ಬೈಟುಕಾಫಿ

ಕಳೆದಲ್ಲೇ ಹುಡುಕಿ

ಕಳೆದಲ್ಲೇ ಹುಡುಕಿ
Published On :

ಒಬ್ಬಳು ವೃದ್ಧೆ ಅಂಗಳದಲ್ಲಿ ಏನನ್ನೋ ಹುಡುಕುತ್ತಿದ್ದಳಂತೆ. ಹಾದಿಹೋಕನೊಬ್ಬ ಕೇಳಿದ: 'ಅಜ್ಜೀ, ಏನನ್ನು ಹುಡುಕುತ್ತಿರುವೆ?' 'ನನ್ನ ಕೊರಳಿನ ಹಾರ ಮಗೂ' ಎಂದಳು ಅಜ್ಜಿ. 'ಎಲ್ಲಿ ಬಿದ್ದೋಯ್ತು ಅಜ್ಜೀ?' 'ಅಡುಗೆ ಮನೇಲಿ ಮಗೂ' ಎಂಬುದು ಅಜ್ಜಿಯ ಉತ್ತರ. ಅರೆ, ಅಡುಗೆ ಮನೆಯಲ್ಲಿ ಹಾರ ಬಿದ್ದರೆ ಅಂಗಳದಲ್ಲಿ ಅದನ್ನು ಹುಡುಕಿದರಾಗುತ್ತದೆಯೆ ಎಂದು ಹಾದಿಹೋಕ ಆಶ್ಚರ್ಯಗೊಂಡ. ಅದಕ್ಕೆ ಅಜ್ಜಿಯ ಉತ್ತರ- ಅಡುಗೆ ಮನೆಯಲ್ಲಿ ಕತ್ತಲಿದೆ, ಇಲ್ಲಿ ಬೆಳಕಿದೆ. ಅದಕ್ಕೇ ಹುಡುಕುತ್ತಿದೇನೆ!
ನಮ್ಮಲ್ಲಿ ಹೆಚ್ಚಿನವರ ಪಾಡೂ ಇದೇ ಎನ್ನಲಡ್ಡಿಯಿಲ್ಲ. ನಾವೂ ಏನನ್ನೋ ಕಳೆದುಕೊಂಡಿರುತ್ತೇವೆ. ಹುಡುಕುತ್ತಲೂ ಇರುತ್ತೇವೆ. ಆದರೆ ಎಲ್ಲಿ ಕಳೆದುಕೊಂಡಿರುತ್ತೇವೋ ಅಲ್ಲಿ ಹುಡುಕುವುದಿಲ್ಲ. ಇನ್ನೆಲ್ಲೋ ಹುಡುಕುತ್ತೇವೆ. ನಮ್ಮ ಸಂಸಾರದಲ್ಲಿ ನಾವು ಪ್ರೀತಿ ಕಳೆದುಕೊಂಡಿದ್ದೇವೆ. ಹೊಸದೊಂದು ಸಂಸಾರವನ್ನು ಕಟ್ಟಿಕೊಂಡು ಅಲ್ಲಿ ಅದನ್ನು ಹುಡುಕಲು ಯತ್ನಿಸುತ್ತೇವೆ. ಬೇರೆ ಯಾವ ಸಂಸಾರವೂ ನಮ್ಮದಾಗದು. ನಮ್ಮ ಹೆತ್ತವರಲ್ಲಿ ನಮಗೆ ಪ್ರೀತಿ ಬತ್ತಿ ಹೋಗಿರುತ್ತದೆ. ಪ್ರೀತಿ ಬತ್ತಿದಲ್ಲಿ ಕಾಳಜಿ, ಅಕ್ಕರೆ, ವಾತ್ಸಲ್ಯಗಳಿಗೆ ತಾವಿಲ್ಲ. ಬೇರೆ ಯಾರ ಹೆತ್ತವರಾದರೂ ನಮಗೆ ಹಿತೈಷಿಗಳಾಗಬಹುದೇ ಹೊರತು, ಹೆತ್ತವರೇ ಆಗಲಾರರು. ಕಚೇರಿ ಕೆಲಸ ಸ್ವಾರಸ್ಯ ಕಳೆದುಕೊಂಡಿರುತ್ತದೆ. ನಾವು ಅದರಲ್ಲಿ ಸ್ವಾರಸ್ಯ ಕಾಣದಿರುವುದೇ ಅದಕ್ಕೆ ಕಾರಣ. ಮಕ್ಕಳ ಜತೆಗೆ ಆಟಪಾಠ, ಗಂಡ/ಹೆಂಡತಿ ಜತೆ ಸಣ್ಣಪುಟ್ಟ ರಸಗಳಿಗೆ, ಬಂಧುಗಳ ಜತೆ ವಾತ್ಸಲ್ಯದ ಮುಖಾಮುಖಿ, ಗೆಳೆಯರ ಜತೆಗೆ ಮುಕ್ತ ಮಾತುಕತೆ ಮುಂತಾದ ಖುಷಿಗಳನ್ನು ಕಳೆದುಕೊಂಡಿರುತ್ತೇವೆ. ಬಾರು, ಕ್ಲಬ್ಬು, ಅನೈತಿಕ ಸಂಬಂಧಗಳಲ್ಲಿ ಅದನ್ನು ಹುಡುಕುತ್ತೇವೆ.  ಸಮಸ್ಯೆ ಗೊತ್ತಿದೆ. ಅದಕ್ಕೆ ಕಾರಣವೂ ಗೊತ್ತಿದೆ. ಕಾರಣ ಗೊತ್ತಿದ್ದ ಮೇಲೆ ಪರಿಹಾರವೂ ಹತ್ತಿರದಲ್ಲಿದ್ದಂತೇ ಲೆಕ್ಕ. ಕಳೆದಲ್ಲಿಗೇ ಹಿಂದಿರುಗುವುದಲ್ಲದೆ ಬೇರೆ ದಾರಿ ಇಲ್ಲ. ಮನಸು ಮರೆತ ಪತ್ನಿ/ಪತಿಯ ಬಳಿಗೆ ಸಲ್ಲಾಪಕ್ಕೆ  ಹಿಂದಿರುಗಬೇಕು. ಕೆಲಸದ ಒತ್ತಡದಲ್ಲಿ ಮರೆತ ಮಕ್ಕಳ ಬಳಿಗೆ ಆಟವಾಡಲು ಮರಳಬೇಕು. ಫೋನ್ ಕರೆಗಳಲ್ಲಿ ಮಾತ್ರ ಉಳಿದ ಬಂಧುಗಳ, ಮಿತ್ರರ ಬಳಿಗೆ ಹಿತಕರವಾದ ಭೇಟಿಯಾಗಿ ಮರಳಬೇಕು. ಹಾಗೆ ಹಿಂದಿರುಗುವಾಗ ಪ್ರಾಂಜಲವಾದ ಮನಸ್ಸಿರಬೇಕು. ಆಗಷ್ಟೇ ಕಳೆದುದು ಸಿಕ್ಕೀತು.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.