ಬೈಟುಕಾಫಿ

ಚಿಹ್ನೆ ನಿನ್ನ ಮುದ್ದಾಡುವೆ

ಚಿಹ್ನೆ ನಿನ್ನ ಮುದ್ದಾಡುವೆ
Published On :

ಪೊರಕೆ, ಸೈಕಲ್, ಆನೆ, ರೈಲು, ಲ್ಯಾಂಟರ್ನ್, ಕಮಲ, ಕೈ... ಇನ್ನೂ ಏನೇನೋ ಚಿಹ್ನೆಗಳು. ಕಸ ಗುಡಿಸೋಕೆ ಪೊರಕೆ ಹಿಡ್ಕೊಂಡ್ರೂ ಸಾಕು 'ನೀವು ಆಮ್ ಆದ್ಮಿನಾ?' ಅಂತ ಕೇಳ್ತಾರೆ. ಅಷ್ಟರಮಟ್ಟಿಗೆ ಕೆಲವು ಚಿಹ್ನೆಗಳು ಹವಾ ಸ್ಥಾಪಿಸಿಬಿಟ್ಟಿವೆ. ಹಸ್ತ ತೋರಿಸೋ ಹಾಗಿಲ್ಲ. ಕಾಂಗ್ರೆಸ್ ಚೇಲಾ ಇರ್ಬೇಕು ಅಂತ ಗುಮಾನಿಸುವರೇ ಹೆಚ್ಚು. ಬೈಕ್ ತಗೋಳೋಕೆ ಕಾಸಿಲ್ದೆ ಸೈಕಲ್ ಹೊಡೀತಿದ್ರೆ ಅವನನ್ನೂ ಪಕ್ಷದ ಪ್ರಚಾರಕ ಅಂತ ಅನುಮಾನಿಸೋ ಕಾಲಬಂದಿದೆ.
ಇರಲಿ, ಭಾರತದ ಚುನಾವಣಾ ಆಯೋಗದಲ್ಲಿ ಇನ್ನೂ ಹಲವಾರು ಚಿಹ್ನೆಗಳು ಹಾಗೇ ಬಿದ್ದಿವೆ. ನೇಗಿಲ ಹೊತ್ತ ರೈತ ನಮ್ಮ ಪಕ್ಷಕ್ಕೆ ಬೇಕು ಎಂದೆಲ್ಲಾ ಕಿತ್ತಾಡಿದ್ದು ಗೊತ್ತೇ ಇದೆ. ಚುನಾವಣಾ ಆಯೋಗದ ಬತ್ತಳಿಕೆಯಲ್ಲಿ ಬಿಕರಿಯಾಗದೇ ಭಿಕಾರಿಯಾಗಿ ಬಿದ್ದಿರುವ ಚಿಹ್ನೆಗಳಿವು.

ಬ್ರೆಡ್
ಬಡವರ ಬಂಧು ಎಂದೆನಿಸಿರುವ ಬ್ರೆಡ್ಡು ಅಡುಗೆ ಮಾಡದೆ ಸೋಂಬೇರಿಗಳಾಗಿರುವ ಬ್ರಹ್ಮಚಾರಿಗಳಿಗೆ ಬೇಕಂತೆ. ಆದರೆ ಯಾವ ರಾಜಕೀಯ ಪಕ್ಷಗಳಿಗೂ ಬೇಡ್ವಂತೆ. 'ರೋಟಿ, ಕಪಡಾ ಔರ್ ಮಕಾನ್‌' ಚುನಾವಣಾ ಸ್ಲೋಗನ್ ಆಗಿದ್ದರೂ ಬ್ರೆಡ್ ಮಾತ್ರ ಯಾರಿಗೂ ಬೇಡವಾಗಿದೆ.

ಕೇರಮ್ ಬೋರ್ಡ್
ಬೇಜಾರ್ ಕಳೆಯೋಕೆ ಹೆಣ್ಮಕ್ಳು ಮುಖಕ್ಕೆ ಬಳಿಯೋ ಪೌಡರನ್ನು ಕದ್ದು ತಂದು ಕೇರಂಬೋರ್ಡ್ ಮೇಲೆ ಚೆಲ್ಲಿ ನೈಸ್ ಮಾಡೋ ಹೈಕ್ಳು ಬೇಜಾನ್ ಇದ್ದಾರೆ. ಒಂಥರಾ 'ಸೋಮಾರಿ ಬೋರ್ಡ್‌' ಅಂದ್ರೂ ಭಾರಿ ಬೇಡಿಕೆ ಇರುವ ಆಟ ಕೇರಂ. ಎಲ್ಲರಿಗೂ ಸುಪರಿಚಿತವಾಗಿರುವ ಕೇರಂ ಬೋರ್ಡನ್ನು ಪಕ್ಷದ ಚಿಹ್ನೆ ಮಾಡಿಕೊಳ್ಳುವಲ್ಲಿ ಯಾರೂ ಮುಂದೆ ಬಂದಿಲ್ಲ.

ಫ್ರಾಕ್
ಹಿಂದೆ ಹುಡುಗಿಯರು ಹೆಚ್ಚಾಗಿ ಬಯಸುತ್ತಿದ್ದುದು ಫ್ರಾಕ್. ಈಗಿನವರು ಬಿಡಿ, ಹೇಳಿ ಸುಖವಿಲ್ಲ. ಮಾರುಕಟ್ಟೆಯಲ್ಲಿ ಫ್ರಾಕ್‌ನ ಬೇಡಿಕೆ ಕಡಿಮೆ ಆದಂತೆ ಯಾರು ತಾನೇ ಈ ಚಿಹ್ನೆಯತ್ತ ಮನಸ್ಸು ಮಾಡಿಯಾರು?

ಕೊಡಲಿ, ಗರಗಸ
ಕತ್ತರಿಸುವ ಸಾಧನಗಳಾಗಿರುವ ಕಾರಣದಿಂದಲೋ ಏನೋ ಈ ಚಿಹ್ನೆಗಳತ್ತ ಯಾರೂ ಸುಳಿದಿಲ್ಲ. ನಮ್ಮ ರಾಜಕಾರಣಿಗಳು ಪರಿಸರ ಪ್ರೇಮಿಗಳು, ಶಾಂತಿ ಪ್ರಿಯರು ಎಂಬುದು ಇದರಿಂದ ಸಾಬೀತಾಗುವುದಿಲ್ಲವೇ?

ಊರುಗೋಲು
ವಯಸ್ಸಾದವರ ಪಾಲಿನ ಆಪ್ತಮಿತ್ರ. ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರಾಜಕಾರಣಕ್ಕೆ ಹೇಳಿ ಮಾಡಿಸಿದ ಚಿಹ್ನೆ. ಚಿಹ್ನೆಯಲ್ಲೇ ಪ್ರಬಲ ಸಂದೇಶ ನೀಡುವ ಊರುಗೋಲಿನ ಕೈ ಹಿಡಿಯಲು ಯಾರೂ ಮುಂದೆ ಬಾರದಿರುವುದು ವಿಪರ್ಯಾಸ.


ಲೇಡಿ ಪರ್ಸ್
ವ್ಯಾನಿಟಿ ಬ್ಯಾಗ್ ತೂಗಿಸಿಕೊಳ್ಳದ ಯುವತಿಯರು ಕಾಣಸಿಗುವುದು ಅಪರೂಪ. ಹೆಗಲಲ್ಲಿ ವ್ಯಾನಿಟಿ ಬ್ಯಾಗ್ ಇರದಿದ್ದರೆ ತನ್ನ ಬ್ಯಾಗ್ ಹೊರುವ ಕೆಲಸವನ್ನು ಸಂಗಾತಿಗೆ ಕೊಟ್ಟಿರುತ್ತಾಳೆ ಎಂದೇ ಅರ್ಥ! ಸರ್ವರಿಗೂ... ಅಂದರೆ ಕಳ್ಳರನ್ನೂ ಸೇರಿಸಿ ಪರಿಚಿತವಾಗಿರುವ ಈ ಲೇಡಿಪರ್ಸನ್ನು ಚಿಹ್ನೆಯಾಗಿ ಯಾವ ಪಕ್ಷವೂ ತೆಗೆದುಕೊಂಡಿಲ್ಲ.

ತೆಂಗಿನಕಾಯಿ
ಸಣ್ಣ ತೆಂಗಿನ ಕಾಯಿ ಕೊಳ್ಳಬೇಕೆಂದರೂ 10 ರೂಪಾಯಿಗಿಂತ ಕಡಿಮೆಗೆ ಸಿಗುವುದಿಲ್ಲ. ದಿನನಿತ್ಯ ಬಳಕೆ ವಸ್ತುಗಳಲ್ಲಿ ಪ್ರಮುಖವಾಗಿರುವ ತೆಂಗಿನಕಾಯಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಲ್ಪ ಸಮಯ ಯಜಮಾನರಾಗಿದ್ದರು. ಸಂಭಾಳಿಸಲು ಕಷ್ಟವಾಗಿ 'ಮೋದಿ ಪ್ರಧಾನಿ ಮಾಡ್ಬೇಕು!' ಅಂತ ಹೊರಗೆ ಹೇಳುತ್ತ 'ತೆಂಗಿನ ಕಾಯಿ ಸಹವಾಸವೇ ಬೇಡ' ಅಂತ ಒಳಗೊಳಗೆ ಹಳಿಯುತ್ತ ಕೈ ಬಿಟ್ಟಿದ್ದು ಗೊತ್ತೇ ಇದೆ.

ಫ್ಯಾನ್
ಪ್ರತಿರಾಜಕಾರಣಿಗಳೂ ಏನಿಲ್ಲಾ ಎಂದರೂ ನೂರಾರು ಪುಡಾರಿ ಫ್ಯಾನ್‌ಗಳನ್ನು ಹೊಂದಿರುತ್ತಾರೆ. ಅವುರುಗಳಿಗೆ ನಾಯಕ ಎನಿಸಿಕೊಂಡವನು ಏನು ಹೇಳಿದರೂ ಸರಿಯೇ. ಆತನ ಹಿಂದೆ ಮುಂದೆ ಸುತ್ತುವುದೇ ಕೆಲಸ. ಇರಲಿ, ದಣಿದ ವ್ಯಕ್ತಿಗೆ ತಂಪಾದ ಗಾಳಿ ನೀಡುವ ಫ್ಯಾನ್ ಒಂದು ರೀತಿಯಲ್ಲಿ ರಾಜಕೀಯ ಪಕ್ಷಕ್ಕೆ ಹೇಳಿಮಾಡಿಸಿದ ಚಿಹ್ನೆ. ಶ್ರೀರಾಮುಲು ಫ್ಯಾನ್ ಮೂಲಕ ಮತದಾರರಿಗೆ ಸಾಕಷ್ಟು ಗಾಳಿ ಹಾಕಿದರು. ಸದ್ಯ ಗಾಳಿ ಹಾಕುವ ಕಾರ್ಯ ಬಿಟ್ಟು 'ಹೂ' ಮುಡಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಫ್ಯಾನ್‌ಗೆ ವಿದ್ಯುತ್ ನೀಡುವ ದುಬಾರಿ ರಾಜಕಾರಣಿ ಇನ್ನೂ ಮುಂದೆ ಬಂದಿಲ್ಲ.

ಪುಸ್ತಕ
ಆಶ್ಚರ್ಯದೊಂದಿಗೆ ಬೇಸರವೂ ಮೂಡುತ್ತದೆ. ಶಿಕ್ಷಣದ ಗುರುತಾಗಿರುವ ಪುಸ್ತಕವನ್ನು ಯಾರೂ ಮೂಸಿ ನೋಡದಿರುವುದು ವಿಪರ್ಯಾಸವೇ ಸರಿ. ಅಂತರ್ಜಾಲ ಇರುವಾಗ ಪುಸ್ತಕದತ್ತ ಯಾರು ಮನಸ್ಸು ಮಾಡಿಯಾರು ಎಂಬ ದೂರಾಲೋಚನೆ ಇರಬಹುದೇ?

ಚಮಚ
ಆ ಕಡೆಗೂ ಅಲ್ಲ, ಈ ಕಡೆಗೂ ಅಲ್ಲ ಎಂಬ ರೀತಿಯಲ್ಲಿ ವರ್ತಿಸುವವನಿಗೆ 'ಚಮಚ' ಅಂತ ಅಡ್ಡ ಹೆಸರಿಡುವುದು ರೂಢಿ. ಆಹಾರ ತಿನ್ನಿಸುವ ಪಾತ್ರ ನಿರ್ವಹಿಸುವುದರಿಂದ ಚಮಚಕ್ಕೆ ಅದರದ್ದೇ ಆದ ಸ್ಥಾನಮಾನವಿದೆ. ರಾಜಕೀಯ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ಉತ್ತಮ ಚಿಹ್ನೆ ಚಮಚ. ಒಂದು ಸಲ ಎನ್‌ಡಿಎಗೆ ಮತ್ತೊಂದು ಸಲ ಯುಪಿಎಗೆ ಬೆಂಬಲ ಸೂಚಿಸುವ ಪಕ್ಷಗಳಿಗೆ ಹೇಳಿಮಾಡಿಸಿದ ಚಿಹ್ನೆ ಚಮಚ!

- ಮಂಜುನಾಥ್ ಎಲ್. ಕೆ.,


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.