ಗೆಲ್ಲಿಸುವುದೇ ಕಾಬೂಲ್ ಖಡ್ಗ?

ಶ್ರೀರಂಗಪಟ್ಟಣದ ಗಂಜಾಂನಲ್ಲಿ ರಿಯಾಜ್ ಕಾಬೂಲ್ ಎಂಬುವವರ ಮನೆಯಲ್ಲಿ ಒಂದು ಕತ್ತಿಯಿದೆ. ಚುನಾವಣೆ ಸಂದರ್ಭದಲ್ಲಿ ಅನೇಕ ಅಭ್ಯರ್ಥಿಗಳು ಇಲ್ಲಿಗೆ ಭೇಟಿ ನೀಡಿ, ಮರದಿಂದ ಮಾಡಲಾಗಿರುವ ಈ ಖಡ್ಗವನ್ನು ಎತ್ತಿ ಹಿಡಿದು ದೇವರಲ್ಲಿ ಪ್ರಾರ್ಥನೆ ಮಾಡಿ ಹೋಗಿದ್ದಾರೆಂದು ಖಡ್ಗದ ಮಾಲೀಕ ರಿಯಾಜ್ ಹೇಳುತ್ತಾರೆ. ವಿಶೇಷವೆಂದರೆ, ಈ ಕಾಬೂಲ್ ಖಡ್ಗವನ್ನು ಹಿಡಿದವರೆಲ್ಲಾ ಶಾಸಕರು, ಮಂತ್ರಿಗಳು, ಸಂಸದರು ಆಗಿದ್ದಾರೆ!
ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ ಅನೇಕ ರಾಜಕೀಯ ಮುಖಂಡರು ಇಲ್ಲಿಗೆ ಧಾವಿಸಿ ಖಡ್ಗ ಎತ್ತಿ ಹಿಡಿದು ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರಂತೆ. ಸಿದ್ದರಾಮಯ್ಯ, ಮಹದೇವಪ್ಪ, ಅಂಬರೀಷ್, ಅಶೋಕ್ ಖೇಣಿ ಮುಂತಾದವರು ಈ ಕಾಬೂಲ್ ಖಡ್ಗವನ್ನು ಹಿಡಿದಿದ್ದರು. ಅವರೆಲ್ಲರೂ ಶಾಸಕರಾದರು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರು. ಮಹದೇವಪ್ಪ, ಅಂಬರೀಷ್ ಮಂತ್ರಿಗಳಾದರು. ರಿಜ್ವಾನ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಪರ್ಧಿಸಿದ್ದಾಗ ಜಯ ಬಯಸಿ ಇಲ್ಲಿಗೆ ಬಂದು ಹೋಗಿದ್ದರು. ಈಗ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ರಮ್ಯಾ ಕಳೆದ 7 ತಿಂಗಳ ಹಿಂದೆ ಖಡ್ಗವನ್ನು ಎತ್ತಿ ಹಿಡಿದು ಪ್ರಾರ್ಥಿಸಿದ್ದರಿಂದಲೇ ಸಂಸದರಾಗಿ ಆಯ್ಕೆಯಾದರಂತೆ. ಈ ಮಾತುಗಳಿಗೆಲ್ಲ ನಂಬಿಕೆಯೊಂದೇ ಸಾಕ್ಷಿ ಎನ್ನುತ್ತಾರೆ ಸ್ಥಳೀಯರು.
ಏನಿದು ಕಾಬೂಲ್ ಖಡ್ಗ?
ರಿಯಾಜ್ ತಾತ ಸುಮಾರು 100 ವರ್ಷಗಳ ಹಿಂದೆ ಕಾಬೂಲ್, ಮೆಕ್ಕಾದಿಂದ ಕೆಲವು ಮರದ ತುಂಡುಗಳನ್ನು ತಂದು, ಖಡ್ಗ ಮಾಡಿ ಪೂಜೆ ಮಾಡುತ್ತಾ ಬಂದಿದ್ದಾರೆ. ಮೂರು ತಲೆಮಾರುಗಳಿಂದ ಈ ಖಡ್ಗದಲ್ಲಿರುವ ದೈವಿ ಶಕ್ತಿಯನ್ನು ಬಿಂಬಿಸುತ್ತಲೇ ಬರಲಾಗಿದೆ. ಒಳ್ಳೆಯದಾಗುವಂತೆ ಮಾಡು ಎಂದು ಪ್ರಾರ್ಥಿಸಿ ಖಡ್ಗವನ್ನು ಎತ್ತಿದರೆ ಜಯ ಸಿಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ ಎನ್ನುತ್ತಾರೆ ರಿಯಾಜ್.
ರಮ್ಯಾ ಮತ್ತೆ ಚುನಾವಣೆಯ ಕಣದಲ್ಲಿದ್ದಾರೆ. ಸೋಮವಾರ ಶ್ರೀರಂಗಪಟ್ಟಣದಲ್ಲಿ ರೋಡ್ ಶೋ ನಡೆಸಿದ ನಂತರ ಗಂಜಾಂಗೆ ಬಂದು, ರಿಯಾಜ್ ಮನೆಯಲ್ಲಿರುವ ಕಾಬೂಲ್ ಖಡ್ಗವನ್ನು ಮತ್ತೆ ಎತ್ತಿ ಹಿಡಿದು, ಪ್ರಾರ್ಥಿಸಿ ಹೋಗಿದ್ದಾರೆ. ರಮ್ಯಾ ಪ್ರಾರ್ಥನೆ ಮತ್ತು ಖಡ್ಗದ ಮಹಿಮೆ ಸ್ಪಷ್ಟವಾಗಬೇಕಾದರೆ ಮೇ 17ರಂದು ಪ್ರಕಟವಾಗುವ ಫಲಿತಾಂಶವೇ ಸಾಕ್ಷಿಯಾಗಬೇಕು.
ಕಾಂಗ್ರೆಸ್ ಖಡ್ಗ
ಒಂದು ವೇಳೆ ಈಗಿನ ಲೋಕಸಭೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಇಲ್ಲಿಗೆ ಬಂದು ಖಡ್ಗ ಹಿಡಿದರೆ ಗೆಲವು ಯಾರಿಗೆ? ಹಾಗಾಗುವುದಿಲ್ಲ. ಇಲ್ಲಿ ಕಾಂಗ್ರೆಸ್ ನಾಯಕರಿಗೆ ಮಾತ್ರ ಖಡ್ಗ ಎತ್ತುವ ಅವಕಾಶ. ಇನ್ನು ಗೆಲ್ಲುವ ಮಾತೆಲ್ಲಿ? ಹಾಗಾದರೆ ಇದು ಕಾಬೂಲ್ ಖಡ್ಗವಲ್ಲ, ಕಾಂಗ್ರೆಸ್ ಖಡ್ಗವೇ ಎಂದಾಗ ಖಡ್ಗದ ಮಾಲೀಕರು ಮೌನವಾಗುತ್ತಾರೆ. <
-ಎಸ್. ರಾಘವೇಂದ್ರ ಗಂಜಾಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


