ಬೈಟುಕಾಫಿ

ಹಣವಂತರಿಗೆ ಮಾತ್ರ!

Published On :

ಭಾರತಿಯ ಸನಾತನ ಸಂಸ್ಕೃತಿ ಹೇಳುವ ಪ್ರಕಾರ ಹಿಂದಿನ ಜನ ಆಚಾರ, ವಿಚಾರವಂತಿಕೆ, ಮಡಿವಂತಿಕೆ ಜೊತೆ-ಜೊತೆಗೆ ವಾಸ್ತುವನ್ನು ನಂಬಿ ಅದರಂತೆ ನಡೆದದ್ದು ಇದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಣವಂತರಿಗೆ, ತಮ್ಮ ಹಣವನ್ನು ಹೇಗೆ ವ್ಯಯ ಮಾಡುವುದು ಅಂತ ಯೋಚನೆ ಮಾಡುವವರಿಗೆ ಈ ವಾಸ್ತು ಬೇಕಾಗಬಹುದೇನೊ! ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ನಮ್ಮ ಭಾರತದಲ್ಲಿ ದಿನಗೂಲಿ ಮಾಡಿ ಜೋಪಡಿಗಳಲ್ಲೇ ವಾಸ ಮಾಡಿಕೊಂಡು ಇರುವಂತಹವರೇ ಅಧಿಕ ಸಂಖ್ಯೆಯಲ್ಲಿರುವಾಗ ಈ ವಾಸ್ತು ಗೋಜಿಗೆ ಹೋಗದವರು ಅಪಾರ ಮಂದಿ ಇದ್ದಾರೆ. ಆದರೆ ನನಗೆ ತಿಳಿದ ಪ್ರಕಾರ ಈ ಮೂಢನಂಬಿಕೆಗಳನ್ನ ತೊರೆದು ಸೂಕ್ಷ್ಮವಾಗಿ ಗಮನಿಸಿದರೆ ಈ ವಾಸ್ತು ಇಲ್ಲದೆಯೇ ಸಾಕಷ್ಟು ಮಂದಿ ತಮ್ಮ ಜೀವನದಲ್ಲಿ ಮುಂದೆ ಬಂದಿರುವುದು ಉಂಟು. ಆದ್ದರಿಂದ ಈ ವಾಸ್ತು ಹಣವಂತರಿಗೆ ಬೇಕು ಮತ್ತು ಬಡವರಿಗೆ ಬೇಡವಾಗಿದೆ.
-ಶಂಕರ್. ಡಿ.ಎನ್, ಚಿತ್ರದುರ್ಗ

ವಾಸ್ತುಗಿಂತ ವಸ್ತು ಮುಖ್ಯ
ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ವಾಸ್ತುವಿನ ಗೀಳು ಬಹಳವಾಗಿ ಅಂಟಿಕೊಂಡಿದೆ. ಇದು ಒಂದು ದಂಧೆಯಾಗಿ ಪರಿವರ್ತನೆಗೊಂಡಿರುವುದರಿಂದ ಮನೆ ಕಟ್ಟುವವರಲ್ಲಿ ಬಹಳ ಜನ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಹಿಂದಿನವರಿಗೆ ವಾಸ್ತು ಬಗ್ಗೆ ಅರಿವು ಇತ್ತು. ಆದರೆ ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇರುತ್ತಿತ್ತು. ಈಗ ಜನಗಳು ಒಂದು ರೀತಿಯ ಮೋಹಕ್ಕೆ ಒಳಗಾಗಿ ವಾಸ್ತುವೇ ಅವರ ಜೀವನದ ಎಲ್ಲ ಆಗುಹೋಗುಗಳನ್ನು ತೀರ್ಮಾನಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಂತಿದೆ. ಇಲ್ಲಿ ಮುಖ್ಯವಾಗಿ ವಾಸ್ತು ಬೇಡವೇ ಬೇಡ ಎಂಬುದಲ್ಲ. ಅದರ ಬಗ್ಗೆ ಅತಿಯಾದ ಕಾಳಜಿ ಒಳ್ಳೆಯದಲ್ಲ. ವಾಸ್ತುವಿಗಿಂತ ವಸ್ತು ಅಂದರೆ ಮನೆಗೆ ಬಳಸುವ ಗುಣಮಟ್ಟದ ಪರಿಕರಗಳು, ಮನುಷ್ಯನ ಭಾವನೆ, ನಡವಳಿಕೆ ಅತಿ ಮುಖ್ಯ. ಅತಿಯಾದರೆ ಅಮೃತವೂ ವಿಷವಾದೀತು  ಎಂಬ ಮಾತನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಟ   ಕೆ.ವಿ. ಸೀತಾರಾಮ್, ಮಂಗಳೂರು

ಮನದ ವಾಸ್ತು ಸರಿ ಇರಲಿ
ಅತ್ಯಂತ ಪ್ರಾಚೀನವಾದ ವಾಸ್ತುಶಾಸ್ತ್ರದಲ್ಲಿಯೂ ಹಲವಾರು ಪರಿಣಾಮಕಾರಿ ಅಂಶಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಅಂತಹ ಅಂಶಗಳ ಅಸ್ತಿತ್ವ ಸಾಧಿತವಾಗುತ್ತಿರುವುದು ಮಾತ್ರ ಅವುಗಳ ಆಳದಲ್ಲಿರುವ ವೈಜ್ಞಾನಿಕ ಕಾರಣಗಳಿಂದಲೇ ಎಂಬುದು ಗಮನಾರ್ಹ ವಿಚಾರ. ಅಂದ ಮೇಲೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಾಳಿ, ಉಷ್ಣಾಂಶ, ಭೂಮಿಯ ಮಟ್ಟ, ಸೂರ್ಯನ ಕಿರಣ, ಗಾಳಿಯ ವೇಗ ಮತ್ತು ದಿಕ್ಕು ಮುಂತಾದ ಭೌಗೋಳಿಕ ಅಂಶಗಳ ಆಧಾರದಲ್ಲಿ ವಾಸ ಯೋಗ್ಯವಾದ ಮತ್ತು ಎಲ್ಲಾ ಆಯಾಮಗಳಲ್ಲಿಯೂ ಹೊಂದಾಣಿಕೆಯಾಗುವ ಮನೆಗಳನ್ನು ನಿರ್ಮಿಸಿಕೊಳ್ಳಬಹುದಲ್ಲವೆ? ರಾಜಕಾರಣಿಗಳು, ಧನಿಕರು, ಉದ್ಯಮಿಗಳು ಇಂತಹ ಕೆಟ್ಟ ಚಾಳಿಗಳಿಗೆ ಅನಾವಶ್ಯಕ ಮಹತ್ವ ನೀಡಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ವಾಸ್ತುವಿನಿಂದ ಯಾವುದೇ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳಾಗುವುದಿಲ್ಲ. ಅಷ್ಟಕ್ಕೂ ಒಳಿತು ಕೆಡುಕು ನಿರೂಪಿತವಾಗುವುದು ಮನದ ವಾಸ್ತುವಿನಂದಲೇ ಹೊರತು ಮನೆಯ ವಾಸ್ತುವಿನಿಂದಲ್ಲ.
-ಸಂದೇಶ್ ಎಚ್.ನಾಯ್ಕ ಹಕ್ಲಾಡಿ, ಕುಂದಾಪುರ

'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.