ಬೈಟುಕಾಫಿ

ಅತಿಸಾರವನ್ನು ನಿಲ್ಲಿಸುವಳೇ ರಾಣಿ?

ಅತಿಸಾರವನ್ನು ನಿಲ್ಲಿಸುವಳೇ ರಾಣಿ?
Published On :

ಕಾಳುಮೆಣಸು ಅಥವಾ ಕರಿಮೆಣಸು 'ಸಾಂಬಾರು ಪದಾರ್ಥಗಳ ರಾಣಿ' ಎನ್ನಿಸಿಕೊಂಡಿದೆ. ಕೆಲವು ತಿನಿಸುಗಳಲ್ಲಿ ಕರಿಮೆಣಸು ಇದ್ದರೇನೇ ರುಚಿ ಹೆಚ್ಚು. ಉದಾಹರಣೆಗೆ, ಪೊಂಗಲ್. ಕರಿಮೆಣಸನ್ನು ಬೆಳೆಯುವುದು ಸೀಮಿತ ಪ್ರದೇಶದಲ್ಲಾದರೂ ಅದು ಎಲ್ಲಾ ಕಡೆಗಳಲ್ಲಿಯೂ ದೊರೆಯುತ್ತದೆ. ಮಲೆನಾಡಿನ ಕೆಲವು ಕಡೆ, ವಿಶೇಷತಃ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಳಿಮೆಣಸು ಮಾಡುತ್ತಾರೆ! ಕಾಳುಮೆಣಸು ಹಣ್ಣಾಗುವವರೆಗೆ ಕಾದು, ಆ ನಂತರವೇ ಕಟಾವು ಮಾಡುತ್ತಾರೆ. ನೀರಿನಲ್ಲಿ ಚೆನ್ನಾಗಿ ನೆನೆಸಿ ಅದರ ಸಿಪ್ಪೆ ತೆಗೆದು ಒಣಗಿಸುತ್ತಾರೆ. ಬಿಳಿಬಣ್ಣದ ಕಾಳು ಮಾತ್ರ ಉಳಿದುಕೊಳ್ಳುತ್ತದೆ. ಹೀಗಾಗಿಯೇ ಇರಬೇಕು, ಅದನ್ನು 'ಬೋಳು ಕಾಳು' ಎಂದೂ ಕರೆಯುವುದು. ಅನೇಕ ಔಷಧಗಳಲ್ಲಿ ಇದನ್ನು ಬಳಸುತ್ತಾರೆ. ಅದರಲ್ಲೂ ನೆಗಡಿ, ಶೀತ ಕೆಮ್ಮು, ಕಫಕ್ಕೆ ಇದರ ಕಷಾಯ ಅತ್ಯುತ್ತಮ ಔಷಧ. ದೇಹ ತಣ್ಣಗಾದಾಗ ಬೆಚ್ಚಗಿಡುವಲ್ಲಿಯೂ ಇದು ಸಹಾಯ ಮಾಡುತ್ತದೆ. ಆದರೆ ಅತಿಸಾರವಾದಾಗ ಮಾತ್ರ ಬೋಳು ಕಾಳನ್ನಾಗಲೀ, ಕರಿಮೆಣಸನ್ನಾಗಲೀ ಕೊಡುವುದಿಲ್ಲ. ಇದು ಕರುಳಿನ ಭಾಗದಲ್ಲಿ ಚಲನೆ ಹೆಚ್ಚಿಸಿ ಭೇದಿಯನ್ನು ಉತ್ತೇಜಿಸುತ್ತದೆ ಎನ್ನುವ ನಂಬಿಕೆ. ಆದರೆ ಇದು ಸುಳ್ಳು ಎನ್ನುವುದನ್ನು ಇತ್ತೀಚಿನ ಸಂಶೋಧನೆಗಳು ನಿರೂಪಿಸಿವೆ.
ನ್ಯೂಯಾರ್ಕ್‌ನ ಮರ್ಸಿ ಮೆಡಿಕಲ್ ಸೆಂಟರ್‌ನ ಸಂಶೋಧಕರು ಈ ವಿಚಾರವಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ಆರೋಗ್ಯವಂತರಿಗೆ ಮಾತ್ರೆಗಳ ರೂಪದಲ್ಲಿ ಮುಕ್ಕಾಲು ಚಮಚದಷ್ಟು ಕರಿಮೆಣಸು ತಿನ್ನಿಸಿದ್ದಾರೆ. ನಂತರ ಅವರ ಜೀರ್ಣಾಂಗಳ ಕಾರ್ಯವೈಖರಿ ಗಮನಿಸಿದಾಗ ಕರಿಮೆಣಸು ಕರುಳಿನ ಭಾಗದಲ್ಲಿನ ಚಲನೆಯನ್ನು ಹೆಚ್ಚಿಸುವ ಬದಲು, ನಿಧಾನಗೊಳಿಸಿದ್ದು ಕಂಡುಬಂದಿದೆ. ಅಲ್ಲಿಗೆ ಕರಿಮೆಣಸು ಭೇದಿಯನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಸುಳ್ಳಾಗಿದೆ.
ಈ ವರದಿಯಿಂದ ನಾವು ಕರಿಮೆಣಸು ಅತಿಸಾರವನ್ನು ನಿಲ್ಲಿಸುತ್ತದೆ ಎಂದು ಭಾವಿಸಿಕೊಳ್ಳಬೇಕಿಲ್ಲ. ಅಥವಾ ಅತಿಸಾರ ತಡೆಯಲು ಇದನ್ನು ಮದ್ದಿನ ರೂಪದಲ್ಲಿ ಬಳಸಬೇಕಾಗಿಯೂ ಅಲ್ಲ. ಆದರೆ, ಭೇದಿಯಿಂದ ಬಳಲುತ್ತಿರುವವರಿಗೆ ಕರಿಮೆಣಸಾಗಲಿ, ನಮ್ಮ ಬೋಳು ಕಾಳಾಗಲೀ ಯಾವುದೇ ತೊಂದರೆ ಉಂಟುಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಅತಿಸಾರಕ್ಕೆ ತುತ್ತಾದವರಿಗೆ ಕರಿಮೆಣಸು ಹಾಕಿ ಮಾಡಿದ ಆಹಾರ ನೀಡಿದರೆ ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಆಹಾರ ತಜ್ಞರು ಮಾತ್ರವಲ್ಲದೆ ಗ್ಯಾಸ್ಟ್ರೊಎಂಟರೊಲಾಜಿಸ್ಟ್‌ಗಳೂ ದೃಢಪಡಿಸಿದ್ದಾರೆ. ಏನೇ ಇರಲಿ, ಕರಿಮೆಣಸು ಭೇದಿಯನ್ನು ನಿಲ್ಲಿಸಬಲ್ಲದೇ ಎನ್ನುವ ಕುರಿತಂತೆ ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅಗತ್ಯವಂತೂ ಇದೆ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.