ತಿನ್ನದೇ ಇರುವ ತಪ್ಪು ಮಾಡಬೇಡಿ

ಮನೆಯಲ್ಲಿ ಯಾರಿಗೇ ಆಗಲಿ, ಜೀರ್ಣಾಂಗದಲ್ಲಿ ತೊಂದರೆ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದರೆ ಅಪ್ಪ ಅಡುಗೆ ಮನೆಗೆ ಹೋಗಿ ತಾಕೀತು ಮಾಡುತ್ತಿದ್ದರು, 'ಅವರನ್ನು ಇವತ್ತು ಉಪವಾಸ ಇಡಿ. ತಿನ್ನಲು ಏನೂ ಕೊಡಬೇಡಿ. ತೀರಾ ಬಾಯಾರಿಕೆಯಾದರೆ, ಬಾಯಿ ಒಣಗಿದಂತಾದರೆ ನೀರು ಕೊಡಿ'. ಇವತ್ತಿಗೂ ಅದೇ ಭಾವನೆ ಹಲವರಲ್ಲಿದೆ. ನಾವು ಮಾಡುವುದೂ ಅದನ್ನೇ. ಭೇದಿ ಶುರುವಾಗುತ್ತಿದ್ದಂತೆ ಆಹಾರ ಸೇವನೆ ನಿಲ್ಲಿಸಿಬಿಡುತ್ತೇವೆ. ಇದು ಜಗತ್ತಿನಾದ್ಯಂತ ಇರುವ ಸಾರ್ವತ್ರಿಕ ನಂಬಿಕೆ ಕೂಡ ಹೌದು. 'ಅಜೀರ್ಣದಿಂದಲೇ ಅತಿಸಾರ ಉಂಟಾಗಿದೆ, ಕರುಳಿಗೆ ವಿಶ್ರಾಂತಿ ಬೇಕಾಗಿದೆ' ಎನ್ನುವ ನಮ್ಮ ನಂಬಿಕೆ ಹಾಗೆ ಮಾಡಿಸುತ್ತದೆ ಅಷ್ಟೆ. ವಾಸ್ತವವಾಗಿ ಭೇದಿ ಶುರುವಾದಾಗ ಏನನ್ನೂ ತಿನ್ನದೇ ಇರುವುದು ಒಳ್ಳೆಯದಲ್ಲ. ನಿಮಗೆ ಆ ಸಂದರ್ಭದಲ್ಲಿ ಏನೂ ಸೇರದೇ ಇರಬಹುದು ಅಥವಾ ಏನನ್ನೂ ತಿನ್ನುವ ಮನಸ್ಥಿತಿಯೂ ಇರದೇ ಇರಬಹುದು, ಆದರೆ ತ್ವರಿತವಾಗಿ ಗುಣಮುಖರಾಗಬೇಕು ಎಂದಾದರೆ ಆಗಾಗ ಸ್ವಲ್ಪಸ್ವಲ್ಪ ತಿನ್ನುತ್ತಿರಬೇಕು. ಅನ್ನ, ಕ್ಯಾರೆಟ್ ಸೂಪ್, ಬಾಳೆಹಣ್ಣು, ಸೇಬು, ಟೋಸ್ಟ್ ಇವನ್ನು ಆಗಾಗ ತಿನ್ನುತ್ತಿರುವುದು ಒಳ್ಳೆಯದು. ದಿನಕ್ಕೆ ಏಳೆಂಟು ಸಲ, ಸ್ವಲ್ಪಸ್ವಲ್ಪ ತಿನ್ನುವುದು ಉತ್ತಮ. ಎಚ್ಚರಿಕೆ ವಹಿಸಬೇಕಾದದ್ದು ಸಕ್ಕರೆ ಅಂಶದ ಬಗ್ಗೆ. ಕರುಳು ನೀರನ್ನು ಎಳೆದುಕೊಳ್ಳುವಾಗ ಸಕ್ಕರೆ ಅಂಶವನ್ನೂ ಎಳೆದುಕೊಳ್ಳುವುದರಿಂದ ಸಕ್ಕರೆ ತಿಂದರೆ ಭೇದಿ ನಿಲ್ಲುವ ಬದಲು ಇನ್ನಷ್ಟು ಜಾಸ್ತಿಯೇ ಆಗಬಹುದು.
ಶಿಶುಗಳಲ್ಲಿ ಮತ್ತು ಎಳೆ ಮಕ್ಕಳಲ್ಲಿ ಅತಿಸಾರ ಕಾಣಿಸಿಕೊಳ್ಳುವುದು ಹೆಚ್ಚು. ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳ ಮಕ್ಕಳಲ್ಲಿ ಮೊದಲೇ ಪೌಷ್ಟಿಕತೆ ಕಡಿಮೆ ಇರುವುದರಿಂದ ಅತಿಸಾರದಿಂದಲೇ ಸಾವನ್ನಪ್ಪುವ ಪ್ರಕರಣಗಳೂ ಇವೆ. ಹೀಗಾಗಿ ಎಳೆಯರಲ್ಲಿ ಕಾಣಿಸಿಕೊಳ್ಳುವ ಅತಿಸಾರವನ್ನು ಕಡೆಗಣಿಸುವುದಾಗಲೀ ಅಥವಾ ದೊಡ್ಡವರಿಗೆ ಮಾಡುವ ಔಷಧೋಪಚಾರ, ಮನೆಮದ್ದು ಮಾಡುವುದಾಗಲೀ ಸಲ್ಲದು. ಅವರಲ್ಲಿ ಇನ್ನೊಂದು ಅಪಾಯ ಎಂದರೆ ನಿರ್ಜಲೀಕರಣ. ಶಿಶುಗಳು, ಸಣ್ಣ ಮಕ್ಕಳಲ್ಲಿ ಬಹುಬೇಗ ನಿರ್ಜಲೀಕರಣ (ಡಿ ಹೈಡ್ರೇಶನ್)ಉಂಟಾಗುತ್ತದೆ. ಭೇದಿ ಶುರುವಾದ ಅರ್ಧ ಗಂಟೆಯೊಳಗೆ ನಿರ್ಜಲೀಕರಣ ಆಗುವುದೂ ಉಂಟು. ಇದು ದಿಢೀರ್ ಆಗುವ ಪ್ರಕ್ರಿಯೆ. ಹೀಗಾಗಿ ಮಗುವಿಗೆ ಓಆರ್ಎಸ್ನಂಥ ದ್ರಾವಣಗಳನ್ನು ನೀಡುವುದು ಮುಖ್ಯ. ಎಲ್ಲಾ ಔಷಧ ಅಂಗಡಿಗಳಲ್ಲೂ ಸಿಗುವ ಇಂಥ ದ್ರಾವಣಗಳು ಈಗ ಬಗೆಬಗೆಯ ಫ್ಲೇವರ್ಗಳಲ್ಲಿ ದೊರೆಯುತ್ತಿವೆ. ಮಕ್ಕಳಿರುವ ಮನೆಯಲ್ಲಿ ಇವು ಇರಲೇಬೇಕು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


