ಹೊಟ್ಟೆ ನೋವಿಗೆ ತಾಯಂದಿರೂ ಕಾರಣ!

ನಾವು ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮ ಜೀವನಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಹೆಣ್ಣುಮಕ್ಕಳು ಧೂಮಪಾನ, ಮದ್ಯಪಾನ ಮಾಡುವುದು ಈಗೀಗ ಮೇಲ್ಮಧ್ಯಮ ವರ್ಗದಲ್ಲೂ ಕಾಮನ್ ಸಂಗತಿ ಎನ್ನಿಸಿಕೊಳ್ಳುತ್ತಿದೆ. ಆದರೆ ಮಾತೆಯರ ಇಂಥ 'ಹವ್ಯಾಸ'ಗಳು ನೇರವಾಗಿ ಶಿಶುವಿನ ಮೇಲೆ ಪರಿಣಾಮ ಬೀರುತ್ತವೆ. ಶಿಶುವಿನ ಉದರ ಶೂಲೆಗೂ, ತಾಯಿ ಧೂಮಪಾನ ಮಾಡುವುದಕ್ಕೂ ನೇರ ಸಂಬಂಧವಿದೆ. ಗರ್ಭಿಣಿಯಾಗಿದ್ದಾಗ ಧೂಮಪಾನ ಮಾಡಿದ್ದರೆ ಅಥವಾ ನಿಕೋಟಿನ್ ರಿಪ್ಲೇಸ್ಮೆಂಟ್ ಚಿಕಿತ್ಸೆಗೆ ಒಳಗಾಗಿದ್ದರೆ, ಪರೋಕ್ಷ ಧೂಮಪಾನ ಮಾಡಿದರೆ ಅಂಥ ಸಂದರ್ಭಗಳಲ್ಲಿಯೂ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ. ಈ ವಿಚಾರ ಪ್ರಸ್ತಾಪಿಸುವುದು ಅಷ್ಟು ಪ್ರಸ್ತುತ ಅಲ್ಲದಿರಬಹುದು. ಆದರೆ ಇಂಥ ಸಂಗತಿಗಳಿಂದಲೂ ಶಿಶುವಿಗೆ ಹೊಟ್ಟೆ ನೋವು ಬರುವ ಸಾಧ್ಯತೆ ಇದೆ ಎನ್ನುವುದನ್ನು ಓದಿದಾಗ ನನ್ನ ಮನಸ್ಸು ಕಲಕಿಹೋಯಿತು. ಆಧುನಿಕತೆ ಹೆಸರಿನಲ್ಲಿ ನಾವು ರೂಢಿಸಿಕೊಳ್ಳುತ್ತಿರುವ ಜೀವನಶೈಲಿ ನಮ್ಮ ಮಕ್ಕಳ ಆರೋಗ್ಯದ ಎಂಥ ಪರಿಣಾಮ ಬೀರುತ್ತದೆ ಎನ್ನುವು ಬಗ್ಗೆ ನಾವು ಯಾವತ್ತೂ ಯೋಚಿಸಿಯೇ ಇಲ್ಲ ಅಲ್ಲವೆ?
ಇರಲಿ. ನಮ್ಮ ವಿಷಯಕ್ಕೆ ಬರೋಣ. ಶಿಶುಗಳಲ್ಲಿ ಉದರ ಶೂಲೆಗೆ ಕಾರಣವಾಗಬಹುದಾದ ಸಾಮಾನ್ಯ ಸಂಗತಿ ಎಂದರೆ ಹಾಲು. ಅದರಲ್ಲೂ ಆಕಳ ಹಾಲು. ಈಗ ಪಾಕೆಟ್ ಹಾಲಿನಲ್ಲಿ ಆಕಳು, ಎಮ್ಮೆ ಎರಡರ ಹಾಲೂ ಬೆರೆತಿರುತ್ತದೆ. ಹೀಗಾಗಿ ಪಾಕೆಟ್ ಹಾಲನ್ನೇ ಶಿಶುವಿಗೆ ಕುಡಿಸುತ್ತಿದ್ದರೂ ಅಥವಾ ಬಾಣಂತಿ ಕುಡಿಯುತ್ತಿದ್ದರೂ ಮಗುವಿಗೆ ಉದರಶೂಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪೌಷ್ಟಿಕಾಂಶಗಳಿಂದ ಕೂಡಿರುವ ಹಾಲು, ಶಿಶುವಿಗೆ ಉದರ ಶೂಲೆ ತರಬಲ್ಲದೆ ಎನ್ನುವ ಜಿಜ್ಞಾಸೆ ಶುರುವಿನಲ್ಲಿ ನನ್ನನ್ನೂ ಕಾಡಿದ್ದಿದೆ. ಆದರೆ ಸಂಶೋಧನೆಗಳು ಮಾತ್ರ ಆಕಳ ಹಾಲೇ ಇಂಥ ತೊಂದರೆಯ ಪ್ರಮುಖ ಮೂಲ ಎನ್ನುವುದನ್ನು ಪದೇಪದೇ ಸಾಬೀತುಪಡಿಸುತ್ತಿವೆ. ಶಿಶುಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಅಥವಾ ಉದರ ಶೂಲೆ ಕುರಿತು ಆರೇಳು ದಶಕಗಳಿಂದ ಸಂಶೋಧನೆಗಳು ನಡೆಯುತ್ತಲೇ ಇವೆ. ಬಹುತೇಕ ಎಲ್ಲರ ಅಭಿಪ್ರಾಯವೂ ಒಂದೇ. ಅದು ಬೊಟ್ಟು ಮಾಡುವುದು ಆಕಳ ಹಾಲಿನತ್ತಲೇ. ತೀರಾ ಇತ್ತೀಚಿನ ಸಂಶೋಧನೆಗಳು ಧೂಮಪಾನದಂತಹ ಸಂಗತಿಗಳ ಬಗ್ಗೆಯೂ ಗಮನ ನೀಡಿವೆ. 'ಎಷ್ಟೇ ಆಡಿಕ್ಟ್ ಆಗಿದ್ದವರೂ ಸಹ ಗರ್ಭಿಣಿಯಾಗಿದ್ದಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಬಯಸುತ್ತಾರೆ, ಧೂಮಪಾನದಿಂದ ದೂರ ಇರಲು ಇಷ್ಟಪಡುತ್ತಾರೆ. ಆದ್ದರಿಂದ ಶಿಶುವಿಗೆ ಉದರ ಶೂಲೆಯಾಗಿದೆ ಎಂಬ ಸಂದೇಹ ಬಂದರೆ ನಾವು ಮೊದಲು ಅನುಮಾನಿಸಬೇಕಾದದ್ದು ಆಕಳ ಹಾಲನ್ನು' ಎನ್ನುವುದು ಸಂಶೋಧಕರ ಒಟ್ಟಭಿಪ್ರಾಯ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


