ತೆವಲಿನ ಮಾತಾಗದಿರಲಿ
ಅಷ್ಟು ಮಾತನಾಡುವ ಅಗತ್ಯವಿದೆಯೇ? ಆ ಸನ್ನಿವೇಶ ಅದಕ್ಕೆ ತಕ್ಕುನಾದುದೇ? ನೀವು ಮಾತನಾಡುತ್ತಿರುವ ವ್ಯಕ್ತಿ ಅದಕ್ಕೆ ಅರ್ಹನೇ? ಖಂಡಿತಾ ಇಂಥದ್ದೊಂದು ಎಚ್ಚರ ನಮ್ಮ ದೈನಂದಿನ ವ್ಯವಹಾರದಲ್ಲಿ ಅತ್ಯಗತ್ಯ. ದಿನದಲ್ಲಿ ನಾವು ಅದೆಷ್ಟೋ ಮಂದಿಯನ್ನು ಭೇಟಿಯಾಗುತ್ತೇವೆ. ನಿತ್ಯವೂ ಒಬ್ಬರಲ್ಲಾ ಒಬ್ಬ ಹೊಸಬ ನಮಗೆ ಪರಿಚಯವಾಗಿಯೇ ತೀರುತ್ತಾನೆ. ಹಾಗೆ ಭೇಟಿಯಾದ ಎಲ್ಲರೂ ನಮಗೆ ಚಿರಪರಿಚಿತರೇ ಆಗಿರಬೇಕು ಎಂದೇನೂ ಇಲ್ಲ. ಅಥವಾ ಪರಿಚಿತರಾಗಿದ್ದರೂ ಅವರ ಗುಣಸ್ವಭಾವಗಳನ್ನು ನಾವು ಅರಿತಿರುವುದಿಲ್ಲ. ಇನ್ನು ಕೆಲವೊಮ್ಮೆ ಅವರ ಸ್ವಭಾವ ಎಂಥದ್ದೆಂಬುದು ಗೊತ್ತಿರುತ್ತದೆ, ಅದರೆ ನಮ್ಮ ಮಾತುಗಳನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಹೇಳಲುಬಾರದು. ಬಹಳಷ್ಟು ಬಾರಿ ಆ ಕ್ಷಣದ ಮನಸ್ಥಿತಿಯನ್ನವಲಂಬಿಸಿ ನಾವು ಎದುರಿನವರ ಮಾತಿಗೆ ಪ್ರತಿಕ್ರಿಯಿಸುವುದು ಸಹಜ. ಹೀಗಾಗಿ ಮಾತನಾಡುವ ಸನ್ನಿವೇಶವೂ ಬಹಳ ಮುಖ್ಯವಾಗಿರುತ್ತದೆ.
ಹೌದು, ನೀವು ನುರಿತ ವಾಗ್ಮಿಯೇ ಆಗಿರಬಹುದು. ಉತ್ತಮ ವಾಕ್ಪಟುವೂ ಆಗಿರುತ್ತೀರಿ. ನಿಮ್ಮನ್ನು ಮಾತಿನಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂಬ ವಿಶ್ವಾಸ ನಿಮಗೆ ಇರುತ್ತದೆ, ಒಪ್ಪಿಕೊಳ್ಳೋಣ. ಹಾಗೆಂದು ಕಂಡ ಕಂಡವರ ಬಳಿಯೆಲ್ಲಾ ಅದನ್ನು ತೋರ್ಪಡಿಸಕೊಳ್ಳುವ ಅಗತ್ಯವಾದರೂ ಏನು? ಇನ್ನು ಕೆಲವರು ಭೇಟಿಯಾದಾಕ್ಷಣವೇ ಅತ್ಯಂತ ಸಲುಗೆಯಿಂದ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ತಪ್ಪೇನೂ ಇಲ್ಲ. ಆದರೆ, ನಿಮ್ಮ ಸಲುಗೆ ಎಲ್ಲ ಸಂದರ್ಭದಲ್ಲೂ ಸದಭಿಪ್ರಾಯವನ್ನೇ ಮೂಡಿಸುತ್ತದೆ ಎಂಬುದನ್ನು ಹೇಳಲಿಕ್ಕಾಗದು. ಅಥವಾ ನಿಮಗೆ ಪರಿಚಯವಾದ ವ್ಯಕ್ತಿ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಂದರ್ಭಗಳೂ ಇರುತ್ತವೆ. ಮಾತು ಯಾವತ್ತಿಗೂ ನಮ್ಮ ವ್ಯಕ್ತಿತ್ವದ ಪ್ರತೀಕ. ಅದು ನಮ್ಮ ಸ್ವಭಾವವನ್ನು ಪ್ರತಿಫಲಿಸುತ್ತದೆ. ಹಾಗೆಂದು ಯಾರೊಂದಿಗೂ ಮಾತನ್ನೇ ಆಡದೇ ಗುಮ್ಮನಗುಸಕನಂತೆ ವರ್ತಿಸಬೇಕೆಂದೇನೂ ಇಲ್ಲ. ಒಂದು ಮುಗುಳ್ನಗು, ಒಂದೆರೆಡು ಸೌಜನ್ಯದ ಪ್ರಶ್ನೋತ್ತರಗಳ ವಿನಿಮಯ ಪರಿಚಯಕ್ಕೆ ಸಾಕೆನಿಸುತ್ತದೆ. ತೀರಾ ಇಬ್ಬರೂ ಸಮಾನ ಮನಸ್ಕರು, ಸಮಾನ ವಿಷಯಾಸಕ್ತರು ಎಂಬುದು ಮನದಟ್ಟಾದರೆ ನಿಮ್ಮ ಕ್ಷೇತ್ರಗಳ ಬಗೆಗಿನ ಚರ್ಚೆ, ಮಾತಿನ ವಿನಿಮಯ ಆಕ್ಷೇಪಾರ್ಹವಲ್ಲ. ಅಂಥ ಮಾತುಗಳು ಎಂದಿಗೂ ನಿಮ್ಮ ವ್ಯಕ್ತಿತ್ವ, ಆತ್ಮ ಗೌರವಕ್ಕೆ ಧಕ್ಕೆ ತರದು. ಆದರೆ ಯಾವುದೇ ಕಾರಣಕ್ಕೂ ಮಾತು ಅಂಥ ಚೌಕಟ್ಟನ್ನು ದಾಟದಂತೆ ಎಚ್ಚರ ವಹಿಸುವುದೊಳಿತು. ಇಲ್ಲದಿದ್ದರೆ ಅದು ತೆವಲಿನಂತೆ ಕಾಣಿಸುತ್ತದೆ. ನಿಮ್ಮೊಳಗೆ ಅಂಥ ಭಾವ ಇರದಿದ್ದರೂ, ನಿಮ್ಮ ಉದ್ದೇಶ ಅದಾಗದಿದ್ದರೂ ಅಂಥ ಭಾವಕ್ಕೆ ನಿಮ್ಮ ಮಾತುಗಳು ಎಡೆಮಾಡಿಕೊಡದಿರಲಿ. ನಿಮ್ಮನ್ನು ಎದುರಿನವರು ಕೀಳಾಗಿ ನೋಡಲು ನಿಮ್ಮ ಮಾತು ಅವಕಾಶ ಮಾಡಿಕೊಡದಿರಲಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

