ಬೈಟುಕಾಫಿ

ಗೋಧಿಯನ್ನು ಅಗಿದು ತಿಂದರೇ ಪರಿಣಾಮ

ಗೋಧಿಯನ್ನು ಅಗಿದು ತಿಂದರೇ ಪರಿಣಾಮ
Published On :

ಗೋಧಿಯನ್ನು 'ವಿರೇಚಕಗಳ ರಾಜ' ಎಂದು ಹೇಳುತ್ತಾರೆ. ಭೇದಿ ಮಾಡಿಸಲು ಇದಕ್ಕಿಂತ ಸುಲಭ ಮದ್ದು ಬೇರೊಂದಿಲ್ಲ. ತುಸು ಗೋಧಿ ತಿಂದರೂ ಸಾಕು, ಹೊಟ್ಟೆ ಕಟ್ಟಿಕೊಂಡ ಅನುಭವದಿಂದ ತ್ವರಿತವಾಗಿ ಮುಕ್ತಿ ಪಡೆಯಬಹುದು. ಮಲಬದ್ಧತೆ ಉಂಟಾಗಲು ಪ್ರಮುಖ ಕಾರಣ ಎಂದರೆ ಆಹಾರದಲ್ಲಿ ನಾರಿನ ಅಂಶದ ಕೊರತೆ. ಸಾಮಾನ್ಯ ಮಲಬದ್ಧತೆ ಇರುವವರಿಗೆ ಅಂದರೆ ನಾರಿನ ಅಭಾವ ಎದುರಿಸುತ್ತಿರುವ ಶೇ 60ರಷ್ಟು ಮಂದಿಗೆ ಗೋಧಿಯೇ ಪರಿಹಾರ ಎನ್ನುವುದನ್ನು ಅಮೆರಿಕ ಮಾತ್ರವಲ್ಲ, ಬ್ರಿಟನ್‌ನ ಆಹಾರ ತಜ್ಞರು ಕೂಡ ಕಂಡುಕೊಂಡಿದ್ದಾರೆ. ಬ್ರಿಟನ್‌ನಲ್ಲಿ ಹಿಂದೆ ದಿನಕ್ಕೆ ಒಂದೂವರೆ ಪೌಂಡ್‌ನಷ್ಟು ಗೋಧಿಯನ್ನು ಬ್ರೆಡ್ ಮೂಲಕ ಸೇವಿಸುತ್ತಿದ್ದರಂತೆ. ಈಗ ಪ್ರಮಾಣ ಅದರ ಅರ್ಧಕ್ಕೆ ಇಳಿದಿದೆಯಂತೆ.
ಗೋಧಿಯಿಂದಲೇ ಮಾಡುವ ಮೈದಾ ಕೂಡ ಒಳ್ಳೆಯದಲ್ಲವೆ? ಖಂಡಿತಾ ಅಲ್ಲ. ಅದು ಗೋಧಿಯ ಸಂಸ್ಕರಿತ ರೂಪ. ಹೀಗಾಗಿ ಅದರಲ್ಲಿ ಗೋಧಿಯಲ್ಲಿರುವಷ್ಟು ವಿರೇಚಕಗಳು ಇರುವುದಿಲ್ಲ. ಅರ್ಧದಷ್ಟು ಸತ್ವಗಳು ನಾಶವಾಗಿರುತ್ತವೆ. ಆದ್ದರಿಂದ ಮೈದಾದಿಂದ ಮಲಬದ್ಧತೆ ಉಂಟಾಗಿರುವವರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಗೋಧಿ ಹಿಟ್ಟನ್ನು ಖರೀದಿಸುವಾಗ 'whole wheat atta' ಎಂದು ಬರೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬ್ರೆಡ್ ಕೊಳ್ಳುವಾಗಲೂ ಅಷ್ಟೆ. ಅದರ ಇನ್‌ಗ್ರಿಡಿಯಂಟ್ಸ್ ಪಟ್ಟಿಯಲ್ಲಿ 'whole wheat' ಎನ್ನುವುದು ಇದ್ದರೆ ನಿಶ್ಚಿಂತೆಯಿಂದ ಕೊಳ್ಳಬಹುದು. ಶರೀರಕ್ಕೆ ಸ್ವಲ್ಪ ಪ್ರಮಾಣದಲ್ಲಿ ಶುದ್ಧ ಗೋಧಿ ಸೇರಿದರೂ ಸಾಕು, ಪರಿಣಾಮಕಾರಿಯಾಗಿರುತ್ತದೆ.
ಇನ್ನೊಂದು ಬಗೆಯ ಗೋಧಿ ಹಿಟ್ಟು ಸಿಗುತ್ತದೆ. ಅದು ಪೌಷ್ಟಿಕಾಂಶಗಳ ಆಗರ. ಬ್ರಿಟನ್‌ನಲ್ಲಿ ಭಾರಿ ಫೇಮಸ್ಸು. 'ಮಿಲ್ಲರ್ಸ್ ಅಟ್ಟಾ' ಎಂದು ಕರೆಯುತ್ತಾರೆ. ನಮ್ಮಲ್ಲೂ ಪ್ರಮುಖ ಮಳಿಗೆಗಳಲ್ಲಿ ಸಿಗುತ್ತದೆ. ಗೋಧಿಯನ್ನು ಹಿಟ್ಟು ಮಾಡಿದ ನಂತರ ಉಳಿಯುವ ಭಾಗ. ಹೀಗಾಗಿ ಅದನ್ನು 'ಗಿರಣಿಯವರ ಹಿಟ್ಟು' ಎಂದು ಹೇಳುತ್ತಾರೆ. ಹಾಗಂತ ಬೆಲೆ ಏನೂ ಕಡಿಮೆ ಇಲ್ಲ ಬಿಡಿ. ಅದರಲ್ಲಿ ನಾರಿನ ಅಂಶ ಹೇರಳವಾಗಿರುತ್ತದೆ. ಬ್ರಿಟನ್‌ನಲ್ಲಿ ಇದರ ಮಹತ್ವವನ್ನು ವೈಜ್ಞಾನಿಕವಾಗಿ ಹೇಗೆ ಸಾಬೀತುಪಡಿಸಿದ್ದಾರೆ ಎಂದು ಹೇಳಿದರೆ ಕೆಲವರಿಗೆ ಒಂದು ಥರಾ ಅನ್ನಿಸಬಹುದು. ಮಿಲ್ಲರ್ಸ್ ಅಟ್ಟಾ ತಿಂದ ಬಳಿಕ ಜೈವಿಕ ತ್ಯಾಜ್ಯದ ಪ್ರಮಾಣ ದುಪ್ಪಟ್ಟಾಗಿರುವುದನ್ನು ಅಲ್ಲಿ ದಾಖಲಿಸಲಾಗಿದೆ. ತಪ್ಪಾಗಿ ಭಾವಿಸಿಕೊಳ್ಳುವ ಅಗತ್ಯವಿಲ್ಲ. ಮಿಲ್ಲರ್ಸ್ ಅಟ್ಟಾ ಜೀರ್ಣಕ್ರಿಯೆಯನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವುದನ್ನು ಹೇಳಲು ಈ ಅಂಶವನ್ನು ಬಳಸಿಕೊಳ್ಳಲಾಗಿದೆ ಅಷ್ಟೆ.
ಅಂದಹಾಗೆ, 'ಗೋಧಿ ಪದಾರ್ಥಗಳನ್ನು ಚೆನ್ನಾಗಿ ಅಗಿದು ತಿನ್ನಬೇಕು. ಇಲ್ಲದಿದ್ದರೆ ಅದರಿಂದ ಹೆಚ್ಚಿನ ಪ್ರಭಾವ ನಿರೀಕ್ಷಿಸಲು ಸಾಧ್ಯವಿಲ್ಲ' ಎನ್ನುತ್ತಾರೆ ಬ್ರಿಟಿಷ್ ಆಹಾರತಜ್ಞ ಡಾ.ರೀಡ್.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.