ತೆಂದರೆ, ಅದನ್ನು ಊಹಿಸಲೂ ಸಾಧ್ಯ ವಿಲ್ಲ. ನಾವು ಗಾಳಿಯಲ್ಲಿ ಗಿರಗಿಟ್ಲೆ ಸುತ್ತುವಾಗ ಸತ್ತೇ ಹೋದೆ ಎಂದು ಅಂದುಕೊಂಡೆ. ಅಷ್ಟು ಎತ್ತರದಿಂದ ಬಿದ್ದ ಹೊಡೆತಕ್ಕೆ ಜೀಪಿನ ಚಕ್ರಗಳೆಲ್ಲ ಕಳಚಿ, ಜಜ್ಜಿ ಹೋಗಿದ್ದಿರಬಹುದೆಂದು ಭಾವಿಸಿದ್ದೆ. ಒಂದೆರಡು ನಿಮಿಷ ಗಳಲ್ಲಿ ನಡೆದುಹೋದ ಈ ಪ್ರಸಂಗದಿಂದ ನನ್ನ ಸ್ನೇಹಿತ ಸಂಪೂರ್ಣ ದನಿ ಕಳೆದುಕೊಂಡ. ಈಗಲೂ ಆತ ಮೂಕ. ಭಾವನಾತ್ಮಕವಾಗಿ ನನಗೂ ಅವನಿಗೂ ಹೆಚ್ಚು ವ್ಯತ್ಯಾಸವಿಲ್ಲ. ನಾವು ಬದುಕಿ ಉಳಿದದ್ದೇ ಪವಾಡ. ಅದಕ್ಕಾಗಿಯೇ ನನ್ನ ಪುಸ್ತಕವನ್ನು ಸಫಾರಿಗೆ ಹೊರಡುವವರು ಸುರಕ್ಷಿತವಾಗಿ ಮರಳಲಿ ಎಂಬ ಸದಾಶಯಕ್ಕೆ ಅಪರ್ಿಸಿದ್ದೇನೆ.'
ಆದರೆ, ಸಫಾರಿಯಲ್ಲಿ ಸಿಗುವ ರೋಚಕ ಅನುಭವವನ್ನು ನೆನೆದರೆ ಈ ರಿಸ್ಕ್ ಯಾವ ಮಹಾ? ಅನಿಸುತ್ತದೆ. ಹೇಗಿದ್ದರೂ ಪೀಟರ್ಸನ್ನ ಸದಾಶಯ ಇದ್ದೇ ಇದೆಯಲ್ಲ!

- ವಿಶ್ವೇಶ್ವರ ಭಟ್

(ಪ್ರದಕ್ಷಿಣೆ ಮುಂದುವರಿಯುವುದು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.