ಬೈಟುಕಾಫಿ

ಪಾಕದಮನೆ ಹುಡುಗಿ!

ಪಾಕದಮನೆ ಹುಡುಗಿ!
Published On :

ಅಡುಗೆಮನೆ ಎಂದಾಕ್ಷಣ ಹತ್ತಡಿ ದೂರ ನಿಲ್ಲುತ್ತಾರೆ ಈಗಿನ ಹೆಣ್ಮಕ್ಕಳು. 'ಸೌಟು ಹಿಡಿಯೋದು ಬೇಡ, ಹೋಟೆಲ್‌ನಲ್ಲಿ ಮೆನು ಹಿಡಿಯೋಣ' ಎನ್ನುವಷ್ಟು ಸೋಮಾರಿತನ ಬಯಸುವವರು. ಕಾಲೇಜಿಗೆ ಹೋಗುವ ಹುಡುಗಿ, ತಿನ್ನಲಿಕ್ಕೆ ಮಾತ್ರವೇ ಕಿಚನ್ ಸೇರುತ್ತಾಳೆ. ತಾಯಿಗೆ ಇದೇ ಚಿಂತೆ. 'ಗಂಡನ ಮನೆಗೆ ಹೋಗಿ ಇವಳು ಅಡುಗೆ ಮಾಡೋದು ಹೌದಾ?'.
ಈಗಿನ ತಲೆಮಾರಿನ ಈ ನೀತಿ ಪೋಷಕರಿಗೆ ದೊಡ್ಡ ತಲೆಬೇನೆ. ಬಹುತೇಕ ಸಿಟಿ ಹುಡುಗಿಯರಿಗಿಂದು ಅಡುಗೆಮನೆ ಆಗಿಬರದು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಸಾಧನೆ ಮೆರೆದವಳು ಬೆಂಗಳೂರಿನ ಕ್ರಿಶಾ ಸಾಂಘ್ವಿ. ಮಹಾವೀರ್ ಜೈನ್ ಪಿಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ.
ಕ್ರಿಶಾ ಈಗ ಐಐಎಚ್‌ಎಂ (ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್) ಆಯೋಜಿಸಿದ 'ಇಂಡಿಯನ್ ಸ್ಕೂಲ್ಸ್ ಯಂಗ್ ಚೆಫ್‌' ಸ್ಪರ್ಧೆಯ ಫೈನಲ್‌ಗೆ ತಲುಪಿರುವ ಪಾಕಪ್ರವೀಣೆ. ಲಂಡನ್‌ನಲ್ಲಿ ಸೆಪ್ಟೆಂಬರ್ 17ರಂದು ನಡೆಯುವ ಅಂತಿಮ ಸ್ಪರ್ಧೆಯಲ್ಲಿ ಭಾರತದಿಂದ ಆಯ್ಕೆಯಾದ 6 ಸ್ಪರ್ಧಾಳುಗಳಲ್ಲಿ ಈಕೆಯೂ ಒಬ್ಬಳು.

ಏನಿದು ಸ್ಪರ್ಧೆ?
ಐಐಎಚ್‌ಎಂ ಪ್ರತಿವರ್ಷ 'ಇಂಡಿಯನ್ ಸ್ಕೂಲ್ಸ್ ಯಂಗ್ ಚೆಫ್‌' ಸ್ಪರ್ಧೆ ಆಯೋಜಿಸುತ್ತದೆ. ಭಾರತದ 28 ರಾಜ್ಯಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. 6 ಮಹಾನಗರಗಳಲ್ಲಿ ನಡೆಯುವ ಈ ಸ್ಪರ್ಧೆಗೆ ಬೆಂಗಳೂರು ದಕ್ಷಿಣ ಭಾರತದ ಕೇಂದ್ರವಾಗಿತ್ತು. ಒಟ್ಟು 3 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆಯ್ಕೆ ಹೇಗಿರುತ್ತೆ?
ಮೂರು ಸುತ್ತಿನ ಸ್ಪರ್ಧೆ ಇದು. ಮೊದಲನೆಯದರಲ್ಲಿ, ಮನೆಯಿಂದಲೇ ಖಾದ್ಯ ಸಿದ್ಧಪಡಿಸಿಕೊಂಡು ಹೋಗಬೇಕು. ಕ್ರಿಶಾ ರಾಷ್ಟ್ರಧ್ವಜದ ಬಣ್ಣಗಳನ್ನೊಳಗೊಂಡ ಪಂಜಾಬಿ ಊಟವನ್ನು ರೆಡಿಮಾಡಿಕೊಂಡು ಹೋಗಿದ್ದಳು. ಎರಡನೇ ಸುತ್ತು ಐಐಎಚ್‌ಎಂ ಕಾಲೇಜಿನಲ್ಲೇ ನಡೆಯುತ್ತದೆ. ಆಗ ಕ್ರಿಶಾ ಗುಜರಾತಿ ಊಟ ಸಿದ್ಧಪಡಿಸಿ ಸೈ ಎನ್ನಿಸಿಕೊಂಡಳು. ನಂತರ ಫೈನಲ್‌ನಲ್ಲಿ ಸೈಡ್ಸ್, ಮೀಲ್ಸ್ ಮತ್ತು ಸ್ವೀಟ್ಸ್ ತಯಾರಿಕೆ ಇತ್ತು. ಅಲ್ಲೂ ಕ್ರಿಶಾ 6 ಸ್ಪರ್ಧಿಗಳನ್ನು ಹಿಂದಿಕ್ಕಿದಳು.

ಅಮ್ಮನೇ ಗುರು
ಚೇತನ್ ಸಾಂಘ್ವಿ, ಪಲ್ಲವಿ ಸಾಂಘ್ವಿ ದಂಪತಿಯ ಪುತ್ರಿ ಈಕೆ. ಚಿಕ್ಕಂದಿನಿಂದಲೇ ಕ್ರಿಶಾ ಅಡುಗೆಮನೆ ಮೇಲೆ ಪ್ರೀತಿ ಬೆಳೆಸಿಕೊಂಡಳು. ಅಜ್ಜಿ ಹಾಗೂ ಅಮ್ಮನ ಪಾಕ ಕಲೆಗಳನ್ನು ಶ್ರದ್ಧೆಯಿಂದ ವೀಕ್ಷಿಸಿ, ಕೊನೆಗೆ ತಾನೇ ಪ್ರಯೋಗ ಶುರುಹಚ್ಚಿಕೊಂಡಳು.
ಕ್ರಿಶಾಗೀಗ ಫೈನಲ್‌ನಲ್ಲಿ ಕರ್ನಾಟಕಕ್ಕೆ ಹೆಸರು ತರುವ ಕನಸು. ಅದು ಈಡೇರಲಿ ಎಂಬುದು ಕನ್ನಡಿಗರ ಆಶಯ.

- ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.