ಬೇಡವೆನ್ನಲು ವಾಸ್ತು ಮಾಟ ವಿದ್ಯೆಯಾ?
ವಾಸ್ತುಶಾಸ್ತ್ರ ಎನ್ನುವುದು ವೈದಿಕ ಸಂಪ್ರದಾಯದ ಆಧ್ಯಾತ್ಮಿಕತೆಯನ್ನು ಒಳಗೊಂಡ ಕಟ್ಟಡ ನಿರ್ಮಾಣ ವಿಜ್ಞಾನ. ಇದನ್ನು ಬೇಡ ಎಂದು ಹೇಳುವುದಕ್ಕೆ ಇದೇನು ಮಾಟ-ಮಂತ್ರವಲ್ಲ. ಈ ಶಾಸ್ತ್ರವು ಪುರಾತನ ವಿದ್ಯೆಯಾಗಿದೆ ಇದಕ್ಕೆ ಹಲವಾರು ಹೆಸರುಗಳಿವೆ. ಅವುಗಳೆಂದರೆ ವಾಸ್ತುಶಿಲ್ಪ ಶಾಸ್ತ್ರ, ವಾಸ್ತುವಿದ್ಯೆ, ವಾಸ್ತು ಇತ್ಯಾದಿ. ಇನ್ನೊಂದು 'ಯೋಗವಾಸ್ತು' ಎನ್ನುವುದು ಗರುಡ ಪುರಾಣದಲ್ಲೂ ಉಲ್ಲೇಖವಿದೆ. ವಾಸ್ತು ಬೇಡ ಎನ್ನುವವರು, ದೇವರು ಎಲ್ಲಿದ್ದಾರೆ? ಸ್ವರ್ಗ-ನರಕ ಎಲ್ಲಿದೆ? ಇವನ್ನೆಲ್ಲ ನೋಡಿದವರು ಯಾರಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಡಬಹುದು. ನಿಜ. ಹೀಗೆ ನಾದಿಸುವವರು ನಿನ್ನೆಯೂ ಇದ್ದರು, ಇಂದೂ ಇದ್ದಾರೆ, ನಾಳೆಯೂ ಇರುತ್ತಾರೆ. ಇದು ಅವರವರ ಭಾವಕ್ಕೆ ತಕ್ಕಂತೆ ದರ್ಶನ. ವಾಸ್ತುವನ್ನು ಅಳವಡಿಸಿಕೊಳ್ಳುವ ಮನಸ್ಸಿದ್ದವರು ಅಳವಡಿಸಿಕೊಳ್ಳಲಿ, ಇಲ್ಲದಿದ್ದರೆ ಬೇಡ. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ಹೆಚ್ಚಿನವರು ವಾಸ್ತುವನ್ನು ಅಳವಡಿಸಿಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಗೆ ಪ್ರಾಧಾನ್ಯತೆ ಇದೆ. ಆದ್ದರಿಂದ ವಾಸ್ತುವನ್ನು ಅಳವಡಿಸಿಕೊಂಡರೆ ಹಿತಕರ.
- ದೀಪಕ್ ಕಾಂಚನ್, ದಾವಣಗೆರೆ
ದೇವರಿಗಿಂತ ದೊಡ್ಡದೇನಲ್ಲ
ಅರವತ್ಕಾಲ್ಕು ವಿದ್ಯೆಗಳಲ್ಲಿ ವಾಸ್ತುವೂ ಒಂದು. ಕಟ್ಟಡ, ಮನೆ ಮೊದಲಾದವುಗಳನ್ನು ಕಟ್ಟುವಾಗ ವಾಸ್ತು ಬಳಸುತ್ತಾರೆ. ವಾಸ್ತುವಿನ ಬಗ್ಗೆ ನಂಬಿಕೆಯಿರಲಿ, ಆದರೆ ಅತಿಯಾದ ನಂಬಿಕೆ, ಮೂಢನಂಬಿಕೆಗಳು ಬೇಡ. 21ನೇ ಶತಮಾನದಲ್ಲೂ, ಅದೂ ಕಂಪ್ಯೂಟರ್ ಯುಗದಲ್ಲೂ ವಾಸ್ತುವಿನ ಬಗ್ಗೆ ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾವಂತರು, ರಾಜಕಾರಣಿಗಳು, ಹಣವಂತರು ಹೆಚ್ಚಾಗಿ ವಾಸ್ತುವನ್ನು ನಂಬುತ್ತಾರೆ. ಜೀವನದ ಸಕಲ, ಸಮಸ್ಯೆಗಳಿಗೂ ಮನೆಯ ವಾಸ್ತುವಿಗೂ ಸಂಬಂಧ ಕಲ್ಪಿಸುತ್ತಾರೆ. ನಮಗೆ ಕಷ್ಟಗಳು ಬರುವುದು ಅಹಂಕಾರ, ಸೋಮಾರಿತನ, ದುರಾಸೆ, ಅನುಮಾನ, ದುಶ್ಚಟ, ದುರಾಲೋಚನೆಗಳಿಂದಲೇ ಹೊರತು ವಾಸ್ತುವಿನಿಂದಲ್ಲ. ನಮಗೆ ಯಾವುದು ಅನುಕೂಲವೋ ಅದೇ ವಾಸ್ತು. ನಾವು ನಂಬುವ ದೇವರಿಗಿಂತ ವಾಸ್ತು ದೊಡ್ಡದೇನಲ್ಲ. ಹುಟ್ಟು ಸಾವನ್ನು ಗೆಲ್ಲದೇ ಇರುವ ಸಾಮಾನ್ಯ ಮನುಷ್ಯರು ವಾಸ್ತುಪುರುಷನನ್ನು ಗೆಲ್ಲುವ ನಂಬಿಕೆ ಹುಟ್ಟಿಸಿ ಹಣದೋಚುತ್ತಾರೆ. ನಮ್ಮ ಕರ್ಮಗಳಿಗೆ ಭಗವಂತ ಶಿಕ್ಷೆ ನೀಡಿದರೆ ಅನುಭವಿಸಲೇಬೇಕು ಮತ್ತು ಭಗವಂತನಲ್ಲೇ ಮೊರೆಯಿಡಬೇಕು. ಆದ್ದರಿಂದ ನಮ್ಮ ಸಮಸ್ಯೆಗಳಿಗೆ ವಾಸ್ತು ಕಾರಣವಲ್ಲ.
- ವಿನೋದಾ ಕರಣಂ, ಬಳ್ಳಾರಿ
ಬದಲಾಗುವುದು ವಾಸ್ತುವಲ್ಲ, ವಿಚಾರ!
ಯಾವಾಗಲೂ ವಸ್ತು ಬದಲಾಗಿರುವುದಿಲ್ಲ, ವಿಚಾರ ಬದಲಾಗುತ್ತಿರುತ್ತದೆ. ನಾವು ತಿಳಿದಿರುವುದೇ ಅಂತಿಮವಲ್ಲ. ಹೀಗೆಯೇ ವಾಸ್ತುಶಾಸ್ತ್ರ ಕೂಡ. ಇಂದಿನ ಅಸಂಖ್ಯಾತ ಸಂಶೋಧನೆಗಳಿಗಿಂತ ಮೊದಲೇ ಈ ಎಲ್ಲಾ ಸತ್ಯಗಳ ಅಸ್ತಿತ್ವವಿತ್ತು. ಆದರೆ ಅವುಗಳ ಬಗ್ಗೆ ಸಂಶೋಧನೆ ಮಾಡಿ ನಾವು ತಿಳಿದುಕೊಂಡಿರುವುದು ಮಾತ್ರ ನಿಧಾನವಾಗಿದೆಯಷ್ಟೇ! ಇನ್ನೂ ತಿಳಿಯಬೇಕಾದ ಅಪಾರ ವಿಚಾರಗಳೆಲ್ಲವೂ ನಮಗೆ ಮೂಢನಂಬಿಕೆಗಳಾದರೆ ಆಶ್ಚರ್ಯವಿಲ್ಲ. ವಾಸ್ತುಶಾಸ್ತ್ರ ಕೂಡ ಇನ್ನೂ ಅರಗಿಸಿಕೊಳ್ಳಬೇಕಾಗಿರುವ ವಿಜ್ಞಾನ. ಭೂಮಿಯೂ ಕೂಡ ಒಂದು ಕಾಂತವಾಗಿದ್ದು, ಅದರ ಕಾಂತೀಯ ಬಲ ನಮ್ಮ ದಿನನಿತ್ಯದ ಬದುಕಿನಲ್ಲಿ ಪರಿಣಾಮ ಬೀರುತ್ತಿರುತ್ತದೆ. ನಮ್ಮ ಮನಸ್ಸಿನ ಬದಲಾವಣೆಗಳಿಗೆ ವಾಸ್ತು ಕೂಡ ಪರಿಣಾಮ ಬೀರುತ್ತದೆ. ಹೀಗಾಗಿ ನೆಮ್ಮದಿಯ ಬದುಕಿಗೆ ವಾಸ್ತು ಮುಖ್ಯ.
- ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

