ಗೋಧಿಗಿಂತಲೂ ಅಕ್ಕಿ ಬಹಳ ಉತ್ತಮ!

ಅಮೆರಿಕನ್ನರು ಮತ್ತು ಬ್ರಿಟಿಷರಿಗೆ ಹೋಲಿಸಿದರೆ ಏಷ್ಯನ್ನರಲ್ಲಿ ಮಲಬದ್ಧತೆ ಸಮಸ್ಯೆ ಕಡಿಮೆ. ಅದಕ್ಕೆ ಕಾರಣ ಇಲ್ಲಿನವರ ಜೀವನಶೈಲಿ ಮತ್ತು ಆಹಾರ. ನಮ್ಮಲ್ಲಿ ಶ್ರಮದ ಕೆಲಸ ಜಾಸ್ತಿ. ಸ್ವಾಭಾವಿಕವಾಗಿಯೇ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇನ್ನು ನಮ್ಮ ಪ್ರಮುಖ ಆಹಾರ ಎಂದರೆ ಅನ್ನ. ಸೋಜಿಗದ ಸಂಗತಿ ನೋಡಿ. ಅಕ್ಕಿ ಮತ್ತು ಅಕ್ಕಿ ಹಿಟ್ಟು ಮಲಬದ್ಧತೆಗೆ ರಾಮಬಾಣ ಎನ್ನುವುದನ್ನು ನಮಗೆ ತೋರಿಸಿಕೊಟ್ಟವರು ಪಾಶ್ಚಾತ್ಯರು! ಅವರಿಗೂ ಅದು ಆಕಸ್ಮಿಕವಾಗಿ ಗೊತ್ತಾದದ್ದು. 'ಗೋಧಿಗಿಂತಲೂ ಅಕ್ಕಿ ಪರಿಣಾಮಕಾರಿ ಎನ್ನುವುದನ್ನು ನಾವು ಖಂಡಿತ ನಿರೀಕ್ಷಿಸಿರಲಿಲ್ಲ' ಎನ್ನುತ್ತಾರೆ ಡಾ.ರೀಡ್. ಎಂಟು ಮಂದಿ ಆರೋಗ್ಯವಂತ ತರುಣರನ್ನು ಆಯ್ಕೆ ಮಾಡಿಕೊಂಡ ರೀಡ್, ಅವರಿಗೆ ಹತ್ತು ದಿನಗಳ ಕಾಲ ನಿತ್ಯ 15 ಗ್ರಾಂನಷ್ಟು ಫೈಬರ್ ಇರುವ ಗೋಧಿ ಹಿಟ್ಟು ಅಥವಾ ಅಕ್ಕಿ ಹಿಟ್ಟು ಕೊಟ್ಟರು. ಪರಿಣಾಮ ಬಹುತೇಕ ಒಂದೇ ಆಗಿತ್ತು. ಆದರೆ ಅಕ್ಕಿ ಹಿಟ್ಟು ಸೇವಿಸಿದ ದಿನದಂದು ಶೌಚಾಲಯ ಕಾರ್ಯ ಇನ್ನೂ ಸಲೀಸಾಗಿ ಆಗುತ್ತಿತ್ತು ಎನ್ನುವುದನ್ನು ಪ್ರಯೋಗಕ್ಕೆ ಒಳಗಾಗಿದ್ದವರು ತಿಳಿಸಿದರು. ಅಲ್ಲಿಗೆ ಗೋಧಿಗಿಂತ ಅಕ್ಕಿಯ ಪರಿಣಾಮ ಸ್ವಲ್ಪ ಹೆಚ್ಚು ಎನ್ನುವುದು ಖಾತ್ರಿಯಾಯಿತು. ಇನ್ನೂ ವಿಶೇಷ ಎಂದರೆ ಗೋಧಿ ಹಿಟ್ಟಿಗಿಂತ ಅಕ್ಕಿ ಹಿಟ್ಟಿನ ರುಚಿ ಎಂಬುದಾಗಿ ಎಲ್ಲರೂ ತಿಳಿಸಿದ್ದರು. ಓಟ್ ಹಿಟ್ಟಿನಲ್ಲಿ ಕೂಡ ಮಲ ವಿಸರ್ಜನೆ ಉತ್ತೇಜಿಸುವ ವಿರೇಚಕಗಳಿವೆ ಎನ್ನುವುದನ್ನು ಆಹಾರ ತಜ್ಞರು ಈಗ ಕಂಡುಕೊಂಡಿದ್ದಾರೆ.
ನಾರಿನ ಅಂಶದಿಂದ ಸಮೃದ್ಧವಾಗಿರುವ ಗೋಧಿ, ಅಕ್ಕಿ ಅಥವಾ ಬೇರಾವುದೇ ಧಾನ್ಯಗಳಲ್ಲಿ (ವಿಶೇಷತಃ ಏಕದಳ ಧಾನ್ಯಗಳು) ವಿರೇಚಕಗಳು ಹೆಚ್ಚಾಗಿರುತ್ತವೆ. ಅವು ಕರುಳಿನ ಭಾಗದಲ್ಲಿ ಜೈವಿಕ ತ್ಯಾಜ್ಯದ ಸಂಚಾರಕ್ಕೆ ಉತ್ತೇಜನ ನೀಡುತ್ತವೆ. ಅದಕ್ಕೆ ಪೂರಕವಾಗಿ ಕರುಳಿನ ಭಾಗದಲ್ಲಿರುವ ನರಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಸ್ಪರ್ಶದ ತುಸು ಅನುಭವವಾದರೂ ಸಂಚಲನೆ ಶುರುವಾಗುತ್ತದೆ.
ಹಾಗಾದರೆ ಮಲಬದ್ಧತೆಯಿಂದ ಬಳಲುತ್ತಿರುವವರು ನಿತ್ಯ ಯಾವ ಪ್ರಮಾಣದಲ್ಲಿ ಧಾನ್ಯಗಳನ್ನು ಸೇವಿಸಬೇಕು? ಇಂತಿಷ್ಟೇ ಪ್ರಮಾಣ ಎಂಬುದಿಲ್ಲ. ಅದನ್ನು ನೀವೇ ಖುದ್ದು ಪ್ರಯೋಗದ ಮೂಲಕ ಕಂಡುಕೊಳ್ಳಬೇಕು. ಸ್ವಲ್ಪಸ್ವಲ್ಪನಾಗಿ ಆರಂಭಿಸಿ, ಶರೀರ ಒಗ್ಗಿಕೊಳ್ಳುತ್ತಿದ್ದಂತೆ ಪ್ರಮಾಣವನ್ನು ಜಾಸ್ತಿ ಮಾಡಬೇಕು. ಒಂದು ಚಹಾ ಚಮಚದಷ್ಟು ಹಿಟ್ಟನ್ನು ಸೇವಿಸಿದರೂ ಸಾಕುತ್ತಾರೆ ಎನ್ನುತ್ತಾರೆ ಬ್ರಿಟಿಷ್ ಆಹಾರ ತಜ್ಞರು. ಊಟ ಅಥವಾ ತಿಂಡಿ ಮೇಲೆ ಸಿಂಪಡಿಸಿಕೊಂಡು ಸೇವಿಸಿದರೂ ಆದೀತು ಎಂಬುದು ಅವರ ಅಭಿಪ್ರಾಯ.
ಏಕಾಏಕಿ ಅಧಿಕ ಪ್ರಮಾಣದ ನಾರಿನ ಅಂಶವನ್ನು ಶರೀರಕ್ಕೆ ಸೇರಿಸಿದರೆ ಏನಾಗುತ್ತದೆ? ಹಾಗೆ ಮಾಡಿಕೊಂಡ ವ್ಯಕ್ತಿಯೊಬ್ಬನ ಕಥೆ ಇದೆ. ಅದನ್ನು ನಾಳೆ ಹೇಳುತ್ತೇನೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


