ಕ್ವಾಝುಲು-ನಟಾಲ್ ಎಂಬ ತರಗುಪೇಟೆ!

ನಮ್ಮ ಕರಾವಳಿ ಹಾಗೂ ಮಲೆನಾಡಿನ ಸೊಬಗನ್ನು ಮಿಶ್ರಣ ಮಾಡಿ, ಚೆನ್ನಾಗಿ ಅಲುಗಾಡಿಸಿ ಒಂದು ಮಾಡಿದರೆ ಹೇಗಿರುತ್ತದೆ?
ಅದು ಕ್ವಾಝುಲು- ನಟಾಲ್ ಥರಾ ಇರುತ್ತದೆ.
ನಿಸರ್ಗದ ಚೆಲುವು ಅಂದ್ರೆ ಏನೇನು ಇರಬೇಕೋ ಅವೆಲ್ಲವೂ ಅಲ್ಲಿ ಇವೆ. ಸಮುದ್ರ, ಬೆಳ್ನೊರೆ ಚೆಲ್ಲುವ ಸಮುದ್ರತೀರ, ಬಿಳಿಯ ಉಸುಕಿನ ಸಾಗರ ಹಾಸು, ಅಲ್ಲಿ ಆಟಕ್ಕೆ ಬರುವ ಆಮೆಗಳ ದಂಡು, ಅವುಗಳನ್ನು ಎತ್ತಿಕೊಂಡು ಹೋಗಲು ಬರುವ ದೈತ್ಯ ಹದ್ದುಗಳು, ಗಾಜಿನ ಮೈಯ ಹೊಳಪಿನಂತೆ ಕಾಣುವ ಬೀಚು, ಸೂರ್ಯ ರಶ್ಮಿ ಪ್ರತಿಫಲನದಿಂದ ಕಣ್ಣಿಗೆ ಹಿತವೆನಿಸುವ ಸಾಗರದ ನೀಲಿ, ಇವೆಲ್ಲವುಗಳಿಗೆ ಪುಟವಿಟ್ಟಂತೆ ಸುತ್ತಲೂ ಹಾಸಿಕೊಂಡ ಸ್ವಚ್ಛ ವಾತಾವರಣ ಕ್ವಾಝುಲು- ನಟಾಲ್ ಪ್ರದೇಶಕ್ಕೇ ಒಂದು ಅನೂಹ್ಯ, ಅನನ್ಯತೆಯ ಘನತೆಯನ್ನು ಕಟ್ಟಿಕೊಟ್ಟಿದೆ.
ದೇವರ ಮಹಿಮೆ ಎಂಥದೋ ಗೊತ್ತಿಲ್ಲ. ಕ್ವಾಝುಲು- ನಟಾಲ್ನಲ್ಲಿ ಹತ್ತು ಕಿ.ಮೀ. ಸಾಗಿದರೆ ಸಾಕು ಪ್ರಕೃತಿ ಊಸರವಳ್ಳಿಯಂತೆ ಬಣ್ಣ, ಪೋಷಾಕು, ಚಹರೆಯನ್ನು ಬದಲಿಸುತ್ತಾ ಹೋಗುತ್ತದೆ. ನಿಸರ್ಗದ ವೈವಿಧ್ಯದ ಜತೆಗೆ ಸಮೃದ್ಧತೆಯೂ ಢಾಳಾಗಿ ಗೋಚರಿಸುತ್ತದೆ. ಇಡೀ ಪ್ರದೇಶ ಒಂದು ಅಪರೂಪದ ಜನಪದೀಯ ಸಂಸ್ಕೃತಿಗೆ ವೇದಿಕೆ ಯಾಗಿದೆಯೆಂಬ ಸುಳಿವು ಸಿಗುತ್ತಾ ಹೋಗುತ್ತದೆ. ಮೂಲಸೌಕರ್ಯ ಗಳಲ್ಲಷ್ಟೇ ಆಧುನಿಕತೆಯನ್ನು ಆಹ್ವಾನಿಸಿಕೊಂಡಿದ್ದರೂ, ಅಂತರಂಗದಲ್ಲಿ ಇನ್ನೂ ನಿಸರ್ಗದ್ದೇ ಕಾರುಬಾರು. ರಸ್ತೆಯಲ್ಲಿ ಹತ್ತು ನಿಮಿಷ ಕ್ರಮಿಸಿದರೆ ಅಡ್ಡವಾಗಿ ಹರಿಯುವ ನದಿಗಳು, ರಸ್ತೆಯುದ್ದಕ್ಕೂ ನಮ್ಮೊಂದಿಗೆ ಸಾಗುವ ಝರಿಗಳು, ದೂರದಿಂದಲೇ ಇಣುಕುವ ತೊರೆಗಳು, ವಿಶ್ರಾಂತ ಸರೋವರಗಳು, ಅಲ್ಲಲ್ಲಿ ಮರಿ ಹಾಕಿದ ಕೆರೆಗಳು, ಒಮ್ಮೊಮ್ಮೆ ಕಣ್ಸೆಳೆ ಯುವ ಜಲಪಾತಗಳು, ಇವೆಲ್ಲವುಗಳ ಮೇಲೂ ಸಹಜ ವಾರಸುದಾರಿಕೆ ಮೆರೆಯುವ ಸಂಭಾವಿತ, ಅಮಾಯಕ ಝುಲು ಹೆಂಗಸರು, ಗಂಡಸರು, ಅವರ ಹಿಡಿತವನ್ನು ಸಡಿಲಗೊಳಿಸಿಕೊಳ್ಳಲು ಪ್ರಯತ್ನಿಸು ತ್ತಿರುವ ಯುವ ಜನಾಂಗ... ಕ್ವಾಝುಲು- ನಟಾಲ್ ಎಂಬ ಎಂದೂ ತೀರದ ಕಲ್ಪನೆಗೆ ರುಜುವಾತಾಗುತ್ತದೆ.
ರಸ್ತೆಯ ಪಕ್ಕದಲ್ಲಿ ಮಲಗಿದ ಊರಿನ ಆಚೆ ಸಾಗುವ ಗದ್ದೆಗಳು ಹಸುರಿನ ಭಿನ್ನಭಿನ್ನ ಬಣ್ಣದ ಮಜಲುಗಳನ್ನು ಅನಾವರಣಗೊಳಿಸುತ್ತಿದ್ದರೆ, ಬಣ್ಣವಿಲ್ಲದ ನೀರು ಸಹ ತನ್ನನ್ನು ಬೆತ್ತಲಾಗಿಸಿಕೊಳ್ಳುತ್ತಾ ಹೋಗುತ್ತದೆ. ನಿಜವಾದ ದಕ್ಷಿಣ ಆಫ್ರಿಕಾ ನೋಡಬೇಕೆಂದರೆ ಕ್ವಾಝುಲು- ನಟಾಲ್ಗೆ ಬರಬೇಕು ಅಂತಾರೆ. ಕಾರಣ ಅಲ್ಲಿ ನದಿ, ಗುಡ್ಡ, ಬೆಟ್ಟ, ಅರಣ್ಯ, ವನ್ಯಪ್ರಾಣಿ, ಕೃಷಿ ಚಟುವಟಿಕೆ, ಮೂಲ ಬುಡಕಟ್ಟು ಜನ, ಜಾನುವಾರು, ಸಂಪ್ರದಾಯ, ಆಚರಣೆ... ಹೀಗೆ ಎಲ್ಲವೂ ಒಟ್ಟಿಗೇ ಸಿಗುವ ತರಗುಪೇಟೆ. ಅಲ್ಲಿ ಚೌಕಾಶಿ ವ್ಯವಹಾರವೇ ಇಲ್ಲ. ಈ ಎಲ್ಲ ಸೊಬಗನ್ನು ಎಷ್ಟು ಬೇಕಾದರೂ ಮೊಗೆದುಕೊಳ್ಳಬಹುದು. ನಿಸರ್ಗದ ಬೇರೆ ಬೇರೆ ಮುಖ, ಮುಖವಾಡ, ನಿಜಸ್ವರೂಪ, ಅಸಲಿಗುಣವನ್ನು ಇಲ್ಲಿ ನೋಡಿಯೇ ಆನಂದಿಸಬೇಕು.
ಕ್ವಾಝುಲು- ನಟಾಲ್ನಲ್ಲಿ ನೂರು ಕಿ.ಮೀ. ಕ್ರಮಿಸಿದರೆ ನೂರಾರು ಬಗೆಯ ಕೃಷಿ ಚಟುವಟಿಕೆಗಳನ್ನು ಕಾಣಬಹುದು ಎಂದು ಆ ಪ್ರಾಂತದ ಮಹಿಮೆಯನ್ನು ಬಣ್ಣಿಸುವುದುಂಟು. ಬಾಳೆ ತೋಟಕ್ಕೆ ತಾಕಿಕೊಂಡು ಕಬ್ಬಿನ ತೋಟ, ಅದರ ಹೆಗಲು ಸವರಿಕೊಂಡು ಅನಾನಸು ತೋಪು, ಅದಕ್ಕೆ ನೆರೆಹೊರೆಯಾಗಿ ಗೋಧಿಯ ವಿಶಾಲ ಹರವು, ಪಕ್ಕದಲ್ಲಿ ಜಾಗ ಕೇಳುವ ಹೂದೋಟ, ಅಲ್ಲಿಂದ ಮುಂದಕ್ಕೆ ತಾಳೆಯ ಮರಗಳು, ಆನಂತರ ಕಾಡು, ಪುನಃ ಅನಾನಸು... ಹೀಗೆ ಸಾಗುತ್ತಾ ಹೋಗುತ್ತದೆ. ಮುಂದೇನಿರಬಹುದು ಎಂಬ ಸಸ್ಪೆನ್ಸ್ ಮಾತ್ರ ಹೆಜ್ಜೆ ಹೆಜ್ಜೆಗೆ ಕಾಡುತ್ತಲೇ ಇರುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ಒಂದು ಪ್ರಾಂತವೆಂದು ಕರೆ ಯಿಸಿಕೊಳ್ಳುವ ಕ್ವಾಝುಲು- ನಟಾಲ್ನಲ್ಲಿ ಜಗತ್ತಿನಲ್ಲಿಯೇ ಪ್ರಮುಖವೆನಿಸಿರುವ ವನ್ಯ ಧಾಮಗಳಿವೆ, ಗೇಮ್ ರಿಸವರ್್ಗಳಿವೆ, ಅಭಯಾ ರಣ್ಯಗಳಿವೆ, ರಕ್ಷಿತ ಅರಣ್ಯಗಳಿವೆ. ಝುಲುಲ್ಯಾಂಡ್ ಬಡರ್್ ರೂಟ್ ಎಂಬ ಪ್ರದೇಶವಿದೆ. ನೂರಾರು ಕಿ.ಮೀ. ದೂರ ಕ್ರಮಿಸಿದರೆ ಐದು ನೂರಕ್ಕೂ ಬೇರೆ ಬೇರೆ ವಿಧದ ಪಕ್ಷಿಗಳು ಸಿಗುತ್ತವೆ. ಕಾಡಿನಲ್ಲಿ ಕಾಲುದಾರಿಯಲ್ಲಿ ಕ್ರಮಿಸುತ್ತಾ ಹೋದರೆ ಪಕ್ಷಿಗಳ ಮುಕ್ತ ವಿಶ್ವವಿದ್ಯಾಲಯ! ಈ ಬಡರ್್ರೂಟನ್ನು ಎಷ್ಟು ಆಸ್ಥೆಯಿಂದ ಕಾಪಾಡಲಾಗಿದೆಯೆಂದರೆ ಇಲ್ಲಿನ ಕೋಟ್ಯಂತರ ಮರಗಳ ಗಣತಿಯನ್ನು ಮಾಡಲಾಗಿದೆ. ಇಂಥ ವಿಶೇಷ, ಅಪರೂಪದ ಕಾಡು ಇಷ್ಟೊಂದು ಬಗೆಯ ಪಕ್ಷಿಗಳಿಗೆ ತವರಾಗಿರುವುದು ಪಕ್ಷಿಪ್ರಿಯರಿಗೂ ಅಚ್ಚರಿಯ ಸಂಗತಿ. ಜೀಪಿನಲ್ಲೂ ಈ ಮಾರ್ಗದಲ್ಲಿ ಹೋಗಬಹುದು. ಜತೆಯಲ್ಲಿ ಗೈಡ್ಗಳು, ಪಕ್ಷಿ ತಜ್ಞರು ಇದ್ದರೆ, ನೀವೂ ಪಕ್ಷಿಪ್ರಿಯರಾಗಿದ್ದರೆ, ಕೈಯಲ್ಲೊಂದು ಪವರ್ಫುಲ್ ಕ್ಯಾಮೆರಾ ಇದ್ದರೆ, ಇದು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವಂಥ ಅನುಭವವಾಗುವುದ ರಲ್ಲಿ ಸಂದೇಹವಿಲ್ಲ.
ಈ ಪ್ರಾಂತದ ಮತ್ತೊಂದು ಆಕರ್ಷಣೆಯೇನೆಂದರೆ ಝುಲುಲ್ಯಾಂಡ್ ರಿನೋ ರಿಸವರ್್. ಹದಿನಾಲ್ಕು ರೈತರು ಸೇರಿ ತಮ್ಮ ಹೊಲ, ಗದ್ದೆ, ಕಾಡುಗಳ ಸುತ್ತ ಹಾಕಿಕೊಂಡಿದ್ದ ಬೇಲಿಯನ್ನು ಕಿತ್ತೆಸೆದು ಇಪ್ಪತ್ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿಮರ್ಿಸಿದ ಈ ಗೇಮ್ ರಿಸವರ್್ನಲ್ಲಿ ಆಫ್ರಿಕಾದ ಕಪ್ಪು ಹಾಗೂ ಬಿಳಿ ಘೇಂಡಾಮೃಗಗಳಿವೆ. 2005ರಲ್ಲಿ 21 ಘೇಂಡಾಮೃಗಗಳಿದ್ದವು. ಈಗ ಅವುಗಳ ಸಂಖ್ಯೆ 80 ಆಗಿದೆ. ಘೇಂಡಾಮೃಗಗಳ ದೊಡ್ಡ ಹಿಂಡನ್ನು ನೋಡಬೇಕೆಂದರೆ ಅಲ್ಲಿಗೆ ಹೋಗಬೇಕು. ಇವುಗಳ ಜತೆಗೆ ಆನೆ, ಸಿಂಹ, ಚಿರತೆ, ಕೇಪ್ ಬಫೆಲೋ ಗಳೂ ಇವೆ. ಸಾಮಾನ್ಯವಾಗಿ ಘೇಂಡಾಮೃಗಗಳು ಹದಿನೈದಿಪ್ಪತ್ತು ಇದ್ದರೆ ಹೆಚ್ಚು. ನಾವು ಉಳಿದುಕೊಂಡ ಥಂಡಾ ಗೇಮ್ ರಿಸವರ್್ನಲ್ಲಿ ಮೂರು ಘೇಂಡಾಮೃಗಗಳಿದ್ದವು. ಆದರೆ, ಒಂದೆಡೆ ಎಂಬತ್ತು ಘೇಂಡಾಮೃಗ ಗಳನ್ನು ನೋಡಸಿಗುವುದು ತೀರಾ ಅಪರೂಪ.
`ಕ್ವಾಝುಲು- ನಟಾಲ್ನಲ್ಲಿ ನೋಡಲೇಬೇಕಾದ ತಾಣ ಅಂದ್ರೆ ಟರ್ಟಲ್ (ಆಮೆ) ಸಫಾರಿ. ಅದನ್ನು ತಪ್ಪಿಸಿಕೊಳ್ಳಬೇಡಿ' ಎಂದು ವನ್ಯಜೀವಿ ಫೋಟೊಗ್ರಾಫರ್ ಸಂದೀಪ ರಾಮಚಂದ್ರ ಹೇಳಿದ್ದರು. ನಮ್ಮ ಟೂರ್ ಪ್ರೋಗ್ರಾಂನಲ್ಲಿ ಟರ್ಟಲ್ ಸಫಾರಿ ಇದೆಯಾ ಎಂದು ನೋಡಿದೆ. ಅದು ಇರಲಿಲ್ಲ. ಬೇಸರವಾಯಿತು. ಆದರೆ, ದಕ್ಷಿಣ ಆಫ್ರಿಕಾದ ಬಗ್ಗೆ ಮೂರು ಸಿಡಿಗಳನ್ನು ಅಲ್ಲಿಂದ ಬರುವಾಗ ತಂದಿದ್ದೆ. ಮನೆಗೆ ಬಂದು ಸಿಡಿ ವೀಕ್ಷಿಸಿದ ಬಳಿಕ ಅದನ್ನು ನೋಡಲಿಲ್ಲವಲ್ಲ ಎಂದು ಬಹಳ ಬೇಸರವಾಯಿತು. ನಾವು ಓಡಾಡಿದ ಪ್ರದೇಶದಿಂದ ಸುಮಾರು 80 ಕಿ.ಮೀ. ದೂರದಲ್ಲಿತ್ತು. ನಮ್ಮ ಪ್ರವಾಸ ಸಂಘಟಕರು ಸರಿಯಾಗಿ ನಿಯೋಜಿಸಿದ್ದರೆ, ಅಲ್ಲಿಗೂ ಹೋಗಿಬರಬಹುದಿತ್ತು. ಅಲ್ಲದೇ ಆಮೆಗಳು ಮೊಟ್ಟೆಯಿಡುವ ಕಾಲ (ನವೆಂಬರ್) ಸಮೀಪಿಸು ತ್ತಿತ್ತು. ಸಮುದ್ರ ತೀರದಲ್ಲಿ ಅವುಗಳ ಚಟುವಟಿಕೆ ಆರಂಭವಾಗಿತ್ತು. ಹೋಗಿದ್ದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಆಮೆ ಸಫಾರಿ ಸಪ್ಟೆಂಬರ್ ಕೊನೆಯಲ್ಲಿ ಶುರುವಾದರೆ ಮಾರ್ಚ್ ವರೆಗಿರುತ್ತದೆ. ಸಮುದ್ರದಲ್ಲಿನ ಆಮೆಗಳು ಆರುನೂರು -ಏಳುನೂರು ಕಿ.ಮೀ. ದೂರದಿಂದ
`ಕೋಸಿ ಬೇ' ಎಂಬ ಸಮುದ್ರ ತೀರಕ್ಕೆ ಬಂದು ಮೊಟ್ಟೆಗಳನ್ನಿಡುತ್ತವೆ.
ಆಮೆಗಳಿಗೆ ಈ ಚೀಚಿನಷ್ಟು ಪ್ರಶಸ್ತವಾದ ಸ್ಥಳ ಮತ್ತೊಂದಿಲ್ಲ. ಅಲ್ಲದೇ ಈ ಬೀಚಿನಲ್ಲಿ ವಾಹನ, ದ್ವಿಚಕ್ರವಾಹನಗಳನ್ನು ನಿಷೇಧಿಸ ಲಾಗಿದೆ. ಮೂರು ತಿಂಗಳ ಕಾಲ ಕಾಲ್ನಡಿಗೆಯಲ್ಲಷ್ಟೇ ಓಡಾಡಬಹುದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಮೆಗಳು ಆಗಮಿಸುವ ಒಂದು ತಿಂಗಳ ಅವಧಿಯಲ್ಲಂತೂ ಜನಸಂಚಾರವನ್ನೂ ನಿಷೇಧಿಸಲಾಗುತ್ತದೆ. ದೂರ ದಿಂದ ಅಟ್ಟಣಿಗೆಗಳ ಮೇಲೆ ನಿಂತು ಆಮೆಗಳನ್ನು ನೋಡಬಹುದು. ನೂರಾರು ಕಿ.ಮೀ. ದೂರದಿಂದ ಇಲ್ಲಿಗೆ ಬರುವ ಆಮೆಗಳು ಮೊಟ್ಟೆ ಹಾಕಿ ಪುನಃ ಸಮುದ್ರಕ್ಕೆ ಹೋಗುತ್ತವೆ. ಕೆಲವು ಅಲ್ಲಿನ ಮರಳು ಗುಡ್ಡೆಯೊಳಗೆ ಅವಿತುಕೊಳ್ಳುತ್ತವೆ. ಸಮುದ್ರ ಸೇರಿದ ಆಮೆಗಳು, ಮೊಟ್ಟೆಯೊಡೆದು ಮರಿಗಳು ಹೊರಬರಲು ಒಂದೆರಡು ದಿನಗಳಿರು ವಾಗ ಪುನಃ ಅಲ್ಲಿಗೆ ಆಗಮಿಸುತ್ತವೆ. ತಾನು ಎಲ್ಲಿ ಮೊಟ್ಟೆ ಇಟ್ಟಿದ್ದೇನೋ ಅದೇ ಜಾಗಕ್ಕೆ ಬಂದು ಮರಿಗಳು ಹೊರಬರುವುದನ್ನೇ ಕಾಯುತ್ತಿರುತ್ತವೆ. ಮೊಟ್ಟೆಯಿಟ್ಟು ಸಮುದ್ರಕ್ಕೆ ಹೋಗಿ ಪುನಃ ತೀರಕ್ಕೆ ಬಂದು ಅದೇ ಜಾಗಕ್ಕೆ ಹೇಗೆ ಬರುತ್ತವೆ? ಲಕ್ಷೊಪಲಕ್ಷ ಆಮೆಗಳು ಮೊಟ್ಟೆಯಿಟ್ಟ ಜಾಗದಲ್ಲಿಯೇ ತಮ್ಮ ಮೊಟ್ಟೆಗಳನ್ನು ಹೇಗೆ ಹುಡುಕುತ್ತವೆ? ಆ ಭಗವಂತನೇ ಬಲ್ಲ! ಮೊಟ್ಟೆಯಿಂದ ಹೊರಬಂದ ಮರಿ ಹದ್ದಿನ ಬಾಯಿ ಸೇರದಿದ್ದರೆ, ಅದೇ ಪುಣ್ಯ. ತಾಯಿಯ ಜತೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಸಮುದ್ರದ ನೀರಿಗಿಳಿದು ಬದುಕು ಆರಂಭಿಸುವ ಪರಿ ಅಮೋಘವಾದುದು.
ಕ್ವಾಝುಲು- ನಟಾಲ್ನಲ್ಲಿರುವ ಒಂದೊಂದು ಗೇಮ್ ರಿಸವರ್್ ಗಳು ಒಂದೊಂದು ಥರಾ. ಹುಹ್ಲುವೆ ಗೇಮ್ ರಿಸವರ್್, ಮುಕುಜೆ ಗೇಮ್ ರಿಸವರ್್, ಪಿಂಡಾ ಪ್ರೈವೇಟ್ ಗೇಮ್ ಸ್ಯಾಂಕ್ಚುವರಿ, ಇಸಿಮಂಗಲಿಸೋ ವೆಟ್ಲ್ಯಾಂಡ್ಸ್ ಪಾಕರ್್, ಟೆಂಬೆ ಎಲಿಫಂಟ್ ಪಾಕರ್್ ವನ್ಯಜೀವಿ ಅನುಭವಕ್ಕೆ ಪುಟವಿಡುವಂಥ ತಾಣಗಳು. ಟೆಂಬೆ ಪಾಕರ್್ ಅಂತೂ ಆನೆಗಳಿಗೇ ಮೀಸಲು. ಸುಮಾರು ಮೂವತ್ತು ಸಾವಿರ ಹೆಕ್ಟೇರ್ ಅರಣ್ಯಪ್ರದೇಶದಲ್ಲಿ ಗಜ ಸಾಮ್ರಾಜ್ಯದ ವೈಭವವನ್ನು ನೋಡಬೇಕೆಂದರೆ ಅಲ್ಲಿಗೆ ಹೋಗಬೇಕು. ಒಂದೆಡೆ ನೂರಕ್ಕೂ ಹೆಚ್ಚು `ಗಜಶೃಂಗ ಸಮಾವೇಶ' ವನ್ನು ವೀಕ್ಷಿಸಲು ಸಾಧ್ಯವಾಗುವುದು ಟೆಂಬೆ ಪಾಕರ್್ನಲ್ಲಿ ಮಾತ್ರ.
ನನಗೆ ಖುಷಿ ಕೊಟ್ಟ ಒಂದು ಸಂಗತಿಯೆಂದರೆ, ಪ್ರವಾಸಿಗರನ್ನು ಇಲ್ಲಿನ ಜನ, ಟೂರ್ ಆಪರೇಟರ್ಗಳು, ಗೇಮ್ ರಿಸವರ್್ನ ಸಿಬ್ಬಂದಿ ನಡೆಸಿಕೊಳ್ಳುವ ರೀತಿ. ಪ್ರವಾಸಿಗರಿಗೆ ಸ್ವಲ್ಪವೂ ಕಿರಿಕಿರಿಯಿಲ್ಲ. ವಾದ- ವಿವಾದಗಳಿಲ್ಲ. ಮೋಸ, ವಂಚನೆ ಇಲ್ಲ. ಟೂರ್ ಪ್ಯಾಕೇಜ್ನಲ್ಲಿ ನೀಡಿದ ಆಶ್ವಾಸನೆಯಂತೆ ಎಲ್ಲವೂ ಪಕ್ಕಾ. ಊಟ- ಉಪಚಾರ, ಸೌಲಭ್ಯ, ಸುವಿಧಾ, ಸುರಕ್ಷತೆ ಎಲ್ಲವೂ ಕರಾರುವಾಕ್ಕು, ಸುವ್ಯವಸ್ಥಿತ. `ಬಿಗ್ಫೈವ್' ಪ್ರಾಣಿಗಳನ್ನು ತೋರಿಸುತ್ತೇವೆ ಅಂದ್ರೆ ಎಲ್ಲವನ್ನೂ ತೋರಿಸುವ ತನಕ ಕಾಡಿನಲ್ಲಿ ಸುತ್ತಾಡಿಸುತ್ತಾರೆ. ಒಮ್ಮೊಮ್ಮೆ ಎಷ್ಟು ಸುತ್ತಾಡಿದರೂ ಯಾವುದಾದರೂ ಒಂದು ಪ್ರಾಣಿ ಸಿಗುವುದೇ ಇಲ್ಲ. ಆದರೂ ಗೈಡ್ಗಳು ಬಿಡುವುದಿಲ್ಲ. ಯಾವುದೇ ಜಾಗದಲ್ಲಿ ಬೇಕೆಂದಾಗ, ಎಷ್ಟು ಹೊತ್ತು ಬೇಕಾದರೂ ವಾಹನ ನಿಲ್ಲಿಸಿ ಫೋಟೊ ತೆಗೆದುಕೊಳ್ಳಲು ಸಹಕರಿಸುತ್ತಾರೆ. ಪ್ರಾಣಿಗಳ ಸಮೀಪದರ್ಶನಕ್ಕೆ ಅನುವಾಗಲೆಂದು ಅವುಗಳ ಹತ್ತಿರ ಹತ್ತಿರ ಕರೆದೊಯ್ಯುತ್ತಾರೆ. ಟೂರ್ಗೈಡ್ಗಳು ಆ ಪ್ರಾಣಿಗಳನ್ನು ಅವೆಷ್ಟೋ ವರ್ಷಗಳಿಂದ ಪ್ರತಿದಿನವೂ ನೋಡುತ್ತಿದ್ದಿರ ಬಹುದು. ಆದರೆ, ಪ್ರತಿಬಾರಿ ನೋಡುವಾಗಲೂ ಮೊದಲ ಸಲ ನೋಡುತ್ತಿದ್ದೇನೆಂಬ ಕುತೂಹಲ ಭಾವವನ್ನು ನಮ್ಮಲ್ಲಿ ಮೂಡಿಸಿ, ಅವುಗಳ ಬಗ್ಗೆ ವಿವರಿಸುತ್ತಾರೆ. ಈ ರೀತಿಯ ಟ್ರೀಟ್ಮೆಂಟ್ನ್ನು ಎಲ್ಲೆಡೆಯೂ ಅನುಭವಿಸಬಹುದು. ಸಫಾರಿ ರೈಡ್, ಅಲ್ಲಿನ ವಾಸ್ತವ್ಯ ಆಪ್ಯಾಯವೆನಿಸುವುದು ಈ ಕಾರಣಕ್ಕೆ. ಕೊಟ್ಟ ಹಣಕ್ಕೆ ಖಂಡಿತ ಮೋಸವಿಲ್ಲ.
ಕ್ವಾಝುಲು- ನಟಾಲ್ನ ಕಾಡು, ವನ್ಯಧಾಮಗಳಲ್ಲಿ ಉಳಿದು ಡರ್ಬನ್ನತ್ತ ನಮ್ಮ ವಾಹನ ಮುಖ ಮಾಡಿದಾಗ, ಇನ್ನೂ ಕೆಲದಿನ ಇದ್ದಿದ್ದರೆ ಚೆನ್ನಾಗಿತ್ತು ಎನಿಸಿತು. ಆದರೆ ಡರ್ಬನ್ ಕರೆಯುತ್ತಿತ್ತು
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


