ಬೈಟುಕಾಫಿ

ಮೊದಲ ಹಿಜಡಾ ಶಾಸಕಿ ಯಾರು ಗೊತ್ತಾ?

ಮೊದಲ ಹಿಜಡಾ ಶಾಸಕಿ ಯಾರು ಗೊತ್ತಾ?
Published On :

ಈಗ ಅವರು ಅಮಂಗಳರಲ್ಲ. ಸಮಾಜದ ಗೌರವಕ್ಕೆ ಪಾತ್ರರಾಗುತ್ತಿರುವ 'ಮಂಗಳಮುಖಿ'ಗಳು. ದಿನೇ ದಿನೇ ಇವರ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯರಿಗೆ ಸಿಗುವಂಥ ಸಕಲ ಸೌಲಭ್ಯಗಳೂ ಇವರಿಗೆ ದಕ್ಕುವ ವಾತಾವಾರಣ ನಿರ್ಮಾಣವಾಗುತ್ತಿದೆ. ಅದರಲ್ಲಿ ಮತದ ಹಕ್ಕು ಕೂಡ ಒಂದು. ಹಾಗಾದರೆ ಹಿಂದೆಂದಿಗೂ ಇಲ್ಲದಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇವರ 'ವೋಟ್ ಬ್ಯಾಂಕ್‌' ಮಹತ್ವ ಪಡೆದುಕೊಂಡಿದೆಯೇ? ಗೊತ್ತಿಲ್ಲ. ಆದರೆ, 'ನಾವೂ ಮತದಾರರೇ' ಎಂದು ಗಟ್ಟಿಯಾಗಿ ಧ್ವನಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮೇಲೆ ಜನಪ್ರತಿನಿಧಿಗಳ ಕಣ್ಣು ಬಿದ್ದಿದೆ.
ಆದರೆ, ಇದೇ ಸಮುದಾಯದಿಂದ ರಾಜಕಾರಣಕ್ಕೆ ಬಂದು ಎಂಎಲ್‌ಎ ಪಟ್ಟವನ್ನು ಅಲಂಕರಿಸಿದ ದೇಶದ ಮೊದಲ ಹಿಜಡಾ ಯಾರು ಗೊತ್ತೆ? ಆಕೆಯ ಹೆಸರು ಶಬ್ನಮ್ ಮೌಸಿ. ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವಳು. ತಂದೆ ಪೊಲೀಸ್ ಅಧಿಕಾರಿ. ಮಧ್ಯಪ್ರದೇಶದ ಶಾದೋಳ್- ಅನ್‌ಪೂರ್ ಜಿಲ್ಲೆಯ ಸುಹಾಗೋಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 1998ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿನ ವಿಜಯ ಮಾಲೆ ಧರಿಸಿದ ಶಬ್ನಮ್ ಮೌಸಿ, ಶಾಸಕಿ ಪಟ್ಟವನ್ನು ಅಲಂಕರಿಸಿದಳು. ವಿಶೇಷ ಎಂದರೆ, ಯಾವುದೇ ರಾಜಕೀಯ ಪಕ್ಷಗಳ ನೆರಳಿನಲ್ಲಿ ನಿಲ್ಲದೆ, ತಾನೇ ಜೀತಿ ಜಿತಾಯಿ ಪಾಲಿಟಿಕ್ಸ್ (ಜೆಜೆಪಿ) ಎನ್ನುವ ಪಕ್ಷವನ್ನು ಕಟ್ಟಿ ತಾನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎರಡು ವರ್ಷ ಪ್ರಾಥಮಿಕ ಶಾಲೆಯನ್ನಷ್ಟೇ ನೋಡಿರುವ ಶಬ್ನಮ್, ದೇಶದ 12 ಪ್ರಮುಖ ಭಾಷೆಗಳನ್ನು  ಮಾತನಾಡುತ್ತಾಳೆ. ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಯೇ ನನ್ನ ಗುರಿ ಎನ್ನುವ ಜೊತೆಗೆ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಯ ವಿರುದ್ಧ ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾಳೆ. 1998ರ ಹೊತ್ತಿಗೆ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾನದ ಹಕ್ಕು ಇಲ್ಲದ ಕಾರಣ, ಮತದಾರರ ಪಟ್ಟಿಯಲ್ಲಿ ತನ್ನನ್ನು ಮಹಿಳೆ ಎಂದು ನಮೂದಿಸಿದ್ದಾರೆ.
ಶಬ್ನಮ್ ಮೌಸಿ ಅವರ ಮತ್ತೊಂದು ವಿಶೇಷತೆ ಎಂದರೆ ಈಕೆಯ ಜೀವನವನ್ನು ಆಧರಿಸಿ ಹಿಂದಿಯಲ್ಲೊಂದು ಚಿತ್ರ ಮೂಡಿಬಂದಿದೆ. ಯೋಗೇಶ್ ಭಾರದ್ವಜ್ ನಿರ್ದೇಶನದಲ್ಲಿ 'ಶಬ್ನಮ್ ಮೌಸಿ' ಎಂಬ ಹೆಸರಿನಲ್ಲೇ ಚಿತ್ರ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ಶಬ್ನಮ್ ಅವರ ಪಾತ್ರದಲ್ಲಿ ಖ್ಯಾತ ಖಳನಟ ಅಶುತೋಷ್ ರಾಣಾ ಕಾಣಿಸಿಕೊಂಡಿದ್ದರು. ಸದ್ಯ ರಾಜಕೀಯದಿಂದ ಕೊಂಚ ಮಟ್ಟಿಗೆ ದೂರವಿರುವ ಶಬ್ನಮ್, ಲೈಂಗಿಕ ಅಲ್ಪಸಂಖ್ಯಾತರ ಹಾಗೂ ಹೆಚ್‌ಐವಿ ಸೋಂಕಿತರ ಪರ ಕೆಲಸ ಮಾಡುತ್ತಿದ್ದಾರೆ.

    ಲೈಂಗಿಕ ಅಲ್ಪಸಂಖ್ಯಾತರಿಗೂ ಮತದಾನದ ಹಕ್ಕು ನೀಡಬೇಕು ಎಂದು 1994ರಿಂದಲೇ ದೇಶದಲ್ಲಿ ಇವರ ಹೋರಾಟ ಶುರುವಾಗಿತ್ತು. ಕೊನೆಗೂ 2009ರಲ್ಲಿ ಇವರ ಹೋರಾಟಕ್ಕೆ ಗೆಲುವು ಸಿಕ್ಕಿತ್ತು.
    ಭಾರತದಲ್ಲಿ ಅಂದಾಜು 60 ಲಕ್ಷ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.
    ಜಗತ್ತಿನ ಹಿರಿಯಣ್ಣ ಅಮೆರಿಕದಲ್ಲೇ 3.5 ಕೋಟಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.
    ಕರ್ನಾಟಕದಲ್ಲಿ 3,400 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2000 ಮಂದಿ ಮತ ಚಲಾಯಿಸಿದ್ದರು.
    ಬಾಂಗ್ಲಾದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮತಗಳು ಒಂದು ಲಕ್ಷ ದಾಟಿದೆ.

= ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.