ಬಲು ಸುಲಭ ಕೆಫೀನ್ ತಲೆನೋವು ಪತ್ತೆ
ತಲೆನೋವಿನ ಬಗ್ಗೆ ಹೇಳುವಾಗ ಕೆಫೀನ್ ಕುರಿತು ಹೇಳದಿರಲು ಆದೀತೆ? ತಲೆನೋವು ಬಂದಾಗ ಸಾಮಾನ್ಯವಾಗಿ ನಾವೇನು ಮಾಡುತ್ತೇವೆ? ಒಂದು ಕಪ್ ಕಾಫಿ ಅಥವಾ ಚಹಾ ಕುಡಿಯುತ್ತೇವೆ. ಕೆಫೀನ್ ಕೊಂಚ ನೆಮ್ಮದಿ ನೀಡುವುದು ನಿಜ. 'ಕೆಫೀನ್ ತಲೆನೋವು' ಇದ್ದವರಿಗಂತೂ ಕೆಫೀನ್ ರಾಮಬಾಣ. ಏಕೆಂದರೆ ಅವರಲ್ಲಿ ತಲೆನೋವು ಕಾಣಿಸಿಕೊಳ್ಳಲು ಕೆಫೀನ್ ಕೊರತೆ ಸಹ ಕಾರಣವಾಗಿದ್ದಿರಬಹುದು! ನಿಯಮಿತವಾಗಿ ಕೆಫೀನ್ ಸೇವಿಸುವ ವ್ಯಕ್ತಿ ದಿನದಲ್ಲಿ ಸರಾಸರಿಗಿಂತ ಕೊಂಚ ಕಡಿಮೆ ಸೇವಿಸಿದರೂ (50ರಿಂದ 100 ಮಿಲಿಗ್ರಾಂ ಕಡಿಮೆಯಾದರೂ) ತಲೆನೋವು ಶುರುವಾಗುತ್ತದೆ. ಚಹಾ, ಕಾಫಿಗೆ ಆಡಿಕ್ಟ್ ಆಗಿರುವವರಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ ಇದು. ಒಮ್ಮೊಮ್ಮೆ ಹೊತ್ತಿಗೆ ಸರಿಯಾಗಿ ಚಹಾ, ಕಾಫಿ ಕುಡಿಯದಿದ್ದರೂ ಸಮಸ್ಯೆ ಆರಂಭ ಆಗುವುದುಂಟು.
ಕೆಫೀನ್ ಕೊರತೆಯಿಂದ ಬರುವ ತಲೆನೋವು ಗುರುತಿಸುವುದು ಸುಲಭ. ಮೊದಲು ಕಣ್ಣಿನ ಹಿಂಭಾಗದಲ್ಲಿ ಮೆಲ್ಲಗೆ ಶುರುವಾಗುವ ನೋವು, ಕ್ರಮೇಣ ಹಣೆ ಭಾಗ ಆವರಿಸಿಕೊಂಡು ತೀವ್ರತೆ ಪಡೆಯುತ್ತದೆ. ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡ ತಕ್ಷಣವೇ ಚಹಾ, ಕಾಫಿ ಕುಡಿಯುವುದು ಪರಿಣಾಮ ಬೀರಬಲ್ಲದು. ಈ ರೀತಿಯ ತಲೆನೋವಿನಿಂದ ಬಚಾವಾಗಬೇಕಿದ್ದರೆ ದೈನಂದಿನ ಕೆಫೀನ್ ಸೇವನೆ ಪ್ರಮಾಣದಲ್ಲಿ ಏರಿಳಿತ ಆಗದಂತೆ ನೋಡಿಕೊಳ್ಳುವುದು ಉತ್ತಮ.
ಇಲ್ಲೊಂದು ಸೂಕ್ಷ್ಮವುಂಟು. ಒಮ್ಮೊಮ್ಮೆ ನಿತ್ಯಕ್ಕಿಂತ ಅಧಿಕ ಕೆಫೀನ್ ಸೇವನೆಯೂ ತಲೆನೋವು ತರುತ್ತದೆ. ಅಂತಹ ಸಂದರ್ಭಗಳಲ್ಲಿ ಮತ್ತೆ ಕೆಫೀನ್ ಮೊರೆ ಹೋದರೆ ತೊಂದರೆ ಉಲ್ಬಣಿಸಬಹುದು. ಆದ್ದರಿಂದ ತಲೆನೋವು ಶುರುವಾದಾಗ ಆ ದಿನದ ನಿಮ್ಮ ಕೆಫೀನ್ ಸೇವನೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ಕೆಫೀನ್ ಇನ್ನೊಂದು ರೀತಿಯಲ್ಲೂ ತಲೆನೋವು ತರಬಹುದು. ಅದೆಂದರೆ ಪದೇಪದೆ ಚಹಾ, ಕಾಫಿ ಕುಡಿದು ಅಭ್ಯಾಸ ಇರುವುದಿಲ್ಲ. ಪರಿಸ್ಥಿತಿಯ ಅನಿವಾರ್ಯತೆಯಿಂದ ಕಡಿಮೆ ಅಂತರದ ಅವಧಿಯಲ್ಲಿ ಹೆಚ್ಚು ಕೆಫೀನ್ ಸೇವನೆ ಕೂಡ ತಲೆನೋವಿಗೆ ಕಾರಣವಾಗುತ್ತದೆ. ಇನ್ನು ಕೆಫೀನ್ ಅಲರ್ಜಿ ಇರುವವರು ಸೇವನೆ ಮಾಡಿದಾಗಲೂ ಈ ತೊಂದರೆ ಶುರುವಾಗುತ್ತದೆ.
ಕೆಫೀನ್ ಕೊರತೆ ಆದರೆ ಸೇವಿಸಬಹುದು. ಆದರೆ ಅಧಿಕ ಕೆಫೀನ್‌ನಿಂದ ತಲೆನೋವು ಬಂದರೆ ಶಮನ ಮಾಡಿಕೊಳ್ಳುವುದು ಹೇಗೆ? ಅದಕ್ಕೆ ಸುಲಭ ಪರಿಹಾರ ಎಂದರೆ ಜಾಸ್ತಿ ನೀರು ಕುಡಿಯುವುದು. ಎಷ್ಟು ಸಾಧ್ಯವೊ ಅಷ್ಟು ನೀರು ಕುಡಿಯಬೇಕು. ಒಂದೇಸಲ 2-3 ಗ್ಲಾಸ್ ಕುಡಿದರೂ ವಾಂತಿಯಾಗಿ ಆರಾಮದ ಅನುಭವ ಆಗುತ್ತದೆ. ಆಗಾಗ ಒಂದೊಂದು ಗ್ಲಾಸ್ ನೀರು ಕುಡಿದರೂ ನೋವು ಕಡಿಮೆಯಾಗುತ್ತದೆ. ಜತೆಗೆ ಚೆನ್ನಾಗಿ ನಿದ್ರೆ ಮಾಡಬೇಕು. ಅಧಿಕ ಕೆಫೀನ್‌ನಿಂದ ಬರುವ ತಲೆನೋವಿಗೆ ನಿದ್ದೆ ಸಹ ಮದ್ದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

