ಬೈಟುಕಾಫಿ

ನೀರು ಜಾಸ್ತಿ ಕುಡಿದಷ್ಟೂ ಹೊರದೂಡುವ ಕೆಲಸ ಸಲೀಸು!

Published On :

ಮಲಬದ್ಧತೆಗೆ ನಾರಿನ ಅಂಶದ ಕೊರತೆ ಪ್ರಮುಖ ಕಾರಣ. ಏಕಾಏಕಿ ನಾರಿನ ಅಂಶವಿರುವ ಆಹಾರ ಪದಾರ್ಥಗಳ ಸೇವನೆ ಜಾಸ್ತಿ ಮಾಡಿದರೆ ಆರಂಭದಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ನಂತಹ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು. ಅದಕ್ಕೆಲ್ಲ ಗಾಬರಿಯಾಗಬೇಕಿಲ್ಲ. ಹೆಚ್ಚೆಂದರೆ ಎರಡು-ಮೂರು ವಾರ ಇಂಥ ತೊಂದರೆಗಳಿರಬಹುದು. ನಂತರ ತಾನೇತಾನಾಗಿ ಸರಿಹೋಗುತ್ತದೆ. ಸಮಸ್ಯೆಗಳಾದವು ಎಂದುಕೊಂಡು ನಾರಿನ ಆಹಾರ ಸೇವನೆ ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಸರಿಯಲ್ಲ. ಒಳ್ಳೆ ಉಪಾಯ ಎಂದರೆ ನಾರಿನ ಆಹಾರಗಳನ್ನು ಒಮ್ಮೆಲೇ  ಅಧಿಕ ಪ್ರಮಾಣದಲ್ಲಿ ಸೇವಿಸಬೇಡಿ. ನಿಧಾನವಾಗಿ ಪ್ರಮಾಣ ಜಾಸ್ತಿ ಮಾಡಿ. ಹೀಗೆ ಮಾಡುವುದರಿಂದ ಶರೀರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
ನಾರಿನ ಅಂಶದ ಆಹಾರ ಜಾಸ್ತಿಯಾದಾಗ ತೊಂದರೆಗಳು ಕಾಣಿಸಿಕೊಳ್ಳಲು ಮತ್ತೊಂದು ಕಾರಣ ಎಂದರೆ ನೀರಿನ ಕೊರತೆ. ಜಾಸ್ತಿ ನಾರು ಸೇವಿಸಿ ಕಡಿಮೆ ನೀರು ಕುಡಿದರೂ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ನಂಥ ಸಮಸ್ಯೆಗಳು ಶುರುವಾಗುತ್ತವೆ. ಮಲಬದ್ಧತೆಗೆ ನೀರಿನ ಕೊರತೆಯೂ ಕಾರಣ. ಹೀಗಾಗಿ ಸಾಧ್ಯವಾದಷ್ಟು ಜಾಸ್ತಿ ನೀರು ಕುಡಿಯುವುದು ಉತ್ತಮ. ಒಬ್ಬ ವ್ಯಕ್ತಿ ದಿನಕ್ಕೆ ಕಡೇಪಕ್ಷ 6-8 ಗ್ಲಾಸ್ ನೀರು ಕುಡಿಯಬೇಕು ಎನ್ನುತ್ತದೆ ಆರೋಗ್ಯ ವಿಜ್ಞಾನ. ಅಧಿಕ ನೀರು ಮಲ ಗಟ್ಟಿಯಾಗುವುದನ್ನು ತಡೆಯಬಲ್ಲದು. ಇದರಿಂದ ಅದು ಸರಾಗವಾಗಿ ಚಲಿಸಿ ಹೊರಹಾಕಲು ಪ್ರಯಾಸ ಪಡಬೇಕಿಲ್ಲ. ಇದಲ್ಲದೆ ನೀರಿನಿಂದ ಆರೋಗ್ಯಕ್ಕೆ ಸಂಬಂಧಿಸಿದ ಇನ್ನೂ ಬಹಳಷ್ಟು ಪ್ರಯೋಜನಗಳಿವೆ. ಅವುಗಳ ಬಗ್ಗೆ ಮುಂದೆಂದಾದರೂ ಚರ್ಚಿಸೋಣ.
ಮಲಬದ್ಧತೆಗೆ ವೈದ್ಯಕೀಯ ಸಂಗತಿಗಳೂ ಕಾರಣವಾಗುತ್ತವೆ ಎಂದು ಆರಂಭದಲ್ಲಿ ಹೇಳಿದ್ದೆ. ನಿಮಗೆ ಕೆಲವು ನಿರ್ದಿಷ್ಟ ಕಾಯಿಲೆಗಳಿದ್ದರೆ ಆ ಕಾಯಿಲೆಯ ಪರಿಣಾಮವಾಗಿಯೇ ಮಲಬದ್ಧತೆ ಕಾಣಿಸಿಕೊಳ್ಳಬಹುದು ಅಥವಾ ಕಾಯಿಲೆಗೆ ನೀಡುವ ಮಾತ್ರೆಗಳಿಂದಲೂ ಉಂಟಾಗಬಹುದು. ದೀರ್ಘಕಾಲದಿಂದ ಮಾತ್ರೆಗಳನ್ನು ಸೇವಿಸುತ್ತಿರುವವರಿಗೂ ಇಂಥ ತೊಂದರೆ ಕಾಣಿಸಿಕೊಳ್ಳುವುದುಂಟು. ಅಂತಹ ಸಂದರ್ಭಗಳಲ್ಲಿ ನೀವೇ ತೀರ್ಮಾನ ತೆಗೆದುಕೊಂಡು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗುವುದು ಸರಿಯಲ್ಲ. ವೈದ್ಯರ ಸಲಹೆ ಪಡೆದು ಡಯಟ್ ಆರಂಭಿಸುವುದು ಉತ್ತಮ. ಸ್ವಯಂ ನಿರ್ಧಾರ ಒಮ್ಮೊಮ್ಮೆ ನಿಮಗೆ ಹಾಲಿ ಇರುವ ಕಾಯಿಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮುಖ್ಯವಾಗಿ ನಿಮಗೆ ಯಾವ ಕಾರಣದಿಂದ ಮಲಬದ್ಧತೆ ಉಂಟಾಗಿದೆ ಎನ್ನುವ ಸ್ಪಷ್ಟ ಚಿತ್ರಣ ವೈದ್ಯರಿಗೆ ಇರುವುದರಿಂದ ಅವರು ಸೂಕ್ತ ಸಲಹೆ ನೀಡಬಲ್ಲರು. ಬೇರಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೆ, ವಾರಕ್ಕೆ ಮೂರು ದಿನಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆ ಆಗುತ್ತಿದೆ ಮತ್ತು ಅದೂ ನೋವಿನಿಂದ ಕೂಡಿರುತ್ತದೆ ಅಂತಾದರೆ, ಅಂತಹವರು ತಮಗೆ ಮಲಬದ್ಧತೆ ಇದೆ ಎನ್ನುವ ತೀರ್ಮಾನಕ್ಕೆ ಬಂದು ಆಹಾರ ಪದ್ಧತಿಯಲ್ಲಿ ಹಂತಹಂತವಾಗಿ ಬದಲಾವಣೆ ಮಾಡಿಕೊಳ್ಳಬಹುದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.